ಮನೆ ಕನ್ನ ಕಳವು ಮಾಡುತ್ತಿದ್ದ ಮೂವರು ವ್ಯಕ್ತಿಗಳ ಬಂಧನ ₹ 78.50 ಲಕ್ಷ 1ಕೆ.ಜಿ 85 ಗ್ರಾಂ ಚಿನ್ನಾಭರಣ ವಶ

ಜಯನಗರ : ಪೊಲೀಸ್ ಸರಹದ್ದಿನ, 5ನೇ ಬ್ಲಾಕ್‌ನಲ್ಲಿ ವಾಸವಿರುವ ಪಿರ್ಯಾದುದಾರರು ದಿನಾಂಕ:20/07/2025 ರಂದು ಜಯನಗರ ಪೊಲೀಸ್ ಠಾಣೆಯಲ್ಲಿ ದೂರನ್ನು ಸಲ್ಲಿಸಿರುತ್ತಾರೆ. ದೂರಿನಲ್ಲಿ ಪಿರಾದುದಾರರು ದಿನಾಂಕ:20/07/2025 ರಂದು ಸಂಜೆ ಪಿರ್ಯಾದುದಾರರು ಮಗನನ್ನು ಬರಪೊರ್ಟ್‌ಗೆ ಬಿಟ್ಟುಬರಲು ಹೋಗಿರುತ್ತಾರೆ. ನಂತರ ಅದೇ ದಿನ ರಾತ್ರಿ ವಾಪಸ್ ಮನೆಗೆ ಬಂದು ನೋಡಲಾಗಿ, ಮನೆಯ ಮುಂಭಾಗಿಲಿನ ಬೀಗವನ್ನು ಹೊಡೆದಿರುವುದು ಕಂಡುಬಂದಿರುತ್ತದೆ. ಮನೆಯೊಳಗೆ ಪ್ರವೇಶಿಸಿ ಕೊಠಡಿಯಲ್ಲಿದ್ದ ಬೀರುವನ್ನು ನೋಡಲಾಗಿ, ಬೀರುವಿನ ಬಾಗಿಲು ತೆರೆದಿರುವುದು ಕಂಡು ಬಂದಿರುತ್ತದೆ. ಬೀರುವಿನಲ್ಲಿದ್ದ ₹ 1 ಕೋಟಿ ಬೆಲೆ ಬಾಳುವ 1.5 ಕೆ.ಜಿ ಚಿನ್ನಾಭರಣಗಳು, ಬೆಳ್ಳಿಯ ವಸ್ತುಗಳು, ₹ 3 ಲಕ್ಷ ಬೆಲೆ ಬಾಳುವ ಒಂದು ರೊಲೆಕ್ಸ್ ವಾಚ್ ಹಾಗೂ ₹ 50,000/- ನಗದನ್ನು ಯಾರೋ ಅಪರಿಚಿತರು ಕಳವು ಮಾಡಿಕೊಂಡು ಹೋಗಿರುವುದಾಗಿ ತಿಳಿಸಿರುತ್ತಾರೆ. ಈ ಕುರಿತು ಜಯನಗರ ಪೊಲೀಸ್ ಠಾಣೆಯಲ್ಲಿ ಮನೆ ಕನ್ನ ಕಳವು ಪ್ರಕರಣ ದಾಖಲಾಗಿರುತ್ತದೆ.

ಪ್ರಕರಣದ ತನಿಖೆಯನ್ನು ಮುಂದುವರೆಸಿದ ಪೊಲೀಸರು, ವಿವಿಧ ಆಯಾಮಗಳಲ್ಲಿ ತನಿಖೆಯನ್ನು ಕೈಗೊಂಡು ಭಾತ್ಮಧಾರರಿಂದ ಖಚಿತ ಮಾಹಿತಿಯನ್ನು ಕಲೆಹಾಕಿ, ದಿನಾಂಕ:22/07/2025 ರಂದು ತಲಘಟ್ಟಪುರದ ತುರಹಳ್ಳಿ ಫಾರೆಸ್ಟ್‌ನ ಒಂದು ಖಾಲಿ ಜಾಗದಲ್ಲಿ ಮೂವರು ವ್ಯಕ್ತಿಗಳನ್ನು ಈ ಪ್ರಕರಣದಲ್ಲಿ ಕಳುವಾಗಿದ್ದ ಚಿನ್ನಾಭರಣಗಳ ಸಮೇತ ವಶಕ್ಕೆ ಪಡೆದುಕೊಳ್ಳಲಾಯಿತು. ವಶಕ್ಕೆ ಪಡೆದ ವ್ಯಕ್ತಿಗಳನ್ನು ವಿಚಾರಣೆಗೊಳಪಡಿಸಲಾಗಿ, ಈ ಪ್ರಕರಣದಲ್ಲಿ ಚಿನ್ನಾಭರಣ, ಬೆಳ್ಳಿಯ ವಸ್ತುಗಳು ಹಾಗೂ ನಗದನ್ನು ಕಳವು ಮಾಡಿರುವುದಾಗಿ ತನ್ನೊಪ್ಪಿಕೊಂಡಿರುತ್ತಾರೆ. ಅವರ ವಶದಲ್ಲಿದ್ದ 1 ಕೆ.ಜಿ 35 ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಯಿತು.

ದಿನಾಂಕ:23/07/2025 ರಂದು ಮೂವರು ಆರೋಪಿಗಳನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿ, 6 ದಿನಗಳ ಕಾಲ ಪೊಲೀಸ್ ಅಭಿರಕ್ಷೆಗೆ ಪಡೆದುಕೊಳ್ಳಲಾಯಿತು.

ಪೊಲೀಸ್ ಅಭಿರಕ್ಷೆಗೆ ಪಡೆದ ಮೂವರು ಆರೋಪಿಗಳನ್ನು ಸುದೀರ್ಘವಾಗಿ ವಿಚಾರಣೆಗೊಳಪಡಿಸಲಾಗಿ, ಬಸವನಗುಡಿ ಠಾಣಾ ಸರಹದ್ದಿನಲ್ಲಿ ಕೃತ್ಯಕ್ಕೆ ಬಳಸಲು ಒಂದು ದ್ವಿ-ಚಕ್ರ ವಾಹನವನ್ನು ಕಳವು ಮಾಡಿದ್ದು ಮತ್ತು ಈ ಪ್ರಕರಣದಲ್ಲಿ ಕಳವು ಮಾಡಿದ್ದ ಚಿನ್ನಾಭರಣಗಳ ಪೈಕಿ 50 ಗ್ರಾಂ ಚಿನ್ನದ ಗಟ್ಟಿಯನ್ನು ಆರೋಪಿಗಳ ಸ್ನೇಹಿತನೋರ್ವನಿಗೆ ನೀಡಿರುವುದಾಗಿ ತಿಳಿಸಿರುತ್ತಾರೆ. ಆರೋಪಿಗಳ ಸ್ನೇಹಿತನಿಂದ ದಿನಾಂಕ:26/07/2025 ರಂದು ಈ ಕೃತ್ಯಕ್ಕೆ ಬಳಸಿದ ಒಂದು ದ್ವಿ-ಚಕ್ರ ವಾಹನ ಮತ್ತು 50 ಗ್ರಾಂ ಚಿನ್ನದ ಗಟ್ಟಿಯನ್ನು ವಶಪಡಿಸಿಕೊಳ್ಳಲಾಗಿದೆ.

ಈ ಪ್ರಕರಣದ ಮೂವರು ಆರೋಪಿಗಳಿಂದ ಒಟ್ಟು 1 ಕೆ.ಜಿ 85 ಗ್ರಾಂ ಚಿನ್ನಾಭರಣ ಮತ್ತು ಚಿನ್ನದ ಗಟ್ಟಿ ಮತ್ತು 1 ದ್ವಿ-ಚಕ್ರ ವಾಹನವನ್ನು ವಶಪಡಿಸಿಕೊಳ್ಳಲಾಗಿರುತ್ತದೆ. ಇದರ ಒಟ್ಟು ಮೌಲ್ಯ ₹ 78,50,000/-(ಎಪ್ಪತ್ತೆಂಟು ಲಕ್ಷದ ಐವತ್ತು ಸಾವಿರ ರೂಪಾಯಿ).

ದಿನಾಂಕ:28/07/2025 ರಂದು ಮೂವರು ಆರೋಪಿಗಳನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಮಾನ್ಯ ನ್ಯಾಯಾಲಯವು ಮೂವರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿರುತ್ತೆ.

ಈ ಕಾರ್ಯಚರಣೆಯನ್ನು ದಕ್ಷಿಣ ವಿಭಾಗದ ಉಪ-ಪೊಲೀಸ್ ಆಯುಕ್ತರಾದ ಲೋಕೇಶ್ ಭರಮಪ್ಪ ಜಗಲಾಸರ್ ಐ.ಪಿ.ಎಸ್ ರವರ ಮಾರ್ಗದರ್ಶನದಲ್ಲಿ ಹಾಗೂ ಜಯನಗರ ಉಪ-ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ನಾರಾಯಣಸ್ವಾಮಿ.ವಿ ರವರ ನೇತೃತ್ವದಲ್ಲಿ, ಜಯನಗರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟ‌ರ್ ದೀಪಕ್.ಆರ್ ಹಾಗೂ ಇತರೆ ಅಧಿಕಾರಿ/ಸಿಬ್ಬಂದಿಗಳ ತಂಡ ಪ್ರಕರಣವನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿರುತ್ತಾರೆ.

ವರದಿ : ಮುಬಾರಕ್

error: Content is protected !!