ಜಂಬಗಿಯಲ್ಲಿ ಕಾನೂನು ಅರಿವು ಕಾರ್ಯಕ್ರಮ ಮಾದಕ ವಸ್ತುಗಳ ಸೇವನೆಯಿಂದ ದೂರವಿರಿ- ಬೀದರ್ ಹಿರಿಯ ಸಿವಿಲ್ ನ್ಯಾಯಾಧೀಶರಾದ ಪ್ರಕಾಶ ಅರ್ಜುನ ಬನಸೋಡೆ

ಔರಾದ್ : ಮದ್ಯ ಮತ್ತು ಮಾದಕ ವಸ್ತುಗಳ ಸೇವನೆಯಿಂದ ಆರೋಗ್ಯದ ಮೇಲೆ ಹಾನಿ ಉಂಟಾಗುತ್ತದೆ. ವ್ಯಸನ ಸಂಸಾರ ಹಾಗೂ ಸಮಾಜವನ್ನು ಹಾಳು ಮಾಡುತ್ತದೆ ಎಂದು ಬೀದರನ ಹಿರಿಯ ಸಿವಿಲ್ ನ್ಯಾಯಾಧೀಶರಾದ ಪ್ರಕಾಶ ಅರ್ಜುನ ಬನಸೋಡೆ ಹೇಳಿದರು. ತಾಲೂಕಿನ ಜಂಬಗಿ ಗ್ರಾಮದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಬೀದರ, ಜಿಲ್ಲಾ ವಕೀಲರ ಸಂಘ ಮತ್ತು ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಹಾಗೂ ಅಬಕಾರಿ ಇಲಾಖೆಯ ಸಹಯೋಗದಲ್ಲಿ ಗುರುವಾರ ನಡೆದ ಮದ್ಯಪಾನ ಮತ್ತು ಮಾದಕ ವಸ್ತುಗಳ ದುಷ್ಪರಿಣಾಮ ಅಂಗನವಾಗಿ ನಡೆದ ಕಾನೂನು ಅರಿವು ಮತ್ತು ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ವಿದ್ಯಾರ್ಥಿಗಳು ಹಾಗೂ ಯುವಕರು ಸಿಗರೇಟ್‌, ತಂಬಾಕು, ಮದ್ಯಪಾನ ಸೇರಿದಂತೆ ಮಾದಕ ವಸ್ತುಗಳ ಬಗೆಗಿನ ಕುತೂಹಲದಿಂದ ದೂರ ಉಳಿಯಿರಿ. ಕುತೂಹಲ ಹವ್ಯಾಸವಾಗಿ, ಚಟವಾಗಿ ಪರಿವರ್ತನೆಗೊಂಡು ತಮ್ಮ ಜೀವನವನ್ನೇ ಬಲಿ ತೆಗೆದುಕೊಳ್ಳುತ್ತದೆ ಎಂಬ ಎಚ್ಚರ ನಿಮಗಿರಲಿ ಎಂದು ಹೇಳಿದರು. ಯುವಕರ ಸಮೂಹ ಗಾಂಜಾ, ಅಫೀಮ್‌ ಸೇರಿದಂತೆ ಇತರೆ ಮಾದಕ ವಸ್ತುಗಳಿಗೆ ಬಲಿಯಾಗದೇ ಉತ್ತಮ ಹವ್ಯಾಸಗಳನ್ನು ಬೆಳೆಸಿಕೊಂಡು ದೈಹಿಕವಾಗಿ ಸಶಕ್ತರಾಗಿ ದೇಶ ಸೇವೆಗೆ ಮುಂದಾಗಬೇಕು ಎಂದರು.

ಔರಾದ್ ಹಿರಿಯ ಸಿವಿಲ್ ನ್ಯಾಯಾಧೀಶರಾದ ಹಾಜಿ ಹುಸೇನಸಾಬ ಯಾದವಾಡ ಮಾತನಾಡಿ, 15 ರಿಂದ 35 ವರ್ಷದೊಳಗಿನ ಯುವ ಸಮೂಹ ಮಾದಕ ವಸ್ತುಗಳಂತಹ ಚಟಗಳಿಗೆ ಹೆಚ್ಚಾಗಿ ಮಾರು ಹೋಗುತ್ತಾರೆ. ಮದ್ಯ ವ್ಯಸನಿಗಳಾಗಲು ಅವರ ಅನುವಂಶಿಯತೆಯೂ ಕಾರಣ. ಸುತ್ತಲಿನ ಪರಿಸರ, ವ್ಯಕ್ತಿತ್ವದ ಕೊರತೆ, ಮೋಜು ಸೇರಿದಂತೆ ಇತರ ನೆಪದಲ್ಲಿಯೂ ಕುಡಿತಕ್ಕೆ ದಾಸರಾಗುತ್ತಾರೆ. ಮದ್ಯ ಕುಡಿಯುವುದು ಹೆಚ್ಚಿದರೆ, ಮೆದುಳು ನಿಷ್ಕ್ರಿಯವಾಗುತ್ತದೆ. ಆಲ್ಕೋಹಾಲ್‌ನಿಂದಾಗಿ ದೈಹಿಕ, ಮಾನಸಿಕ, ಸಾಮಾಜಿಕ ಹಾಗೂ ಆರ್ಥಿಕವಾಗಿಯೂ ನಷ್ಟ ಅನುಭವಿಸಬೇಕಾಗುತ್ತದೆ. ಧೂಮಪಾನ ಮತ್ತು ಗುಟ್ಕಾದಿಂದಲೂ ದೇಹಕ್ಕೆ ಹಾನಿಯಿದೆ. ಯೋಗ, ವ್ಯಾಯಾಮ, ಸಂಗೀತ ಕೇಳುವುದು, ಚಿತ್ರ ಬಿಡಿಸುವುದು, ಹಾಡುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು ಎಂದರು.

ಬೀದರನ ಅಬಕಾರಿ ಉಪ ಆಯುಕ್ತ ರವಿಶಂಕರ ಎ. ಮಾತನಾಡಿ, ಮಾದಕ ವಸ್ತುಗಳನ್ನು ಹೊಂದುವುದು ಮತ್ತು ಅದನ್ನು ಸಾಗಣೆ ಮತ್ತು ಮಾರಾಟ ಮಾಡುವುದು ಅಪರಾಧ ಮತ್ತು ಅದಕ್ಕೆ ಕಠಿಣ ಶಿಕ್ಷೆ ಇದೆ ಎಂದು ಎಚ್ಚರಿಸಿದರು. ಮಾದಕ ವಸ್ತುಗಳ ಸೇವನೆ‌ಯಿಂದ ಸಮಾಜದಲ್ಲಿ ಗೌರವ ಕಳೆದುಕೊಳ್ಳುತ್ತಾರೆ ಮತ್ತು ಆರ್ಥಿಕವಾಗಿ ನಷ್ಟ ಉಂಟಾಗುತ್ತದೆ. ಯುವಕರು ಇಂತಹ ದುಶ್ಚಟಗಳಿಗೆ ಬಲಿಯಾಗಬಾರದು ಎಂದು ಸಲಹೆ ನೀಡಿದರು.

ಸಿವಿಲ್ ನ್ಯಾಯಧೀಶರಾದ ಅಭಿನಯ ಮಾತನಾಡಿದರು. ನ್ಯಾಯವಾದಿ ಜಿ.ಡಿ ಶ್ರೀಮಾಳೆ ಉಪನ್ಯಾಸ ನೀಡಿದರು. ತಾಲೂಕು ನ್ಯಾಯವಾದಿ ಸಂಘದ ಅಧ್ಯಕ್ಷ ಸಂದೀಪ ಮೇತ್ರೆ, ಅಬಕಾರಿ ಇನ್ಸ್ಪೆಕ್ಟರ್ ಶಬ್ಬೀರ್ ಬಿರಾದಾರ್, ಇನ್ಸ್ಪೆಕ್ಟರ್ ವಿಠ್ಠಲ್ ವಾಲಿ, ಅಬಕಾರಿ ಸಿಬ್ಬಂದಿಗಳಾದ ವಿಶ್ವನಾಥ ಸ್ವಾಮಿ, ಅರ್ಜುನ್ ಭೋಸ್ಲೆ, ಅನಿಲ ವಿಠ್ಠಲ್ ಸೇರಿದಂತೆ ಅನೇಕರಿದ್ದರು.

ವರದಿ : ರಾಚಯ್ಯ ಸ್ವಾಮಿ

error: Content is protected !!