ಕಪ್ಪುಪಟ್ಟಿ ಧರಿಸಿ ಪೌರ ನೌಕರರಿಂದ ಸಾಂಕೇತಿಕ ಪ್ರತಿಭಟನೆ

ಔರಾದ್ : ತಮ್ಮನ್ನು ಸರಕಾರಿ ನೌಕರರು ಎಂದು ಪರಿಗಣಿಸುವುದು, ಆರೋಗ್ಯ ಸಂಜೀವಿನಿ ಯೋಜನೆ ಜಾರಿಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಕರ್ನಾಟಕ ರಾಜ್ಯ ಪೌರ ನೌಕರರ ಸಂಘವು, ತೋಳಿಗೆ ಕಪ್ಪುಪಟ್ಟಿ ಧರಿಸಿ ಕೆಲಸ ಮಾಡುವ ಮೂಲಕ ಶನಿವಾರ ಸಾಂಕೇತಿಕ ಪ್ರತಿಭಟನೆ ಆರಂಭಿಸಿದೆ. ರಾಜ್ಯ ಪರಿಷತ್ತಿನ ಕಾರ್ಯಕಾರಣಿ ಸಭೆ ನಡೆಸಿದ್ದ ಸಂಘವು, ಬೇಡಿಕೆ ಈಡೇರಿಕೆಗಾಗಿ ಗಡುವು ಕೊಟ್ಟಿದೆ. ಈ ಅವಧಿಯಲ್ಲಿ ಕಪ್ಪುಪಟ್ಟಿ ಧರಿಸಿ ಕರ್ತವ್ಯ ನಿರ್ವಹಿಸುವುದು, ಸ್ಥಳೀಯ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಕೆ ಸೇರಿದಂತೆ ವಿವಿಧ ರೀತಿಯ ಪ್ರತಿಭಟನೆ ಮೂಲಕ ಸರಕಾರದ ಗಮನ ಸೆಳೆಯಲು ನೌಕರರಿಗೆ ಸೂಚನೆ ನೀಡಿದೆ. ಅದರಂತೆ ಔರಾದ್ ಪಟ್ಟಣದಲ್ಲಿಯೂ ಪೌರ ನೌಕರರು ಸಾಂಕೇತಿಕ ಪ್ರತಿಭಟನೆ ಆರಂಭಿಸಿದೆ ಎಂದು ಕರ್ನಾಟಕ ರಾಜ್ಯ ಪೌರ ನೌಕರರ ಸಂಘದ ಜಿಲ್ಲಾಧ್ಯಕ್ಷ ಸೈಯದ್ ಖಾನ್ ತಿಳಿಸಿದರು.

ಕಾರ್ಯಕಾರಣಿಯಲ್ಲಿ ಕೈಗೊಂಡ ನಿರ್ಣಯಗಳನ್ನು ಪೌರಾಡಳಿತ ನಿರ್ದೇಶನಾಲಯಕ್ಕೆ ಸಲ್ಲಿಸಿದ್ದೇವೆ. ಅದರ ಬೆನ್ನಲ್ಲೇ ರಾಜ್ಯದಾದ್ಯಂತ ಎಲ್ಲಾ ಸ್ಥಳೀಯ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವ ಪೌರ ನೌಕರರು ಕಪ್ಪುಪಟ್ಟಿ ಧರಿಸಿ ಕೆಲಸ ಮಾಡುವ ಮೂಲಕ ಸಾಂಕೇತಿಕವಾಗಿ ಪ್ರತಿಭಟನೆ ಶುರು ಮಾಡಿದ್ದೇವೆ.
ನಮ್ಮ ನ್ಯಾಯಯುತವಾದ ಬೇಡಿಕೆಗಳನ್ನು ಈಡೇರಿಸುವಂತೆ ಪೌರಾಡಳಿತ ಸಚಿವರು ಮತ್ತು ಉನ್ನತ ಅಧಿಕಾರಿಗಳಿಗೆ ಹಲವು ವರ್ಷಗಳಿಂದ ಒತ್ತಾಯಿಸುತ್ತಲೇ ಬಂದಿದ್ದೇವೆ. ಲೆಕ್ಕವಿಲ್ಲದಷ್ಟು ಸಲ ಮನವಿ ಸಲ್ಲಿಸಿದ್ದೇವೆ. ಆದರೂ, ಸರಕಾರ ಸ್ಪಂದಿಸಿಲ್ಲ ಎಂದು ಅಸಮಧಾನ ವ್ಯಕ್ತಪಡಿಸಿದರು. ಪೌರ ನೌಕರರ ವಿಷಯದಲ್ಲಿ ಮಲತಾಯಿ ಧೋರಣೆ ಅನುಸರಿಸುತ್ತಲೇ ಬಂದಿದೆ ಎಂದು ದೂರಿದರು.
ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ನೀರು ಸರಬರಾಜು ಸಹಾಯಕರು ವಾಹನ ಚಾಲಕರು ಬೀದಿದೀಪ ನಿರ್ವಹಣೆಗಾರರು ಲೋಡರ್ಸ್ ಉದ್ಯಾನ ನಿರ್ವಹಣೆಗಾರರು ಕಾವಲುಗಾರರು ಸ್ಯಾನಿಟರಿ ಮೇಲ್ವಿಚಾರಕರು ದಿನಗೂಲಿ ಮತ್ತು ಕ್ಷೇಮಾಭಿವೃದ್ಧಿ ನೌಕರರು ಸೇರಿದಂತೆ ವಿವಿಧ ವೃಂದಗಳಲ್ಲಿ ಇರುವವರನ್ನು ಕಾಯಂ ಮಾಡಬೇಕು. ನೌಕರರಿಗೆ ಸರಕಾರದ ಎಸ್‌ಎಫ್‌ಸಿ (ರಾಜ್ಯ ಹಣಕಾಸು ಆಯೋಗ) ಮುಕ್ತನಿಧಿಯಿಂದ ವೇತನ ಪಾವತಿಸಬೇಕು. ಐ.ಪಿ.ಡಿ ಸಾಲಪ್ಪ ವರದಿ ಜಾರಿಗೊಳಿಸಬೇಕು. ಗ್ರಾಮ ಪಂಚಾಯಿತಿ ನೌಕರರಂತೆ ಪೌರ ನೌಕರರನ್ನು ಸಹ ಸರಕಾರಿ ನೌಕರರು ಎಂದು ಪರಿಗಣಿಸಿ ಸೌಲಭ್ಯಗಳನ್ನು ನೀಡಬೇಕು ಎಂದು ಒತ್ತಾಯಿಸಿದರು.

ಈ ಕುರಿತು ಪಪಂ ಮುಖ್ಯಾಧಿಕಾರಿ ಸ್ವಾಮಿದಾಸ ಅಣದೂರೆ ಅವರಿಗೆ ಮನವಿಪತ್ರ ಸಲ್ಲಿಸಿದರು. ಪ್ರಮುಖರಾದ ಪೌರ ನೌಕರರ ಸಂಘದ ಶಾಖಾ ಅಧ್ಯಕ್ಷ ಎಂ.ಡಿ ಸಮೀ, ಸ್ವಾಮಿದಾಸ ಮಸಕೆ, ತಿಪ್ಪಣ್ಣ, ರೋಹಿದಾಸ, ನರಸಿಂಗ, ಸಂಜು, ಲಕ್ಷ್ಮೀಬಾಯಿ, ಸೋನಮ್ಮ, ಮೊಗಲಮ್ಮ, ಸರಸ್ವತಿ ಸೇರಿದಂತೆ ಅನೇಕರಿದ್ದರು.

error: Content is protected !!