ಔರಾದ್ : ಪರಿಶಿಷ್ಟ ಜಾತಿಯ ಬಲಗೈ ಸಮುದಾಯದ 29 ಜಾತಿಗಳಿಗೆ ಶೇ 6.50 ರಷ್ಟು ಮೀಸಲಾತಿ ಹಂಚಿಕೆ ಮಾಡಬೇಕು’ ಎಂದು ಒತ್ತಾಯಿಸಿ ಬೆಂಗಳೂರಿನಲ್ಲಿ ಒಳ ಮೀಸಲಾತಿಗೆ ಸಂಬಂಧಿಸಿದ ಏಕಸದಸ್ಯ ವಿಚಾರಣಾ ಆಯೋಗದ ಅಧ್ಯಕ್ಷ ನ್ಯಾ.ನಾಗಮೋಹನ್ ದಾಸ್ ಅವರಿಗೆ ಒಳ ಮೀಸಲಾತಿ ಹೋರಾಟ ಸಮಿತಿಯ ಪದಾಧಿಕಾರಿಗಳು ಮನವಿ ಪತ್ರ ಸಲ್ಲಿಸಿದ್ದಾರೆ.
ಬಲಗೈ ಸಮುದಾಯಕ್ಕೆ ಸಂಬಂಧಿಸಿದ ಅಂಕಿ–ಅಂಶ ತಪ್ಪಾಗಿದೆ. ಬಲಗೈ ಸಮುದಾಯದವರಿಗಿಂತ ಎಡಗೈ ಸಮುದಾಯದವರ ಜನಸಂಖ್ಯೆ ಹೆಚ್ಚಿನ ಪ‍್ರಮಾಣದಲ್ಲಿದೆ ಎನ್ನುವುದು ಸುಳ್ಳು. ಸದಾಶಿವ ಆಯೋಗದ ವರದಿಯಲ್ಲಿ ಕೆಲವರು ಉಪಜಾತಿ ನಮೂದಿಸಿಲ್ಲ ಎಂದು ತಿಳಿಸಲಾಗಿದೆ. ಉಪಜಾತಿ ನಮೂದಿಸಲಾರದವರನ್ನು ಎಡಗೈ ಎಂದು ಪರಿಗಣಿಸಲಾಗಿದೆ. ಕಾರಣ ಜನಸಂಖ್ಯೆ ಹೆಚ್ಚಿದೆ. ಆದ್ದರಿಂದ ಒಳ ಮೀಸಲಾತಿ ಹಂಚಿಕೆ ಸಂದರ್ಭದಲ್ಲಿ ಈ ಅಂಕಿ–ಅಂಶಗಳನ್ನು ಪರಿಗಣಿಸಬಾರದು ಎಂದು ಮನವಿಯಲ್ಲಿ ಆಗ್ರಹಿಸಿದ್ದಾರೆ.
ಈ ಹಿಂದಿನ ಬಿಜೆಪಿ ಸರಕಾರದ ಅವಧಿಯಲ್ಲಿ ರಚಿಸಲಾಗಿದ್ದ ಜೆ.ಸಿ.ಮಾಧುಸ್ವಾಮಿ ಅಧ್ಯಕ್ಷತೆಯ ಸಂಪುಟ ಉಪ ಸಮಿತಿಯು ಬಲಗೈ ಸಮುದಾಯಗಳು ಸರಕಾರಿ ಸೌಲಭ್ಯಗಳನ್ನು ಪಡೆದಿವೆ. ಆರ್ಥಿಕವಾಗಿ ಬಲಿಷ್ಠವಾಗಿವೆ ಎಂದು ಗ್ರೂಪ್–ಡಿಗೆ ಸೇರಿಸಿ ಶೇ 1ರಷ್ಟು ಮೀಸಲಾತಿ ನೀಡಲು ಶಿಫಾರಸು ಮಾಡಿತ್ತು’ ಎಂದು ತಿಳಿಸಿದ್ದಾರೆ.
ಇದರ ಬಗ್ಗೆ ಮತ್ತೊಮ್ಮೆ ಸಮೀಕ್ಷೆ ನಡೆಸಬೇಕು. ವಾಸ್ತವಿಕ ಅಂಕಿ–ಅಂಶ ಪಡೆದು ಅದರ ಆಧಾರದ ಮೇಲೆ ಒಳ ಮೀಸಲಾತಿ ನೀಡಬೇಕು. ಬಲಗೈ ಸಮುದಾಯಗಳಿಗೆ ಕನಿಷ್ಠ ಶೇ 6.5 ರಷ್ಟು ಮೀಸಲಾತಿ ಹಂಚಿಕೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ. ಸಮುದಾಯಲ್ಲಿ ಸುಮಾರು 38 ಲಕ್ಷ 86 ಸಾವಿರ ಜನಸಂಖ್ಯೆಯಿದೆ. ಇದನ್ನು ಅರಿತು ಸಮುದಾಯದ ಅಭಿವೃದ್ಧಿಗಾಗಿ ಮೀಸಲಾತಿ ನೀಡಬೇಕು ಎಂದು ಜಾತಿಗಳ ಒಳಮೀಸಲಾತಿ ಹೋರಾಟ ಸಮಿತಿ ತಾಲೂಕು ಅಧ್ಯಕ್ಷ ಶಿವಕುಮಾರ ಕಾಂಬಳೆ, ಕಾರ್ಯಾಧ್ಯಕ್ಷ ಪ್ರಕಾಶ ಬಂಗಾರೆ ಆಗ್ರಹಿಸಿದ್ದಾರೆ.
ವರದಿ : ರಾಚಯ್ಯ ಸ್ವಾಮಿ