ಘಮಸುಬಾಯಿ ತಾಂಡಾ ಬೋಂತಿಯಲ್ಲಿರುವ ಇಚ್ಛಾಪೂರ್ತಿ ಮಾತಾ ಜಗದಂಬಾ ದೇವಸ್ಥಾನದ 16ನೇ ಜಾತ್ರಾ ಮಹೋತ್ಸವ ಫೆಬ್ರವರಿ 10ರಿಂದ 12ರ ವರೆಗೆ ಅದ್ದೂರಿಯಾಗಿ ನಡೆಯಲಿದೆ ಎಂದು ಮಾಜಿ ಸಚಿವರು ಹಾಗೂ ಔರಾದ(ಬಿ) ಶಾಸಕರಾದ ಪ್ರಭು.ಬಿ ಚವ್ಹಾಣ ಅವರು ತಿಳಿಸಿದ್ದಾರೆ.
ಔರಾದ(ಬಿ) ಶಾಸಕರ ಕಛೇರಿ ಸಭಾಂಗಣದಲ್ಲಿ ಫೆ.6ರಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, 2009ರಿಂದ ಸಂತ ಡಾ.ರಾಮರಾವ ಮಹಾರಾಜರ ಅಮೃತ ಹಸ್ತದಿಂದ ಆರಂಭವಾದ ಜಾತ್ರೆಯನ್ನು ಪ್ರತಿ ವರ್ಷ ಅದ್ದೂರಿಯಾಗಿ ನಡೆಸಲಾಗುತ್ತಿದೆ. ಈ ವರ್ಷ ಇಚ್ಛಾಪೂರ್ತಿ ಮಾತಾ ಜಗದಂಬಾ ದೇವಸ್ಥಾನ ಟ್ರಸ್ಟ್ ವತಿಯಿಂದ ಜಾತ್ರೆ ನಡೆಯಲಿದೆ.
ಮುಖ್ಯ ಅತಿಥಿಗಳಾಗಿ ಧರ್ಮಗುರು ಪೌರಾದೇವಿಯ ಪೂಜ್ಯ ಬಾಬುಸಿಂಗ್ ಮಹಾರಾಜರು, ಭಾಲ್ಕಿ ಹಿರೇಮಠ ಸಂಸ್ಥಾನದ ಪೂಜ್ಯ ಡಾ.ಬಸವಲಿಂಗ ಪಟ್ಟದೇವರು, ಮಹಾರಾಷ್ಟ್ರದ ಮುಖೇಡ ಶಾಸಕರಾದ ಡಾ.ತುಷಾರ ಗೋವಿಂದರಾವ ರಾಠೋಡ್, ಪೂಜ್ಯ ಶಿವಾನಂದ ಶಿವಾಚಾರ್ಯರು, ಪೂಜ್ಯ ಶಿವಲಿಂಗೇಶ್ವರ ಶಿವಾಚಾರ್ಯರು, ಶಿವಾಚಾರ್ಯರು ಹೆಡಗಾಪೂರ, ಪೂಜ್ಯ ಗುರುಬಸವ ಪಟ್ಟದೇವರು, ಪೂಜ್ಯ ಸಿದ್ದಲಿಂಗ ಮಹಾಸ್ವಾಮಿ, ಪೂಜ್ಯ ಶಂಭುಲಿಂಗ ಶಿವಾಚಾರ್ಯರು, ಪೂಜ್ಯ ಚಂದ್ರಶೇಖರ ಶಿವಾಚಾರ್ಯರು, ಪೂಜ್ಯ ಮುರಲಿ ಮಹಾರಾಜರು, ಪೂಜ್ಯ ಮಹಾದೇವಿ ಅಮ್ಮ, ಪೂಜ್ಯ ಝಾಪಾ ಮಹಾರಾಜರು, ಗೋವಿಂದ ಮಹಾರಾಜರು ಧನ್ನೂರ ಸೇರಿದಂತೆ ವಿವಿಧ ಧರ್ಮಗುರುಗಳು, ಜನಪ್ರತಿನಿಧಿಗಳು ಹಾಗೂ ಮುಖಂಡರು ಭಾಗವಹಿಸಲಿದ್ದಾರೆ.
ಫೆ.10ರಂದು ಪೂಜೆ, ಅರ್ಚನೆ, ಅಭಿಷೇಕ, ಹೋಮ-ಹವನಗಳು ಸೇರಿದಂತೆ ವಿವಿಧ ಧಾರ್ಮಿಕ ಕೈಂಕರ್ಯಗಳು.
ಫೆ.11ರ ಬೆಳಗ್ಗೆ 11.30ಕ್ಕೆ ಸೇವಾಲಾಲ ಮಹಾರಾಜರು, ಸಂತ ಡಾ.ರಾಮರಾವ ಮಹಾರಾಜರು ಹಾಗೂ ಮಾತಾ ಜಗದಂಬಾ ದೇವಿಯ ಧ್ವಜಾರೋಹಣ ಕಾರ್ಯಕ್ರಮ. ಬೆಳಗ್ಗೆ 8ರಿಂದ ಸಂಜೆ 5ರ ವರೆಗೆ ವೈಭವದ ಜಾನಪದ ಉತ್ಸವ ಜರುಗಲಿದೆ. ಸಂಜೆ 7ರಿಂದ ಬಂಜಾರಾ ಕಲಾವಿದರಿಂದ ಭಜನೆ ಕಾರ್ಯಕ್ರಮ. ಫೆ.12ರ ಮಧ್ಯಾಹ್ನ 2ರಿಂದ ಜಂಗಿ ಕುಸ್ತಿ ಪಂದ್ಯಾವಳಿಗಳನ್ನು ಆಯೋಜಿಸಿದ್ದು, ಅಂತರರಾಷ್ಟ್ರೀಯ ಮಟ್ಟದ ಕುಸ್ತಿಪಟುಗಳು ಆಗಮಿಸಲಿದ್ದಾರೆ. ವಿಜೇತರಿಗೆ ಪ್ರಥಮ ಬಹುಮಾನವಾಗಿ 11,001 ಹಾಗೂ ದ್ವಿತಿಯ ಬಹುಮಾನವಾಗಿ 7001 ನಗದು ಮತ್ತು ಪ್ರಮಾಣ ಪತ್ರಗಳನ್ನು ವಿತರಿಸಲಾಗುತ್ತದೆ.
ಕಲ್ಯಾಣ ಕರ್ನಾಟಕ ಭಾಗದ ಕಲಾವಿದರು ಭಾಗಿ :
ಜಾತ್ರೋತ್ಸವದ ನಿಮಿತ್ತ ನಡೆಯಲಿರುವ ಜಾನಪದ ಸಂಭ್ರಮ ಕಾರ್ಯಕ್ರಮದಲ್ಲಿ ಜಿಲ್ಲೆ, ತಾಲ್ಲೂಕು ಸೇರಿದಂತೆ ಕಲ್ಯಾಣ ಕರ್ನಾಟಕ ವಿವಿಧ ಭಾಗಗಳಿಂದ ಕಲಾವಿದರು ಆಗಮಿಸಲಿದ್ದಾರೆ.
ರಾಯಚೂರಿನಿಂದ ಹಗಲು ವೇಶ ಮತ್ತು ವೀರಗಾಸೆ ಕಲಾ ತಂಡಗಳು, ಶಹಾಪೂರನಿಂದ ಚಿಕ್ಕ ಹಲಗೆ ತಂಡ, ಬಳ್ಳಾರಿಯಿಂದ ಖ್ಯಾತ ಕುಚಿಪುಡಿ ಕಲಾವಿದ ಬಸವರಾಜ ಮಯೂರಿ, ಬೀದರ್‌ನ ಬರೂರ್‌ನಿಂದ ಚರ್ಮವಾದ್ಯ, ಚಿಟಕಿ ಭಜನೆ ತಂಡಗಳು, ರಾಜಕುಮಾರ ಸ್ವಾಮಿ ಅವರಿಂದ ಜಾನಪದ ಗಾಯನ ಹೀಗೆ ವಿವಿಧ ಕಲಾ ತಂಡಗಳು ಆಗಮಿಸಲಿದ್ದು, ಜಾನಪದ ಗಾಯನ, ನೃತ್ಯ, ಭಕ್ತಿಗೀತೆ, ಕೋಲಾಟ, ಭಜನೆ, ಕೀರ್ತನೆಯಂತಹ ವೈವಿದ್ಯಯಮ ಸಾಂಸ್ಕೃತಿಕ ಚಟುವಟಿಕೆಗಳು ನಡೆಯಲಿವೆ.
ಗಡಿ ಭಾಗದಲ್ಲಿ ನಮ್ಮ ಕಲೆ, ಸಂಸ್ಕೃತಿಯನ್ನು ಉಳಿಸಿ ಬೆಳೆಸಬೇಕೆಂಬ ಸದುದ್ದೇಶದೊಂದಿಗೆ ಪ್ರತಿ ವರ್ಷ ಜಾನಪದ ಉತ್ಸವವನ್ನು ಹಮ್ಮಿಕೊಂಡು ಕಲಾವಿದರಿಗೆ ಪ್ರೋತ್ಸಾಹ ನೀಡುವ ಜೊತೆಗೆ ಈ ಭಾಗದಲ್ಲಿ ಜಾನಪದ ಕಲೆಯನ್ನು ಉಳಿಸಿ ಬೆಳೆಸುವ ಪ್ರಯತ್ನ ನಡೆದಿದೆ. ಜಾನಪದ ಗಾಯನಕ್ಕೆ ಹೆಸರುವಾಸಿಯಾಗಿರುವ ಮತ್ತು ಬಿಗ್‌ಬಾಸ್ ವಿಜೇತ ಹನುಮಂತ ಲಮಾಣಿ ಅವರನ್ನು ಆಹ್ವಾನಿಸಿದ್ದು, ಜಾತ್ರೆಯಲ್ಲಿ ಸುಮಾರು 30 ಸಾವಿರಕ್ಕೂ ಜನ ಆಗಮಿಸುವ ನಿರೀಕ್ಷೆಯಿದೆ ಎಂದು ತಿಳಿಸಿದರು.
ಇಷ್ಠಾರ್ಥಗಳನ್ನು ಪೂರೈಸುವ ದೇವತೆ:
ಮಾತಾ ಜಗದಂಬಾ ದೇವಿ ಬಹಳಷ್ಟು ಶಕ್ತಿಶಾಲಿ ದೇವತೆಯಾಗಿದ್ದು, ಕಷ್ಟವೆಂದು ಬರುವ ಎಲ್ಲ ಭಕ್ತಾದಿಗಳ ಸಮಸ್ಯೆ ನಿವಾರಿಸುತ್ತಾಳೆ. ಮನೆಯಲ್ಲಿ ಅಶಾಂತಿಯಂತಹ ನಾನಾ ರೀತಿಯ ಸಮಸ್ಯೆಗಳೊಂದಿಗೆ ಭಕ್ತರು ಆಗಮಿಸಿ ವರದಾನ ಪಡೆದ ಉದಾಹರಣೆಗಳು ಸಾಕಷ್ಟಿವೆ. ಪವಾಡಗಳಿಗೆ ಹೆಸರುವಾಸಿಯಾಗಿರುವ ದೇವಸ್ಥಾನಕ್ಕೆ ಕರ್ನಾಟಕ, ಮಹಾರಾಷ್ಟ್ರ, ತೆಲಂಗಾಣಾದಿಂದ ಸಾವಿರಾರು ಸಂಖ್ಯೆಯಲ್ಲಿ ಆಗಮಿಸುತ್ತಾರೆ.
ನಾನು ನಾಲ್ಕು ಬಾರಿ ಶಾಸಕನಾಗಲು ದೇವಿಯ ಆಶೀರ್ವಾದವಿದೆ. ರಾಜಕೀಯ ಮತ್ತು ವೈಯಕ್ತಿಕ ಜೀವನದಲ್ಲಿ ಎದುರಾಗುವ ಎಲ್ಲ ಸಂಕಷ್ಟಗಳಿಗೆ ದೇವತೆ ಪರಿಹರಿಸುತ್ತಾಳೆ. ಸಂಕಷ್ಟದೊಂದಿಗೆ ಬಂದು ದೇವರ ಮೊರೆ ಹೋಗುವ ಭಕ್ತಾದಿಗಳ ಮುಖ ಅರಳಿಸುವ ಶಕ್ತಿ ದೇವತೆಯಲ್ಲಿದೆ. ಆದ್ದರಿಂದ ಜಾತ್ರಾ ಮಹೋತ್ಸವದಲ್ಲಿ ಹೆಚ್ಚಿನ ಸಂಖ್ಯೆಯ ಜನ ಆಗಮಿಸಿ ಮಾತೆಯ ಕೃಪೆಗೆ ಪಾತ್ರರಾಗಬೇಕೆಂದು ಶಾಸಕರು ಕೋರಿದ್ದಾರೆ.
ಈ ಸಂದರ್ಭದಲ್ಲಿ ಮುಖಂಡರಾದ ರಾಮಶೆಟ್ಟಿ ಪನ್ನಾಳೆ, ಧೊಂಡಿಬಾ ನರೋಟೆ, ದಯಾನಂದ ಘೂಳೆ, ರಾಮ ನರೋಟೆ, ಸಂಜು ವಡೆಯರ್, ಶಿವರಾಜ ಅಲ್ಮಾಜೆ, ಬಾಬು ಪವಾರ್, ಬನ್ಸಿಲಾಲನಾಯಕ್, ಗುಂಡು ಮುಧಾಳೆ, ಕೇರಬಾ ಪವಾರ್ ಸೇರಿದಂತೆ ಇತರರಿದ್ದರು.
ವರದಿ : ರಾಚಯ್ಯ ಸ್ವಾಮಿ