ಭೀಮಾತೀರದ ಹಂತಕ ಬಾಗಪ್ಪ ಹರಿಜನ್​ ಬರ್ಬರ ಹತ್ಯೆ

ವಿಜಯಪುರ ನಗರದ ರೇಡಿಯೋ ಕೇಂದ್ರದ ಬಳಿ ಘಟನೆ

 

ವಿಜಯಪುರ: ಭೀಮಾತೀರದ ಕುಖ್ಯಾತ ಹಂತಕ ಚಂದಪ್ಪ ಹರಿಜನ್ ಖಾಸಾ ಖಾಸಾ ಶಿಷ್ಯ, ನಟೋರಿಯಸ್ ರೌಡಿ ಬಾಗಪ್ಪ ಹರಿಜನ್ ಹತ್ಯೆಯಾಗಿದ್ದಾನೆ. ವಿಜಯಪುರ ನಗರದ ರೇಡಿಯೋ ಕೇಂದ್ರದ ಬಳಿ ಘಟನೆ ನಡೆದಿದೆ. ಬಾಗಪ್ಪನನ್ನು ಹಂತಕರು ಭೀಕರವಾಗಿ ಹತ್ಯೆಗೈದಿದ್ದಾರೆ.

ಭೀಮಾತೀರದ ಕುಖ್ಯಾತ ಹಂತಕ ಬಾಗಪ್ಪ ಹರಿಜನ್ ಹತ್ಯೆ ಮಾಡಲಾಗಿದೆ. ಇಂದು ವಿಜಯಪುರ ನಗರದ ರೇಡಿಯೋ ಕೇಂದ್ರದ ಬಳಿ ದುಷ್ಕರ್ಮಿಗಳು ಆತನ ಮೇಲೆ ಹಲ್ಲೆ ಮಾಡಿದ್ದು, ಪರಿಣಾಮ ಬಾಗಪ್ಪ ಹರಿಜನ್ ಸಾವನ್ನಪ್ಪಿದ್ದಾನೆ. ಬಾಗಪ್ಪ ಹರಿಜನನ ಹಣೆಯ ಭಾಗ, ಮುಖ, ಎದೆಗೆ ದುಷ್ಕರ್ಮಿಗಳು ಕೊಚ್ಚಿದು ಎಡಗೈಯನ್ನು ಸಹ ಕತ್ತರಿಸಿದ್ದಾರೆ.

ಸುಮಾರು 9:25ರ ಸಮಯಕ್ಕೆ ಘಟನೆ ನಡೆದಿದ್ದು, ಬಾಗಪ್ಪ ಹರಿಜನ್ ತಾನು ವಾಸವಿದ್ದ ಮನೆಯಿಂದ ಹೊರ ಬರುತ್ತಿದ್ದಂತೆ ಸುಮಾರು 6 ಜನರ ಗುಂಪು ಆತನ ಮೇಲೆ ಹಲ್ಲೆ ಮಾಡಿದೆ ಎಂದು ಹೇಳಲಾಗುತ್ತಿದೆ.

ಭೀಮಾತೀರದಲ್ಲಿ ಮತ್ತೆ ರಕ್ತದ ಓಕುಳಿ ಹರಿದಿದೆ. ಕೆಲ ದಿನಗಳಿಂದ ತಣ್ಣಗಿದ್ದ ಭೀಮೆಯ ಒಡಲಿಗೆ ಮತ್ತೆ ರುಧಿರದ ಅರ್ಪಣೆ ಆಗಿದೆ. ಈ ಹಿಂದೆ ಕೋರ್ಟ್ ಆವರಣದಲ್ಲಿಯೇ ಬಾಗಪ್ಪ ಹರಿಜನ್ ಮೇಲೆ ಫೈರಿಂಗ್ ನಡೆದಿತ್ತು. ಆದರೆ ಆಗ ಬಾಗಪ್ಪ ಬಚಾವ್ ಆಗಿದ್ದ. ಆದರೆ ಇದೀಗ ಹಂತಕರು ಆತನನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾರೆ.

ಸಿಂದಗಿ ಬ್ಯಾಡಗಿಹಾಳ ಗ್ರಾಮದ ಬಾಗಪ್ಪನ ಪಾತ್ರವು ಭೀಮಾ ತೀರದ ರಕ್ತ ಚರಿತ್ರೆಯಲ್ಲಿ ಬಲವಾಗಿತ್ತು. ಮಂಗಳವಾರ ರಾತ್ರಿ ಮನೆಯಲ್ಲಿದ್ದ ಬಾಗಪ್ಪನನ್ನು ಯಾರೋ ಕರೆದಿದ್ದಾರೆ. ಹೀಗಾಗಿ ಬಾಗಪ್ಪ ಹೊರಗಡೆ ಬಂದಿದ್ದಾಗ 5 ರಿಂದ 6 ಮಂದಿಯ ಜನರ ತಂಡ ದಾಳಿ ಕೊಚ್ಚಿ ಕೊಲೆ ಮಾಡಿದೆ ಎಂದು ತಿಳಿದು ಬಂದಿದೆ.

ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಈತ ಕೊಲೆಯ ಸುದ್ದಿ ಭೀಮಾ ತೀರದಲ್ಲಿ ಕಾಡಿಚ್ಚಿನಂತೆ ಹಬ್ಬಿದೆ. ಮಾವ ಚಂದಪ್ಪ ಹರಿಜನ್ ಮೂಲಕ ಅಪರಾಧ ಲೋಕಕ್ಕೆ ಕಾಲಿಟ್ಟಿದ್ದ ಜತೆಗೆ ಶಾರ್ಪ್ ಶೂಟರ್ ಸಹ ಎನಿಸಿಕೊಂಡಿದ್ದ.

ಯಾರಿದು ಈ ಬಾಗಪ್ಪ ಹರಿಜನ್?

ಭೀಮಾ ತೀರದ ಹಂತಕದ ಕುಖ್ಯಾತಿಯಲ್ಲಿ ಬಾಗಪ್ಪ ಹರಿಜನ ಕೂಡ ಒಬ್ಬ. ಈ ಹಿಂದೆ ಇಡೀ ಭೀಮಾತೀರವನ್ನು ನಡುಗಿಸಿದ್ದ ಚಂದಪ್ಪ ಹರಿಜನನ ಸಹೋದರ ಸಂಬಂಧಿ ಕೂಡ ಆಗಿರುವ ಬಾಗಪ್ಪ ಹರಿಜನ ಚಂದಪ್ಪ ಹರಿಜನನ ಬಲಗೈ ಬಂಟನಾಗಿದ್ದ. ಚಂದಪ್ಪನ ಸಾವಿನ ಬಳಿಕ ಕುಟುಂಬದಲ್ಲಿ ಉಂಟಾಗಿದ್ದ ಆಸ್ತಿ ಗಲಾಟೆ ಪ್ರಕರಣದಲ್ಲಿ ಬಾಗಪ್ಪ ಚಂದಪ್ಪನ ಸಹೋದರ ಬಸಪ್ಪ ಹರಿಜನ ಕೊಲೆ ಮಾಡಿದ ಆರೋಪ ಎದುರಿಸುತ್ತಿದ್ದ. ಆಲಮೇಲ ಪೊಲೀಸ್‌ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿತ್ತು. ಇದಲ್ಲದೆ ಗಾಂಧಿಚೌಕ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 2013ರಲ್ಲಿ ಬ್ಯಾಡಗಿಹಾಳ ಗ್ರಾಮದ ಬಸ್ ಕಂಡಕ್ಟರ್ ಲಾಳಸಂಗಿ ಎಂಬುವರ ಕೊಲೆ ಪ್ರಕರಣದಲ್ಲಿ ಬಾಗಪ್ಪ ಪ್ರಮುಖ ಪಾತ್ರಧಾರಿಯಾಗಿದ್ದು, ಈತನ ವಿರುದ್ಧ ಪ್ರಕರಣ ದಾಖಲಾಗಿತ್ತು.

ಗಾಂಧಿ ಚೌಕ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದ್ದು ಪೊಲೀಸರ ತನಿಖೆಯ ಬಳಿಕ ಮತ್ತಷ್ಟು ಮಾಹಿತಿ ಹೊರಬೀಳಬೇಕಿದೆ.

error: Content is protected !!