ಔರಾದ್ : ಅಂತ್ಯೋದಯ ಮತ್ತು ಆದ್ಯತಾ ಪಡಿತರ ಚೀಟಿಗಳ ಫಲಾನುಭವಿಗಳಿಗೆ ನಗದು ಬದಲು ಇನ್ನು ಮುಂದೆ ಅಕ್ಕಿ ವಿತರಿಸಲಾಗುತ್ತಿದ್ದು, ಪಡಿತರ ಚೀಟಿದಾರರು ಅಕ್ಕಿಯನ್ನು ಮಾರಿದರೆ ಅವರ ಪಡಿತರ ಚೀಟಿಯನ್ನು ರದ್ದುಪಡಿಸಬೇಕು ಎಂದು ತಾಲೂಕಿನ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಚನ್ನಪ್ಪ ಉಪ್ಪೆ ಅಧಿಕಾರಿಗಳಿಗೆ ಸೂಚಿಸಿದರು. ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ನಡೆದ ಅನುಷ್ಠಾನ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಸರಕಾರ ಉಚಿತವಾಗಿ ನೀಡುತ್ತಿರುವ ಪಡಿತರ ಅಕ್ಕಿ ಕಾಳಸಂತೆಯಲ್ಲಿ ಮಾರಾಟವಾಗುತ್ತಿದೆ. ನ್ಯಾಯಬೆಲೆ ಅಂಗಡಿಯಲ್ಲಿ ಅಕ್ಕಿ ವಿತರಣೆ ಆರಂಭಿಸುತ್ತಿದ್ದಂತೆ ಖರೀದಿದಾರರೇ ನೇರವಾಗಿ ಮನೆಬಾಗಿಲಿಗೆ ಹೋಗುತ್ತಿದ್ದಾರೆ. ಅವರನ್ನು ನಿಯಂತ್ರಿಸುವಲ್ಲಿ ಅಧಿಕಾರಿಗಳು ವಿಫಲವಾಗಿದ್ದಾರೆಂದು ಅರೋಪಿಸಿದರು.
ಇದಕ್ಕೆ ಧ್ವನಿಜೋಡಿಸಿದ ಸದಸ್ಯರು ಈ ಆರೋಪ ಎಲ್ಲ ಕಡೆಯೂ ಕೇಳಿಬರುತ್ತಿದೆ. ಕಾಳಸಂತೆಯಲ್ಲಿ ಅಕ್ಕಿ ಮಾರಾಟ ಮಾಡುವವರ ಹಾಗೂ ಖರೀದಿ ಮಾಡುವ ವ್ಯಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಅಧಿಕಾರಿಗಳಿಗೆ ತಿಳಿಸಿದರು. ಮಾಹಿತಿ ಬರುವ ಕಡೆಗಳಲ್ಲಿ ದಾಳಿ ನಡೆಸಲಾಗುತ್ತಿದೆ. ತಮ್ಮ ಗಮನಕ್ಕೆ ಮಾರಾಟ, ಸಾಗಾಣಿಕೆ ಬಗ್ಗೆ ಮಾಹಿತಿ ಬಂದರೆ ಇಲಾಖೆಗೆ ತಿಳಿಸಿ ಕ್ರಮ ಜರುಗಿಸಲಾಗುತ್ತದೆ ಎಂದು ಆಹಾರ ಇಲಾಖೆಯ ಅಧಿಕಾರಿ ರವಿ ಪ್ರತಿಕ್ರಿಯೆ ನೀಡಿದರು.
ಪಡಿತರ ಅಕ್ಕಿಯ ಕಂಪ್ಯೂಟರ್ ಚೀಟಿಗೆ 20-50 ರೂ ಪಡೆಯುತ್ತಿದ್ದಾರೆ ಎಂದು ಸಮಿತಿಯ ಸದಸ್ಯ ಕೃಷ್ಣ ಕಾಂಬಳೆ ತಿಳಿಸಿದರು. ಅಂತಹ ವ್ಯಕ್ತಿಗಳ ಮೇಲೆ ಕ್ರಮ ಜರುಗಿದಲಾಗುತ್ತದೆ ಎಂದು ಅಧಿಕಾರಿ ರವಿ ಭರವಸೆ ನೀಡಿದರು.
ಸಿಡಿಪಿಒ ಇಮಲಪ್ಪ ಮಾತನಾಡಿ, ಗೃಹಲಕ್ಷ್ಮೀ ಯೋಜನೆಯಡಿ ತಾಲೂಕಿನ 35,171 ಫಲಾನುಭವಿಗಳು ಪ್ರತಿ ತಿಂಗಳು 7 ಕೋಟಿ 34 ಲಕ್ಷ ರೂ.ಗಳ ಜಮೆಯಾಗಿದ್ದು, ಈವರೆಗೆ ಸುಮಾರು 100 ಕೋಟಿ ರೂ. ಖಾತೆಗೆ ವರ್ಗಾವಣೆಯಾಗಿದೆ ಎಂದರು. ಇಲಾಖೆಯಿಂದ ಗೃಹಲಕ್ಷ್ಮಿ ಯೋಜನೆಯ ಬಗ್ಗೆ ಜಾಗೃತಿ ಮೂಡಿಸಲಾಗಿದೆ. ತಾಂತ್ರಿಕ ಸಮಸ್ಯೆಗಳು ಮೊದಲು ಬಂದಿದ್ದು, ಅವುಗಳನ್ನು ಬಗೆಹರಿಸಿ ಮಹಿಳೆಯರ ಸಮಸ್ಯೆಗಳಿಗೆ ಸ್ಪಂದಿಸಲಾಗಿದೆ ಎಂದರು.
ಔರಾದ್-ಬೀದರ ಮಾರ್ಗವಾಗಿ ಸರಿಯಾಗಿ ಬಸ್ ಸಂಚರಿಸುತ್ತಿಲ್ಲ. ನಿತ್ಯ ನಿಯಮದಂತೆ 95 ಬಾರಿ ಸಂಚರಿಸಬೇಕು ಆದರೆ 60 ಬಾರಿಯಷ್ಟು ಮಾತ್ರ ಸಂಚರಿಸುತ್ತಿವೆ ಎಂದು ಸದಸ್ಯ ಶಿವಕುಮಾರ ಪಾಟೀಲ್ ತಿಳಿಸಿದರು. ವಿದ್ಯಾರ್ಥಿಗಳಿಗೆ ಸಾಯಂಕಾಲ ಔರಾದ್ ಕಡೆಗೆ ಆಗಮಿಸಲು ಬಸ್ ಇರುವದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದರ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ ತರಲಾಗುತ್ತದೆ ಎಂದು ಸಿಬ್ಬಂದಿ ಅಣ್ಣಾರಾವ ತಿಳಿಸಿದರು. ಜಂಬಗಿಯಲ್ಲಿ ಬಸ್ ನಿಲ್ದಾಣ ಒತ್ತಿವರಿಯಾಗಿದೆ ಎಂದು ಸದಸ್ಯ ಸಲ್ಲಾವೋದ್ಧಿನ್ ದೂರಿದರು. ಕುಡಲೇ ಇದರ ಬಗ್ಗೆ ಮಾಹಿತಿ ನೀಡುವಂತೆ ಇಒ ಮಾಣಿಕರಾವ ಪಾಟೀಲ್ ಸೂಚಿಸಿದರು.
ಎಕ್ಸ್‌ಪ್ರೆಸ್ ಬಸ್ ಗಳು ಮುಸ್ತಾಪುರನಲ್ಲಿ ನಿಲ್ಲುತ್ತಿಲ್ಲ. ಎಲ್ಲ ಬಸ್ ಗಳು ನಿಲ್ಲುವಂತೆ ಮಾಡಬೇಕು ಎಂದರು.
ಗ್ಯಾರಂಟಿ ಸಭೆಯಲ್ಲಿ ಕಂಡು ಬಂದಿರುವ ಸಮಸ್ಯೆಗಳು ತ್ವರಿತವಾಗಿ ಬಗೆಹರಿಸಬೇಕು ಎಂದು ಸದಸ್ಯ ಚನ್ನಬಸವ ಬಿರಾದಾರ್ ತಿಳಿಸಿದರು.
ನ್ಯಾಯಬೆಲೆ ಅಂಗಡಿಯ ಪಡೆಯಲು ಇರುವ ನಿಯಮಗಳೇನು ಎಂದು ಸದಸ್ಯ ಡಿಕೆ ಚಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಅಧಿಕಾರಿ ರವಿ ಗ್ರಾಮೀಣ ಭಾಗದಲ್ಲಿ 300 ಕಾರ್ಡ್, ಪಟ್ಟಣದಲ್ಲಿ 500 ಕಾರ್ಡ್ ಕಡ್ಡಾಯವಿದೆ ಎಂದರು. ಎಷ್ಟು ಅರ್ಜಿ ಬಂದಿವೆ. ಯಾವ ಹಂತದಲ್ಲಿವೆ ಎಂದಾಗ ಅರ್ಜಿಗಳು ಬಂದಿರುವದಿಲ್ಲ ಎಂದು ರವಿ ಸ್ಪಷ್ಟಪಡಿಸಿದರು.
ವಿದ್ಯುತ್ ಕಡಿತವಾಗದಂತೆ ನೋಡಿಕೊಳ್ಳಬೇಕು ಎಂದು ಸಂಜುಕುಮಾರ ಉಜನಿ ತಿಳಿಸಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಜೆಸ್ಕಾಂ ಎಇಇ ರವಿ ಕಾರಬಾರಿ ದೂರುಗಳು ಬಂದಲ್ಲಿ ತ್ವರಿತವಾಗಿ ಸ್ಪಂದಿಸಲಾಗುತ್ತದೆ ಎಂದರು.
ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಉಪಾಧ್ಯಕ್ಷ ಬಾಳಸಾಬ್ ಪಾಟೀಲ್, ಶಂಕರ ಪಾಟೀಲ್, ಸಹಾಯಕ ನಿರ್ದೇಶಕ ಶಿವಕುಮಾರ ಘಾಟೆ ಸೇರಿದಂತೆ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿಯ ಸದಸ್ಯರು ಪಾಲ್ಗೊಂಡರು.
ವರದಿ : ರಾಚಯ್ಯ ಸ್ವಾಮಿ