ದೇಶದ್ರೋಹಿ ಪೋಸ್ಟ್‌ ಮಾಡಿದರೆ ಉತ್ತರಪ್ರದೇಶದಲ್ಲಿನ್ನು ಜೀವಾವಧಿ ಶಿಕ್ಷೆ!

ಲಕ್ನೋ: ಉತ್ತರಪ್ರದೇಶದ ಯೋಗಿ ಆದಿತ್ಯನಾಥ್‌ ಸರ್ಕಾರ ಹೊಸ ಸಾಮಾಜಿಕ ಜಾಲತಾಣ ನೀತಿಯನ್ನು ಅಂಗೀಕರಿಸಿದೆ. ಬುಧ ವಾರ ನಡೆದ ಸಂಪುಟ ಸಭೆಯಲ್ಲಿ ಈ ನೀತಿಗೆ ಅಂಗೀಕಾರ ದೊರೆತಿದೆ. ಇದರ ಪ್ರಕಾರ ದೇಶ ವಿರೋಧಿ ಪೋಸ್ಟ್‌ಗಳನ್ನು ಮಾಡಿದರೆ ಅದನ್ನು ಗಂಭೀರವಾಗಿ ಪರಿಗಣಿಸಲಾಗುತ್ತದೆ.

 

ಇದಕ್ಕೆ ದಂಡದ ಜೊತೆಗೆ, 3 ವರ್ಷದಿಂದ ಗರಿಷ್ಠ ಜೀವಾವಧಿ ಶಿಕ್ಷೆಯನ್ನೂ ವಿಧಿಸಬಹುದಾಗಿದೆ. ಸಾಮಾಜಿಕ ತಾಣಗಳಲ್ಲಿ ಆಕ್ಷೇಪಾರ್ಹ ಸಂಗತಿಗಳನ್ನು ಪೋಸ್ಟ್‌ ಮಾಡಿದರೆ, ಅದರ ವಿಚಾರಣೆಗೂ ಮಾನದಂಡ ನಿಗದಿಪಡಿಸಲಾಗಿದೆ.

ದೇಶದ್ರೋಹಿ ಪೋಸ್ಟ್‌ಗಳನ್ನು ಇದುವರೆಗೆ ಮಾಹಿತಿ ತಂತ್ರಜ್ಞಾನ ಕಾಯ್ದೆಯ ವಿಧಿಗಳಾದ 66 ಇ, 66 ಎಫ್ಗಳಡಿ ವಿಚಾರಣೆ ನಡೆಸಿ ಶಿಕ್ಷೆ ನೀಡಲಾಗುತ್ತಿತ್ತು. ಸೈಬರ್‌ ಉಗ್ರವಾದ, ಖಾಸಗಿತನದ ಉಲ್ಲಂಘನೆಗಳನ್ನೂ ಇದೇ ಕಾಯ್ದೆಯಡಿ ಶಿಕ್ಷೆಗೊಳಪಡಿಸಲಾಗುತ್ತಿತ್ತು. ಇನ್ನೀಗ ಹೊಸ ನೀತಿಯಡಿ ಶಿಕ್ಷೆ ವಿಧಿಸಲಾಗುತ್ತದೆ. ಆನ್‌ಲೈನ್‌ನಲ್ಲಿ ಅಶ್ಲೀಲ, ಮಾನಹಾನಿಕರ ಸಂಗತಿಗಳನ್ನು ಪೋಸ್ಟ್‌ ಮಾಡಿದರೆ ಕ್ರಿಮಿನಲ್‌ ಮಾನಹಾನಿ ದೂರುಗಳನ್ನು ದಾಖಲಿಸಬಹುದು.

ಸರ್ಕಾರಿ ಯೋಜನೆ ಪ್ರಚಾರ ಮಾಡಿ ಮಾಸಿಕ 8 ಲಕ್ಷ ರೂ. ಗಳಿಸಿ!

ಹೊಸ ನೀತಿಯಲ್ಲಿ ಉತ್ತರಪ್ರದೇಶ ಸರ್ಕಾರದ ವಿವಿಧ ಯೋಜನೆಗಳು, ಕ್ರಮಗಳನ್ನು ಹಂಚಿಕೊಂಡರೆ ಅವನ್ನು ಪ್ರೋತ್ಸಾಹಿಸಲಾಗುತ್ತದೆ. ಅಂತಹ ತಾಣಗಳು, ಖಾತೆಗಳಿಗೆ ಜಾಹೀರಾತು ನೀಡಲಾಗುತ್ತದೆ. ಸಾಮಾಜಿಕ ತಾಣಗಳಲ್ಲಿನ ಇನ್ಫ್ಲ್ಯೂಯೆನ್ಸರ್‌ಗಳು ಮಾಸಿಕ ಗರಿಷ್ಠ 8 ಲಕ್ಷ ರೂ.ವರೆಗೆ ಸರ್ಕಾರದಿಂದ ಪಡೆಯಬಹುದು. ಎಕ್ಸ್‌, ಫೇಸ್‌ಬುಕ್‌, ಇನ್‌ಸ್ಟಾಗ್ರಾಂ ಖಾತೆದಾರರಿಗೆ ಸರ್ಕಾರದಿಂದ ಗರಿಷ್ಠ ಮಾಸಿಕ ಪಾವತಿ ಕ್ರಮವಾಗಿ 5, 4, 3 ಲಕ್ಷ ರೂ. ಗಳಿರುತ್ತವೆ. ಇನ್ನು ಯೂಟ್ಯೂಬ್‌ನಲ್ಲಿ ಪ್ರಕಟವಾಗುವ ವಿಡಿಯೋಗಳು, ಶಾರ್ಟ್ಸ್ಗಳು, ಪಾಡ್‌ಕಾಸ್ಟ್‌ಗಳಿಗೆ ಗರಿಷ್ಠ 8, 7, 6 ಲಕ್ಷ ರೂ.ಗಳನ್ನು ನೀಡಲಾಗುತ್ತದೆ.