ಚಿಕ್ಕೋಡಿ : ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಉಪವಿಭಾಗದಲ್ಲಿ ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ವಿಶೇಷವಾಗಿ ಅಥಣಿ ತಾಲೂಕಿನಾದ್ಯಂತ ಮಳೆ ಅಬ್ಬರ ಮುಂದುವರಿದಿದ್ದು, ಬೇಡರಹಟ್ಟಿ ಗ್ರಾಮದಲ್ಲಿ ಉದ್ದು, ಮೆಕ್ಕೆಜೋಳ, ಶೇಂಗಾ, ಸೋಯಾಬಿನ್ ಬೆಳೆಗಳು ನೀರಿನಲ್ಲಿ ನಿಂತು ಹಾಳಾಗುವ ಪರಿಸ್ಥಿತಿ ಎದುರಾಗಿದೆ.
ಕೈಯಿಗೆ ಬಂದ ತುತ್ತು ಬಾಯಿಗೆ ಬರದಂತೆ ರೈತರ ಹಾಲಿ ಪರಿಸ್ಥಿತಿ. ಸಾಲಸೋಲ ಮಾಡಿಕೊಂಡು ಬೆಳೆ ಬೆಳೆದ ರೈತರಿಗೆ ಕೇವಲ 10 ದಿನಗಳಲ್ಲೇ ಕೊಯ್ಯಲು ಸಿದ್ಧವಾಗಿದ್ದ ಫಸಲು, ಕಳೆದ ಒಂದುವಾರದಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಗೆ ನೀರಿನಲ್ಲಿ ಮುಳುಗಿ ನಾಶವಾಗುವ ಹಂತಕ್ಕೆ ತಲುಪಿದೆ.
“ಈಗಲಾದರೂ ಸರ್ಕಾರ ತುರ್ತು ಪರಿಹಾರ ಘೋಷಿಸಬೇಕು” ಎಂದು ರೈತರು ಮನವಿ ಮಾಡಿದ್ದಾರೆ. ಬೆಳೆ ನಷ್ಟದ ಸರಿಯಾದ ಅಂದಾಜು ಮಾಡಿ ಪರಿಹಾರ ಒದಗಿಸಬೇಕು ಎಂಬುದು ಕೃಷಿಕರ ಆಗ್ರಹ.
ವರದಿ : ಸದಾನಂದ ಎಂ