ರೈತರ ಸಮಗ್ರ ಅಭಿವೃದ್ಧಿಗೆ ಡಿಸಿಸಿ ಬ್ಯಾಂಕ್ ಬದ್ಧ – ಸಚಿವ ಶಿವಾನಂದ ಪಾಟೀಲ್

ಸಚಿವ ಶಿವಾನಂದ ಪಾಟೀಲ ಅಭಿಮತ l ಶಿವಣಗಿಯಲ್ಲಿ 47ನೇ ಶಾಖೆ ಉದ್ಘಾಟನೆ

 

ಹಡಗಲಿ: ವೈಜ್ಞಾನಿಕ ಬೆಳೆ ಬೆಳೆಯುವಂತೆ ಪ್ರೋತ್ಸಾಹ ನೀಡುವ ಮೂಲಕ ರೈತರ ಸಮಗ್ರ ಅಭಿವೃದ್ಧಿಗೆ ವಿಜಯಪುರ ಡಿಸಿಸಿ ಬ್ಯಾಂಕ್ ಬದ್ಧವಾಗಿದೆ ಎಂದು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಹೇಳಿದರು.

ಸಮೀಪದ ಶಿವಣಗಿ ಗ್ರಾಮದಲ್ಲಿ ಶುಕ್ರವಾರ ವಿಜಯಪುರ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿ. 47ನೇ ಶಾಖೆ ಉದ್ಘಾಟಿಸಿ ಅವರು ಮಾತನಾಡಿದರು.

ಇಲ್ಲೊಂದು ಡಿಸಿಸಿ ಬ್ಯಾಂಕ್ ಸ್ಥಾಪಿಸಬೇಕು ಎಂಬುದು ಶಿವಣಗಿ, ಕಗ್ಗೋಡ, ಹಡಗಲಿ ಮತ್ತಿತರ ಗ್ರಾಮಗಳ ರೈತರ ಬೇಡಿಕೆಯಾಗಿತ್ತು. ಇವರೆಲ್ಲ ವಿಜಯಪುರ ಡಿಸಿಸಿ ಬ್ಯಾಂಕ್ ಗೆ ಬರುವ ಅನಿವಾರ್ಯವಿತ್ತು. ಇದನ್ನು ತಪ್ಪಿಸಿ ರೈತರಿಗೆ ಅನುಕೂಲ ಕಲ್ಪಿಸಲು ಆರ್ ಬಿ ಐ ನಿಂದ ಮಾನ್ಯತೆ ಪಡೆದು ಶಿವಣಗಿಯಲ್ಲಿ ಶಾಖೆ ಆರಂಭಿಸಲಾಗಿದೆ. ನಮ್ಮ ಬ್ಯಾಂಕ್ ನಿಂದ ಶೂನ್ಯ ಬಡ್ಡಿ ದರದಲ್ಲಿ ರೈತರಿಗೆ ಸಾಲ ನೀಡಲಾಗುತ್ತಿದೆ. ಇದರ ಲಾಭ ಪಡೆದು ರೈತರು ವೈಜ್ಞಾನಿಕವಾಗಿ ಬೆಳೆ ಬೆಳೆದು ಅಭಿವೃದ್ಧಿ ಹೊಂದಬೇಕು ಎಂದರು.

ಡಿಸಿಸಿ ಬ್ಯಾಂಕ್ ವತಿಯಿಂದ 2.50 ಲಕ್ಷ ರೈತರಿಗೆ ಒಟ್ಟು 1865 ಕೋಟಿ ರೂ.ಸಾಲ ನೀಡಲಾಗಿದೆ. ಪ್ರತಿ ರೈತರಿಗೆ 65 ಸಾವಿರ ರೂ.ನೀಡುತ್ತಿದ್ದ ಸಾಲವನ್ನು ಈ ವರ್ಷ 75 ಸಾವಿರ ರೂ.ಗೆ ಹೆಚ್ಚಿಸಲಾಗಿದ್ದು, ಹೆಚ್ಚುವರಿಯಾಗಿ 200 ಕೋಟಿ ರೂ.ಬೆಳೆ ಸಾಲ ನೀಡಲು ಬ್ಯಾಂಕ್ ಕ್ರಮ ಕೈಗೊಂಡಿದೆ. ಸಕ್ಕರೆ ಕಾರ್ಖಾನೆಗಳಿಗೂ ಸಾಲ ನೀಡಲಾಗಿದ್ದು 25 ಸಕ್ಕರೆ ಕಾರ್ಖಾನೆಗಳಿಂದ ಬ್ಯಾಂಕಿಗೆ 748 ಕೋಟಿ ರೂ.ಸಾಲ ಬರಬೇಕಿದೆ. ನಮ್ಮ ಬ್ಯಾಂಕ್ ವತಿಯಿಂದ ಯುಪಿಐ ಸೌಲಭ್ಯವನ್ನೂ ಆರಂಭಿಸಲಾಗಿದ್ದು, ಗ್ರಾಹಕರಿಗೆ ರೈತರಿಗೆ ಸಾಕಷ್ಟು ಅನುಕೂಲ ಕಲ್ಪಿಸಲಾಗಿದೆ ಎಂದರು.

ಶಿವಣಗಿ ಗ್ರಾಪಂ ಅಧ್ಯಕ್ಷೆ ಶಾಂತಾಬಾಯಿ ಭರತನೂರ, ಶಿವಣಗಿ ವಿವಿಧೋದ್ದೇಶ ಪಿಕೆಪಿಎಸ್ ಅಧ್ಯಕ್ಷ ಯುನೂಸ್ ಕಾರ್ನಾಳ, ಹಡಗಲಿ ವಿವಿಧೋದ್ದೇಶ ಪಿಕೆಪಿಎಸ್ ಅಧ್ಯಕ್ಷ ಅಶೋಕ ಪಾಟೀಲ, ಎಂ.ಸಿ.ಮುಲ್ಲಾ, ಟಿ.ಕೃಷ್ಣಮೂರ್ತಿ, ಭಾಗ್ಯಶ್ರೀ ಎಸ್.ಕೆ., ವಿಕಾಸ ರಾಠೋಡ, ಚೇತನ ಭಾವಿಕಟ್ಟಿ ಸೇರಿದಂತೆ ಮತ್ತಿತರರಿದ್ದರು.

 

ವರದಿ : ರವಿ ಚೌಹಾಣ್