ಪಾಟ್ನಾ: ಬಿಹಾರದಲ್ಲಿ ‘ಮಹಾಘಟಬಂಧನ’ ಮೈತ್ರಿಕೂಟವು ಅಧಿಕಾರಕ್ಕೇರಿದರೆ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ತಂದಿರುವ ವಕ್ಫ್ ಕಾಯ್ದೆಯನ್ನು ಕಸದ ಬುಟ್ಟಿಗೆ ಎಸೆಯಲಿದೆ ಎಂದು ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಹೇಳಿದ್ದಾರೆ.
ಇಲ್ಲಿನ ಗಾಂಧಿ ಮೈದಾನದಲ್ಲಿ ನಡೆದ ‘ವಕ್ಫ್ ಉಳಿಸಿ, ಸಂವಿಧಾನ ಉಳಿಸಿ’ ರ್‍ಯಾಲಿಯಲ್ಲಿ ಅವರು ಮಾತನಾಡಿದರು. ಕಾರ್ಯಕ್ರಮದಲ್ಲಿ ಪಾಲ್ಗೊಂಡ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಪ್ರತಿಭಟನೆಯ ಸಂಕೇತವಾಗಿ ಕಪ್ಪು ಪಟ್ಟಿ ಧರಿಸಿದ್ದರು.
‘ಆರ್‌ಜೆಡಿಯು ವಕ್ಫ್ ಕಾಯ್ದೆಯನ್ನು ಪ್ರಬಲವಾಗಿ ವಿರೋಧಿಸುತ್ತದೆ ಎಂದು ನಮ್ಮ ರಾಷ್ಟ್ರೀಯ ಅಧ್ಯಕ್ಷ ಲಾಲು ಪ್ರಸಾದ್ ಸ್ಪಷ್ಟಪಡಿಸಿದ್ದಾರೆ. ನಮ್ಮ ಪಕ್ಷದ ಸಂಸದರು ಇದನ್ನು ಸಂಸತ್ತಿನ ಎರಡೂ ಸದನಗಳಲ್ಲಿ ವಿರೋಧಿಸಿದ್ದಾರೆ. ವಕ್ಫ್ ಕಾಯ್ದೆ ವಿರೋಧಿಸಿ ನಾವು ನ್ಯಾಯಾಲಯದ ಮೊರೆ ಹೋಗಿದ್ದೇವೆ’ ಎಂದಿದ್ದಾರೆ.