ಪೊಲೀಸ್‌ ಮತ್ತು ಸಾರ್ವಜನಿಕರ ಮಧ್ಯೆ ಸಂಬಂಧ ವೃದ್ಧಿ ಮಾಡುವ ವಿನೂತನ ಕಾರ್ಯಕ್ರಮ; ಮೇಘಣ್ಣನವರ

ಚಿತ್ತಾಪುರ; ಮನೆ ಮನೆಗೆ ಪೊಲೀಸ್ ಕಾರ್ಯಕ್ರಮವು, ಪೊಲೀಸ್ ಮತ್ತು ಸಾರ್ವಜನಿಕರ ಮಧ್ಯೆ ಸಂಪರ್ಕ ಮತ್ತು ಸಂಬಂಧ ವೃದ್ಧಿ ಮಾಡುವ ವಿನೂತನ ಕಾರ್ಯಕ್ರಮವಾಗಿದೆ ಎಂದು ಕಲಬುರಗಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮಹೇಶ್‌ ಮೇಘಣ್ಣನವ‌ರ್ ಹೇಳಿದರು.
ತಾಲೂಕಿನ ದಿಗ್ಗಾಂವ ಗ್ರಾಮದಲ್ಲಿ ಚಿತ್ತಾಪುರ ಪೊಲೀಸ್ ಠಾಣೆ ವತಿಯಿಂದ ಹಮ್ಮಿಕೊಂಡಿದ್ದ ಸಾರ್ವಜನಿಕರ ಸುರಕ್ಷತೆಗಾಗಿ ಮನೆ ಮನೆಗೆ ಪೊಲೀಸ್‌ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ನೆಲೆಸಲು ಹಾಗೂ ಅಪರಾಧ ಪ್ರಕರಣಗಳ ನಿಯಂತ್ರಣಕ್ಕೆ ಪೊಲೀಸ್‌ ಇಲಾಖೆ ಜೊತೆಗೆ ಸಾರ್ವಜನಿಕರ ಸಹಕಾರ ಮುಖ್ಯ ಎಂದರು.
ಅಪರಾಧಗಳ ಸ್ವರೂಪ ಈಗ ಡಿಜಿಟಲ್ ರೂಪ ಪಡೆದಿದೆ, ಡಿಜಿಟಲ್ ಅರೇಸ್ಟ್ ಮೂಲಕ ಹೆದರಿಸಿ ಹಣ ಕೀಳುವ, ಇಷ್ಟು ವಿಡಿಯೋ ಹಾಕಿದರೆ ಇಷ್ಟು ಹಣ ಕೊಡುತ್ತೇವೆ, ಮನೆಯಲ್ಲಿಯೇ ಕುಳಿತು ಹಣ ಗಳಿಸಿ ಎಂಬಿತ್ಯಾದಿ ಬಣ್ಣದ ಮಾತು ಹೇಳಿ ಅನೇಕ ರೀತಿಯಲ್ಲಿ ಮೋಸ ನಡೆಯುತ್ತಿದೆ. ಹೀಗಾಗಿ ಇಂತಹ ಮೋಸದ ಜಾಲಗಳ ಬಗ್ಗೆ ಜಾಗ್ರತೆಯಿಂದ ಇರಬೇಕು ಎಂದು ಕಿವಿಮಾತು ಹೇಳಿದರು.
ಶಹಾಬಾದ ಡಿವೈಎಸ್ಪಿ ಶಂಕರಗೌಡ ಪಾಟೀಲ ಮಾತನಾಡಿ, ಸಮಾಜದ ಸುರಕ್ಷತೆ ಹಾಗೂ ಸ್ವಾಸ್ಥ್ಯ ಕಾಪಾಡುವಲ್ಲಿ ಆರಕ್ಷಕರ ಪಾತ್ರ ಪ್ರಮುಖವಾಗಿದೆ. ಕಾನೂನು ಮತ್ತು ಸುವ್ಯವಸ್ಥೆ ಕಾಯ್ದುಕೊಂಡು ಸಾರ್ವಜನಿಕರಲ್ಲಿ ಭದ್ರತೆ ಮತ್ತು ವಿಶ್ವಾಸವನ್ನುಂಟು ಮಾಡುವ ನಿಟ್ಟಿನಲ್ಲಿ ಪೊಲೀಸ್‌ ಇಲಾಖೆ ದಿಟ್ಟ ಹೆಜ್ಜೆಯನ್ನಿರಿಸಿದೆ ಎಂದರು.
ಸಾರ್ವಜನಿಕರ ಸಮಸ್ಯೆಗೆ ತಕ್ಷಣಕ್ಕೆ ಸ್ಪಂದನೆ, ಭದ್ರತೆ ಹಾಗೂ ಸುರಕ್ಷಿತ ವಾತಾವರಣ ನಿರ್ಮಾಣ, ಅಪರಾಧ ತಡೆ, ಸಮಾಜದಲ್ಲಿ ಶಾಂತಿ ನೆಲೆಸುವಂತೆ ಮಾಡುವುದು, ಭಯಮುಕ್ತ ವಾತಾವರಣ ಮತ್ತು ಕಾನೂನು ತಿಳಿವಳಿಕೆ ನೀಡುವ ನಿಟ್ಟಿನಲ್ಲಿ ಪೊಲೀಸ್‌ ಇಲಾಖೆ ಮನೆ ಮನೆಗೆ ಪೊಲೀಸ್ ಎಂಬ ವಿನೂತನ ಕಾರ್ಯಕ್ರಮ ಆರಂಭಿಸಿದೆ ಎಂದು ಹೇಳಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಹರಳಯ್ಯ ಬಡಿಗೇ‌ರ್, ಮಾಜಿ ಅಧ್ಯಕ್ಷ ಶ್ರೀಮಂತ ಗುತ್ತೇದಾರ, ಪಿಎಸ್‌ಐ ಚಂದ್ರಾಮಪ್ಪ ಅವರು ಮಾತನಾಡಿದರು.
ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಜಗನ್ನಾಥ ಸೀದಾ, ಮುಖಂಡ ಸಿದ್ದಣ್ಣಗೌಡ ಆರ್.ಡಿ, ವೇದಿಕೆಯಲ್ಲಿದ್ದರು.
ಎಎಸ್‌ಐ ಬಾಬುರಾವ್, ದತ್ತು ಜಾನೆ, ಗುರುಲಿಂಗ ಬಂದಳ್ಳಿ, ಭೀಮರಾಯ ದೇವರ್, ತಿಪ್ಪಣ್ಣ ಸಂಗಾವಿ, ಮನಶೆಟ್ಟಪ್ಪ ಸಂಗಾವಿ, ಅರ್ಜುನ್ ಕಟಿಶಾಪೂರ, ಶರಣು ಬುಳ್ಳಾ, ಸುಭಾಶ್ಚಂದ್ರ ಪವಾರ, ನಾಗಪ್ಪ ಕಂಬಾರ, ರಾಜು ಪುಟಪಾಕ್, ನಬಿಲಾಲ್ ಸೇರಿದಂತೆ ಇತರರು ಇದ್ದರು.
ಪಿಎಸ್‌ಐ ಶ್ರೀಶೈಲ್ ಅಂಬಾಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಗನ್ನಾಥ ಕಲಕೇರಿ ನಿರೂಪಿಸಿದರು. ಪಿಡಿಒ ಸಂಗೀತಾ ವಂದಿಸಿದರು.

error: Content is protected !!