ಕಾಮಗಾರಿ ಸ್ಥಳಕ್ಕೆ ಶಾಸಕ ಪ್ರಭು ಚವ್ಹಾಣ ದಿಢೀರ್ ಭೇಟಿ

ಖೇರ್ಡಾ-ಚಿಕ್ಲಿ(ಯು) ಬಾರ್ಡರ್ ರಸ್ತೆ ಗುಣಮಟ್ಟ ಪರಿಶೀಲನೆ

ಕಮಲನಗರ ತಾಲ್ಲೂಕಿನ ದಾಬಕಾ(ಸಿ) ಗ್ರಾಮದಲ್ಲಿ ನಡೆಯುತ್ತಿರುವ ಖೇರ್ಡಾನಿಂದ ಚಿಕ್ಲಿ(ಯು) ಮಹಾರಾಷ್ಟç ಬಾರ್ಡರ್‌ವರೆಗಿನ ರಸ್ತೆ ಕಾಮಗಾರಿ ಸ್ಥಳಕ್ಕೆ ಮಾಜಿ ಸಚಿವರು ಹಾಗೂ ಶಾಸಕರಾದ ಪ್ರಭು.ಬಿ ಚವ್ಹಾಣ ಅವರು ಫೆ.16ರಂದು ದಿಢೀರ್ ಬೇಟಿ ನೀಡಿ ಕೆಲಸದ ಗುಣಮಟ್ಟ ಪರಿಶೀಲಿಸಿದರು.

ರಸ್ತೆಯ ಮೇಲೆ ಸಂಚರಿಸಿ ಕೆಲಸದ ಗುಣಮಟ್ಟದ ಬಗ್ಗೆ ತಿಳಿದುಕೊಂಡರು. ಸ್ಥಳೀಯರಿಂದಲೂ ಮಾಹಿತಿ ಪಡೆದುಕೊಂಡರು. ಕಾಮಗಾರಿ ಅಂದಾಜು ಪಟ್ಟಿಯಲ್ಲಿ ಇರುವಂತೆ ಆಗಬೇಕು. ಗುಣಮಟ್ಟದಿಂದ ಮತ್ತು ನಿಗದಿತ ಅವಧಿಯೊಳಗೆ ಕಾಮಗಾಗಿ ಮುಗಿಸಬೇಕು. ಡಾಂಬರೀಕರಣ, ಕ್ಯೂರಿಂಗ್ ಸರಿಯಾಗಿ ಆಗಬೇಕು. ರಸ್ತೆಯ ಬಗ್ಗೆ ಜನರಿಂದ ಯಾವುದೇ ರೀತಿಯ ದೂರುಗಳು ಬಾರದ ಹಾಗೆ ಅಚ್ಚುಕಟ್ಟಾಗಿ ಕೆಲಸ ಮಾಡಬೇಕು. ಇಲ್ಲವಾದಲ್ಲಿ ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎಂದು ಎಚ್ಚರಿಸಿದರು.

ದಾಬಕಾ(ಸಿ) ದೊಡ್ಡ ಗ್ರಾಮವಾಗಿದ್ದು, ಚಿಕ್ಲಿ(ಯು), ಗಂಗನಬೀಡ ಸೇರಿದಂತೆ ಸಾಕಷ್ಟು ಗ್ರಾಮಗಳ ಜನತೆಯ ಪ್ರಮುಖ ರಸ್ತೆಯಾಗಿದೆ. ಹಾಗೆಯೇ ಮಹಾರಾಷ್ಟçದ ಉದಗೀರಗೆ ಸಂಪರ್ಕಿಸುವ ರಸ್ತೆಯಾಗಿದ್ದರಿಂದ ಸಾಕಷ್ಟು ಪ್ರಯಾಣಿಕರು ಸಂಚರಿಸುತ್ತಾರೆ. ಎಲ್ಲರಿಗೂ ಅನುಕೂಲವಾಗಬೇಕೆಂಬ ಉದ್ದೇಶದಿಂದ 8.5 ಕೋಟಿ ಅನುದಾನ ನೀಡಿ ಉತ್ತಮ ರಸ್ತೆಯನ್ನು ನಿರ್ಮಿಸಲಾಗುತ್ತಿದೆ ಎಂದು ಹೇಳಿದರು.

ದಾಬಕಾ(ಸಿ) ಗ್ರಾಮದಲ್ಲಿ ಪುರಾತನ ಭವಾನಿ ದೇವಸ್ಥಾನವಿದ್ದು, ಅದ್ದೂರಿ ಜಾತ್ರೆ ನಡೆಯುತ್ತದೆ. ಕರ್ನಾಟಕವಲ್ಲದೇ ತೆಲಂಗಾಣಾ, ಮಹಾರಾಷ್ಟç ರಾಜ್ಯಗಳಿಂದ ಸಾಕಷ್ಟು ಭಕ್ತಾದಿಗಳು ಆಗಮಿಸುತ್ತಾರೆ. ಹಾಗಾಗಿ ಗ್ರಾಮವನ್ನು ಸುಂದರವಾಗಿ ಮಾಡುವ ಯೋಜನೆ ಹಾಕಿಕೊಂಡಿದ್ದೇನೆ. ರಸ್ತೆಯನ್ನು ಅಗಲೀಕರಣ ಮಾಡಿ ಡಿವೈಡರ್ ನಿರ್ಮಿಸಿ ಮಧ್ಯದಲ್ಲಿ ಅಲಂಕಾರಿಕ ವಿದ್ಯುತ್ ದೀಪಗಳನ್ನು ಅಳವಡಿಸುವುದಿದೆ. ಅವಶ್ಯಕತೆ ಇದ್ದರೆ ಇನ್ನಷ್ಟು ಅನುದಾನ ನೀಡಲಾಗುತ್ತದೆ ಎಂದರು.

ಈ ಹಿಂದೆ ಕೆಲಸ ಅರ್ಧಕ್ಕೆ ನಿಲ್ಲಿಸಿದ್ದರಿಂದ ಸಾರ್ವಜನಿಕರು ಸುಮಾರು ಎರಡು ವರ್ಷಗಳ ಕಾಲ ಸಾಕಷ್ಟು ತಾಪತ್ರಯ ಅನುಭವಿಸಿದ್ದರು. ಮುಂದೆ ಹಾಗಾಗಬಾರದು. ಕೆಲಸ ಪೂರ್ಣಗೊಳ್ಳುವವರೆಗೆ ಕಾಮಗಾರಿಯನ್ನು ಯಾವುದೇ ಕಾರಣಕ್ಕೂ ನಿಲ್ಲಿಸುವಂತಿಲ್ಲ ಎಂದು ಗುತ್ತಿಗೆದಾರರಿಗೆ ಖಡಕ್ಕಾಗಿ ಸೂಚಿಸಿದರು. ಸಂಬAಧಿಸಿದ ಅಧಿಕಾರಿಗಳು ಕೂಡ ಕೈಕಟ್ಟಿ ಕುಳಿತುಕೊಳ್ಳದೇ ಕೆಲಸ ನಡೆಯುವ ಸ್ಥಳಕ್ಕೆ ಆಗಾಗ ಭೇಟಿ ನೀಡಿ ಗಮನಿಸಬೇಕು. ಕೆಲಸ ಸರಿಯಾಗದೇ ಇದ್ದರೆ ತಾಸವು ಕೂಡ ಸಮಸ್ಯೆ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ಸಾರ್ವಜನಿಕರಲ್ಲಿ ಮನವಿ: ದಾಬಕಾ(ಸಿ) ಗ್ರಾಮದಲ್ಲಿ ಪ್ರಸಿದ್ದ ಭವಾನಿ ಮಂದಿರ ಇರುವುದರಿಂದ ಭಕ್ತಾದಿಗಳು ನಿರಂತರವಾಗಿ ಓಡಾಡುತ್ತಿರುತ್ತಾರೆ. ಧಾರ್ಮಿಕ ಸ್ಥಳದ ಜೊತೆಗೆ ಪ್ರವಾಸಿ ತಾಣವಾಗಿಸಿದಲ್ಲಿ ಸಾಕಷ್ಟು ಅನುಕೂಲಗಳಾಗುತ್ತವೆ. ಹಾಗಾಗಿ ಗ್ರಾಮವನ್ನು ಸುಂದರವಾಗಿಸಲು ಇನ್ನಿಲ್ಲದ ಪ್ರಯತ್ನಗಳನ್ನು ನಡೆಸಿದ್ದೇನೆ. ರಸ್ತೆಯ ಅಗಲೀಕರಣ ಅತ್ಯಂತ ಅವಶ್ಯಕತೆಯಿದ್ದು ರಸ್ತೆ ಬದಿಯಲ್ಲಿರುವ ಅಂಗಡಿ, ಹೋಟೆಲ್ ಮಾಲೀಕರು ರಸ್ತೆಯ ಜಾಗ ಬಿಡಬೇಕು. ರಸ್ತೆ ಬದಿಯಲ್ಲಿರುವ ತಿಪ್ಪೆಗುಂಡಿಗಳನ್ನು ತೆರವುಗೊಳಿಸಿ ಅಭಿವೃದ್ಧಿ ಕೆಲಸಕ್ಕೆ ಸಹಕರಿಸಬೇಕು ಎಂದಿದ್ದಾರೆ.

ಅಭಿವೃದ್ಧಿ ಸಹಿಸದ ಕೆಲವರು ರಸ್ತೆ ನಿರ್ಮಾಣ ಕೆಲಸಕ್ಕೆ ಅಡ್ಡಿಪಡಿಸುತ್ತಿರುವ ಬಗ್ಗೆ ಗಮನಕ್ಕೆ ಬಂದಿದೆ. ಸ್ಥಳೀಯರು ಇಂಥವುಗಳಿಗೆ ಅವಕಾಶ ಕೊಡದೇ ತಮ್ಮ ಗ್ರಾಮದ ಅಭಿವೃದ್ಧಿ ಕೆಲಸಗಳಿಗೆ ಸಹಕರಿಸಬೇಕು. ತಾವು ಕೆಲಸದ ಮೇಲೆ ನಿಗಾ ವಹಿಸಿ ಕಾಮಗಾರಿ ಅಚ್ಚುಕಟ್ಟಾಗಿ ನಡೆಯುವಂತೆ ನೋಡಿಕೊಳ್ಳಬೇಕು ಎಂದು ಶಾಸಕರು ಸಾರ್ವಜನಿಕರಲ್ಲಿ ಕೋರಿದರು. ಈ ಸಂದರ್ಭದಲ್ಲಿ ಗ್ರಾಮದ ಮುಖಂಡರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

 

ವರದಿ : ರಾಚಯ್ಯ ಸ್ವಾಮಿ 

error: Content is protected !!