ಔರಾದ್ : ಪಟ್ಟಣದ ಎಪಿಎಂಸಿಯಲ್ಲಿ ಅನಧಿಕೃತ ಲೇಔಟ್ ಮಾಡಿ ಮಾರಾಟ ಮಾಡಲಾಗುತ್ತಿದೆ. ಇದನ್ನು ಯಾರು ಖರೀದಿ ಮಾಡುವಂತಿಲ್ಲ ಎಂದು ಎಪಿಎಂಸಿ ಕಾರ್ಯದರ್ಶಿ ಸಂತೋಷಕುಮಾರ ಮುದ್ದಗೊಂಡ ತಿಳಿಸಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿದ ಅವರು, ಬೀದರ-ನಾಂದೇಡ್ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ 2 ಎಕರೆ ಎಪಿಎಂಸಿ ಜಮೀನು ಹತ್ತಿ ಬೆಳೆಗಾರರ ಮಾರಾಟಕ್ಕಾಗಿ ಸಾಯಿ ಜಿನ್ನಿಂಗ್ ಮಿಲ್ ಅವರಿಗೆ ಲೀಸ್ ಕಂ ಸೇಲ್ ಆಧಾರದ ಮೇಲೆ ಹಂಚಿಕೆ ಮಾಡಲಾಗಿತ್ತು. ಆದರೆ ಈದೀಗ ಸಾಯಿ ಜಿನ್ನಿಂಗ್ ಮಿಲ್ ಸಂಸ್ಥೆಯವರು ಹಂಚಿಕೆ ಮಾಡಿರುವ ಜಮೀನಿನಲ್ಲಿ ಅಕ್ರಮ ಲೇಔಟ್ ಮಾಡುವ ಮೂಲಕ ನಿವೇಶನ ಮಾರಾಟ ಮಾಡುತ್ತಿರುವ ಬಗ್ಗೆ ತಿಳಿದು ಬಂದಿದೆ. ಜಮೀನು ಹತ್ತಿ ಬೆಳೆದ ರೈತರಿಗೆ ಅನುಕೂಲವಾಗಬಹುದೆಂಬ ದೃಷ್ಟಿಯಿಂದ ಹಂಚಿಕೆ ಮಾಡಿದೆ. ಆದರೆ ಸಂಸ್ಥೆಯವರು ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ ಅಧಿನಿಯಮ 1966 ನಿಮಯಗಳು ಹಾಗೂ ಸಮಿತಿಯು ವಿಧಿಸುವ ಷರತ್ತು, ನಿಬಂಧನೆಗಳನ್ನು ಸ್ಪಷ್ಟವಾಗಿ ಉಲ್ಲಂಘನೆ ಮಾಡಿದೆ ಎಂದು ತಿಳಿಸಿದ್ದಾರೆ. ಕೃಷಿ ಮಾರಾಟ ಇಲಾಖೆಯ ನಿರ್ದೇಶಕರು ಹಂಚಿಕೆ ಮಾಡಲಾದ 2 ಎಕರೆ ಜಮೀನನ್ನು ನಿಯಮಾನುಸಾರ ತೆರವುಗೊಳಿಸಲು ಸೂಚಿಸಿದ್ದು, ಮುಂದಿನ ಕಾನೂಯ ಕ್ರಮ ಕೈಕೊಳ್ಳಲಿದೆ. ಆದ್ದರಿಂದ ಸಾರ್ವಜನಿಕರು ಜಮೀನು ಖರೀದಿಸಿದ್ದಲ್ಲಿ ಹಾಗೂ ಅದನ್ನು ವರ್ಗಾವಣೆ ಮಾಡಿದಲ್ಲಿ ಅದು ಕಾನೂನು ಬಾಹಿರವಾಗಿರುತ್ತದೆ. ಇದಕ್ಕೆ ಎಪಿಎಂಸಿ ಸಮಿತಿ ಜವಾಬ್ದಾರಿಯಾಗಿರುವದಿಲ್ಲ ಎಂದು ಎಪಿಎಂಸಿ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವರದಿ : ರಾಚಯ್ಯ ಸ್ವಾಮಿ