ದಾಬಕದಲ್ಲಿ ಲಿಂಗದೀಕ್ಷೆ, ಬಸವತತ್ವ ಸಮಾವೇಶ ಪಟ್ಟದ್ದೇವರಿಗೆ ಭವ್ಯ ಮೆರವಣಿಗೆ

 

ಇಷ್ಟಲಿಂಗವನ್ನು ಎಲ್ಲಿಂದಲೋ ತಂದು ಕಟ್ಟಿಕೊಳ್ಳುವುದಲ್ಲ 

 

ಔರಾದ್ : ಇಷ್ಟಲಿಂಗವನ್ನು ಎಲ್ಲಿಂದಲೋ ತಂದು ಕೊರಳಲ್ಲಿ ಕಟ್ಟಿಕೊಳ್ಳುವುದಲ್ಲ. ಅದು ಗುರುವಿನಿಂದ ಅನುಗ್ರಹ ರೂಪದಲ್ಲಿ ಭಕ್ತರಿಗೆ ದೊರೆಯಬೇಕು ಎಂದು ಬಸವಕಲ್ಯಾಣ ಅನುಭವ ಮಂಟಪ ಟ್ರಸ್ಟ್‌ ಅಧ್ಯಕ್ಷರಾದ ಡಾ. ಬಸವಲಿಂಗ ಪಟ್ಟದ್ದೇವರು ಹೇಳಿದರು. ತಾಲೂಕಿನ‌ ದಾಬಕಾ ಗ್ರಾಮದಲ್ಲಿ ಗುರುವಾರ ಲಿಂ. ಡಾ. ಚನ್ನಬಸವ ಪಟ್ಟದ್ದೇವರ ಜಯಂತಿ ನಿಮಿತ್ತ ಹಮ್ಮಿಕೊಂಡಿರುವ ಬಸವತತ್ವ ಸಮಾವೇಶ ಹಾಗೂ ಲಿಂಗದೀಕ್ಷೆ ನೀಡುವ ಪೂಜಾ ಕಾರ್ಯಕ್ರಮದಲ್ಲಿ 95 ಜನರಿಗೆ ದೀಕ್ಷೆ ಕೊಟ್ಟು ಆಶೀರ್ವನ ನೀಡಿದರು.

 

ಲಿಂಗವು ಗುರುವಿನ ಅನುಗ್ರಹ ದ್ರಷ್ಟಿ, ಸಂಯೋಜನೆ ಹಾಗೂ ಹಸ್ತ ಮಸ್ತಕ ಸಹಯೋಗದಿಂದ ದೊರೆಯುತ್ತದೆ. ಇದನ್ನು ಲಿಂಗದೀಕ್ಷೆ ಎಂದು ಕರೆಯುತ್ತಾರೆ. ದೀಕ್ಷೆಯು ಅಜ್ಞಾನದ ಅಂಧಕಾರದಿಂದ ಬಿಡುಗಡೆ ಮಾಡಿ, ಬೆಳಕಿನ ಕಡೆಗೆ ಮುನ್ನಡೆಸಲಿಕ್ಕೆ ಸಹಕಾರಿಯಾಗುತ್ತದೆ. ಆದ್ದರಿಂದ ದೀಕ್ಷೆ ಪಡೆದವರು ಗುರುಗಳು ನೀಡಿದ ಮಾರ್ಗದರ್ಶನವನ್ನು ಕಡ್ಡಾಯವಾಗಿ ಪಾಲಿಸಬೇಕು’ ಎಂದರು.

 

ವಚನಕಾರ ಶರಣರ ಪರಿಕಲ್ಪನೆಯಂತೆ, ಇಷ್ಟಲಿಂಗ ಪೂಜೆಯನ್ನು ಇಷ್ಟಲಿಂಗ

ಧರಿಸಿದವನೇ ಮಾಡಬೇಕು. ಬೇರೆ ಮತ್ತೊಬ್ಬರಿಂದ ಮಾಡಿಸಲು ಬರುವುದಿಲ್ಲ. ಭವಚಕ್ರದಿಂದ ತಪ್ಪಿಸಿಕೊಳ್ಳಬಯಸಿ, ಆಧ್ಯಾತ್ಮಿಕ ಜೀವನ ನಡೆಸಬಯಸುವ ಭಕ್ತ, ಸದ್ಗುರುವಿನ ಬಳಿ ಬಂದು ದೀಕ್ಷಾ ಮೂಲಕ ಇಷ್ಟಲಿಂಗ ಪಡೆಯಬೇಕು ಎಂದು ತಿಳಿಸಿದರು.

 

ಧರ್ಮದ ಆಚಾರ, ವಿಚಾರ ಸಂಸ್ಕೃತಿ ಉಳಿಯಬೇಕಾದರೆ ಪ್ರತಿಯೊಬ್ಬ ಲಿಂಗಾಯತರು ಲಿಂಗ ದೀಕ್ಷೆಯನ್ನು ಪಡೆದು ಅದರಂತೆ ನಡೆದುಕೊಳ್ಳಬೇಕೆಂದರು.

 

ಬಸವಾದಿ ಶರಣರು ಅಂಗದ ಮೇಲೆ ಲಿಂಗವ ಧರಿಸಿ ಪೂಜಿಸಿ ಪಾವನರಾದರು. ಗುರು ವಚನವಲ್ಲದೇ ಲಿಂಗವೆಂದೆನಿಸದು, ನೇಮವೆಂದೆನಿಸದು. ತಲೆಯಿಲ್ಲದ ಅಟ್ಟೆಗೆ ಪಟ್ಟವ ಕಟ್ಟುವ ವಿಷಯ ಭ್ರಷ್ಟರ ಮೆಚ್ಚುವನೆ ಕೂಡಲಸಂಗಮದೇವ ಎಂದು ಬಸವಣ್ಣನವರು ತಮ್ಮ ವಚನದಲ್ಲಿ ಹೇಳಿದ್ದಾರೆ ಎಂದು ಸ್ಮರಿಸಿದರು.

 

ಲಿಂಗ ಧರಿಸಿದವರಿಗೆ ಪಂಚ ಸೂತಕಗಳಿಲ್ಲ. ಅವರು ಸದಾ ಪವಿತ್ರರು. ಅದಕ್ಕಾಗಿ ಬಸವಾದಿ ಶರಣರು ಲಿಂಗವ ಪೂಜಿಸಿ ಲಿಂಗವೇ ತಾವಾದರೂ ಎಂದರು.

 

ಹಿರೇಮಠ ಶ್ರೀಗಳಾದ ಮಹಾಲಿಂಗ ದೇವರು ನೇತೃತ್ವ ವಹಿಸಿದರು. ಭಾರತೀಯ ಬಸವ ಬಳಗದ ಜಿಲ್ಲಾಧ್ಯಕ್ಷ ಡಾ. ಸಂಜೀವಕುಮಾರ ಜುಮ್ಮಾ ಪ್ರಾಸ್ತಾವಿಕ ಮಾತನಾಡಿದರು.

ಮುಖಂಡರಾದ ಶಂಕ್ರೆಪ್ಪ ಪಂಚರೆ ಅಧ್ಯಕ್ಷತೆ ವಹಿಸಿದರು. ಪ್ರಮುಖರಾದ ಪ್ರಕಾಶ ಘೂಳೆ, ಹಿರಿಯ ಪತ್ರಕರ್ತ ಶರಣಪ್ಪ ಚಿಟಮೇ, ಮಾಳಪ್ಪ ಮಳಿಗೆ, ಚಂದ್ರಕಾಂತ ಮಗಸಲೆ, ಕಲ್ಲಯ್ಯ ಸ್ವಾಮಿ, ಗುಂಡಪ್ಪ ಔರಾದೆ, ಸಂಗ್ರಾಮಪ್ಪ ಜಿರ್ಗೆ, ಸಂದೀಪ್ ಔರಾದೆ, ಆನಂದ ದ್ಯಾಡೆ, ಮಾದವಯ್ಯ ಸ್ವಾಮಿ, ಹಣಮಂತ ಮಳಗೆ, ಅಣ್ಣೆಪ್ಪ, ಸಂಗಮೇಶ ಬಿಲ್ದಾಳೆ, ಕಲ್ಲೇಶ ಉದಗೀರೆ, ಸಂಗಮೇಶ ತೇಗಂಪೂರೆ ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರು ಪಾಲ್ಗೊಂಡರು.

 

 

ಪಟ್ಟದ್ದೇವರಿಗೆ ಭವ್ಯ ಮೆರವಣಿಗೆ

 

ದಾಬಕಾ ಗ್ರಾಮಕ್ಕೆ ಡಾ.‌ಬಸವಲಿಂಗ ಪಟ್ಟದ್ದೇವರು ಆಗಮಿಸುತ್ತಿದಂತೆ ಗ್ರಾಮಸ್ಥರು ಅದ್ಧೂರಿಯಾಗಿ ಸ್ವಾಗತಿಸಿದರು. ಬಳಿಕ ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಭವ್ಯ ಮೆರವಣಿಗೆ ನಡೆಸಿದರು. ಮೆರವಣಿಗೆಯೂದ್ದಕ್ಕೂ ಶ್ರೀಗಳಿಗೆ ಜೈಕಾರ ಕೂಗಿದರು. ಭಜನೆ ಹಾಡುಗಳಿಗೆ ಯುವಕರು, ಮಹಿಳೆಯರು ಹೆಜ್ಜೆ ಹಾಕಿರುವುದು ಗಮನ ಸೆಳೆಯಿತು.

 

 

ಲಿಂಗಧಾರಣೆ ಮಹತ್ವ ಅರಿಯಿರಿ

 

ಗರ್ಭ ಸಂಸ್ಕಾರ, ಲಿಂಗಧಾರಣೆ ಹಾಗೂ ಲಿಂಗ ದೀಕ್ಷೆ ಪ್ರತಿಯೊಬ್ಬ ಲಿಂಗಾಯತರಿಗೆ ಅತಿ ಅಗತ್ಯವಾದ ಪ್ರಕ್ರಿಯೆ. ಆದರೆ ಅನೇಕರು ಇದನ್ನು ಪಾಲಿಸುತ್ತಿಲ್ಲ . ಮಗು 8 ತಿಂಗಳ ಗರ್ಭದಲ್ಲಿ ಇರುವಾಗಲೇ ಗರ್ಭ ಸಂಸ್ಕಾರ ಮಾಡಬೇಕು. ಇದು ಗರ್ಭದಲ್ಲಿರುವ ಮಗುವಿಗೆ ಇಷ್ಟಲಿಂಗ ನೀಡುವ ಪದ್ಧತಿಯಾಗಿದೆ. ಮಗು ಹುಟ್ಟಿದ ನಂತರ ಲಿಂಗಧಾರಣೆ ಮಾಡುವುದರೊಂದಿಗೆ ನಾಮಕರಣ ಮಾಡಬೇಕೆಂದರು.

 

ವರದಿ : ರಾಚಯ್ಯ ಸ್ವಾಮಿ 

error: Content is protected !!