ಔರಾದ್, ಕಮಲನಗರಗೆ 300 ಕೋಟಿ ವಿಶೇಷ ಪ್ಯಾಕೇಜ್‌ ನೀಡಿ

ಔರಾದ್ : ಅತಿವೃಷ್ಟಿ ಮತ್ತು ಪ್ರವಾಹ ಹಿನ್ನೆಲೆಯಲ್ಲಿ ಹಾನಿಯಾಗಿರುವ ರಸ್ತೆ, ಸೇತುವೆ , ಕಟ್ಟಡ ಸೇರಿದಂತೆ ವಿವಿಧ ಇಲಾಖೆಯ ಮೂಲಸೌಕರ್ಯಗಳ ಅಭಿವೃದ್ಧಿಗೆ ಔರಾದ್ ಮತ್ತು ಕಮಲನಗರ ತಾಲೂಕು ಸೇರಿ 300 ಕೋಟಿ ರೂ. ವಿಶೇಷ ಅನುದಾನ ನೀಡುವಂತೆ ನಿವೃತ್ತ, ಸಿಎಂ ಅಪರ ಕಾರ್ಯದರ್ಶಿ,
ಕಾಂಗ್ರೆಸ್ ಮುಖಂಡ ಡಾ. ಭೀಮಸೇನರಾವ ಶಿಂಧೆ ಸರಕಾರಕ್ಕೆ ಒತ್ತಾಯಿಸಿದ್ದಾರೆ. ಶುಕ್ರವಾರ ಪಟ್ಟಣದ ರಾಮನಗರ, ಹಮಾಲ್ ಕಾಲೋನಿ ಸೇರಿದಂತೆ ತಾಲೂಕಿನ ಎಕಂಬಾ, ದುಡುಕನಾಳ, ಬಾದಲಗಾಂವ, ಮಮದಾಪುರ, ತೇಗಂಪೂರ, ಯನಗುಂದಾ, ಚಿಂತಾಕಿ ಗ್ರಾಮಗಳಲ್ಲಿನ ಬೆಳೆ, ಕೆರೆ, ಬ್ರಿಡ್ಜ್, ರಸ್ತೆ ಹಾನಿಯಾಗಿರುವದನ್ನು ಪರಿಶೀಲಿಸಿದ ಅವರು ಔರಾದ್ ಮತಕ್ಷೇತ್ರದಲ್ಲಿ ಮಳೆಯಿಂದ ರಸ್ತೆ, ಸೇತುವೆ ಕೊಚ್ಚಿ ಹೋಗಿದ್ದು, ಸಂಪರ್ಕ ಕಡಿತವಾಗಿದೆ. ಶಾಲಾ ಅಂಗನವಾಡಿಗಳ ಕಟ್ಟಡ ಶಿಥಿಲಾವಸ್ಥೆಯಾಗಿವೆ. ಬೀಳುವ ಹಂತಕ್ಕೆ ತಲುಪಿವೆ. ಮಳೆಯಿಂದ ಕೆರೆ, ಬ್ರಿಡ್ಜ್ ಕಂ ಬ್ಯಾರೇಜ್ ಗಳು ಹಾಳಾಗಿವೆ. ಕುಡಲೇ ದುರಸ್ಥಿ ಮಾಡಬೇಕಿದೆ.

ತಾಲೂಕಿನ ಮಾಂಜ್ರಾ ನದಿ, ಕೆರೆಯಂಚಿನ ಹಾಗೂ ಕೆರೆ ಕೆಳಭಾಗದ ಜಮೀನುಗಳಿಗೆ ಧಾರಾಕಾರ ಮಳೆಯಿಂದ ನೀರು ನುಗ್ಗಿವೆ. ರೈತರು ಬೆಳೆದಿರುವ ಬೆಳೆಯೊಂದಿಗೆ ಜಮೀನಿನಲ್ಲಿರುವ ಫಲವತ್ತಾದ ಮಣ್ಣು ಕೊಚ್ಚಿಕೊಂಡು ಹೋಗಿದೆ. ಜಾನುವಾರುಗಳು ಸತ್ತಿವೆ. ಇದರಿಂದ ರೈತರ ಕುಟುಂಬಗಳು ಬೀದಿಗೆ ಬಂದಿವೆ. ಸಂಕಷ್ಟದಲ್ಲಿರುವ ರೈತರ ನೆರವಿಗೆ 200 ಕೋಟಿ ಹಾಗೂ ಕಾಮಗಾರಿಗೆ 100 ಕೋಟಿ ಸೇರಿ 300 ಕೋಟಿ ಅನುದಾನ ನೀಡುವಂತೆ ಮುಖ್ಯಮಂತ್ರಿಗಳಿಗೆ ಭೇಟಿಯಾಗುವ ಮೂಲಕ ಮನವರಿಕೆ ಮಾಡುವದಾಗಿ ಭರವಸೆ ನೀಡಿದರು. ಕ್ಷೇತ್ರದ ಜನರ ಸಮಸ್ಯೆ ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ, ಸಚಿವ ರಹೀಂಖಾನ್ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಸರಕಾರದ ಗಮನಕ್ಕೂ ತಂದಿದ್ದಾರೆ ಕ್ಷೇತ್ರದಲ್ಲಿ ರೈತರ ಸಮಸ್ಯೆ ಸ್ಪಂದಿಸುವ ಕೆಲಸ ಕಾಂಗ್ರೆಸ್‌ ಸರಕಾರ ಮಾಡುತ್ತದೆ ಎಂದು ಧೈರ್ಯ ತುಂಬಿದರು. ಪ್ರಮುಖರಾದ ತಾಪಂ ಮಾಜಿ ಅಧ್ಯಕ್ಷ ನೆಹರು ಪಾಟೀಲ್, ರಾಮಣ್ಣ ವಡಿಯಾರ, ಶಿವರಾಜ ದೇಶಮುಖ, ಸೂರ್ಯಕಾಂತ ಮಮದಾಪುರ, ಚನ್ನಪ್ಪ ಮಜಿಗೆ, ಶಿವರಾಜ ಮೊಕ್ತೆದಾರ್, ಅವಿನಾಶ ಮೊಕ್ತೆದಾರ್ ಸೇರಿದಂತೆ ಅನೇಕರಿದ್ದರು.

ಅಧಿಕಾರಿಗಳ ವಿರುದ್ಧ ಆಕ್ರೋಶ

ತೇಗಂಪೂರ ಕೆರೆಯನ್ನು ಪರಿಶೀಲನೆ ನಡೆಸಿದ ಡಾ. ಭೀಮಸೇನರಾವ ಶಿಂಧೆ, ಕೆರೆಯ ಏರಿಯಲ್ಲಿ ಗಿಡಮರಗಳ ಬೇರುಗಳು ಬೆಳೆದು, ಏರಿಯಲ್ಲಿ ಬಿರುಕು ಉಂಟಾಗಿ ಕೆರೆಯಲ್ಲಿ ಸಂಗ್ರಹವಾಗಿರುವ ಮಳೆಯ ನೀರು ಸೋರುವ ಭೀತಿಯಿದೆ. ಆದರೆ ಇಲಾಖೆ ಅಧಿಕಾರಿಗಳು ಗಿಡಗಂಟಿಗಳು ತೆಗೆದಿಲ್ಲ ಎಂದು ಇಲಾಖೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಯನಗುಂದಾ ಗ್ರಾಮದ ಸೇತುವೆ ಪರಿಶೀಲಿಸಿ, ಸಂಚಾರ ಸ್ಥಗಿತವಾಗಿರುವದನ್ನು ಗಮನಿಸಿ ದುರಸ್ಥಿ ಮಾಡುವಂತೆ ಲೋಕೋಪಯೋಗಿ ಇಲಾಖೆಯ ಎಇಇ ಪ್ರೇಮಸಾಗರ ಅವರಿಗೆ ದೂರವಾಣಿ ಕರೆ ಮಾಡಿ ಸೂಚಿಸಿದರು.

ವರದಿ ರಾಚಯ್ಯ ಸ್ವಾಮಿ

error: Content is protected !!