ಭಾವಾ ಮುತ್ಯ ನಿಧನಕ್ಕೆ ಸಚಿವ ಶಿವಾನಂದ ಸಂತಾಪ

ಕೊಲ್ಹಾರ : ಬಳೂತಿ ಗ್ರಾಮದ ಹಿರಿಯರಾಗಿದ್ದ ಪೀರನಾಥ ಶಿವಗಿರಿ ಬಾವಾ ಇವರ ನಿಧನಕ್ಕೆ ಜವಳಿ, ಸಕ್ಕರೆ, ಕಬ್ಬು ಅಭಿವೃದ್ಧಿ ಹಾಗೂ ಕೃಷಿ ಮಾರುಕಟ್ಟೆ ಸಚಿವರಾದ ಶಿವಾನಂದ ಪಾಟೀಲ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದು, ನೈತಿಕ ಪ್ರಜ್ಞೆಯ ಮಾರ್ಗದರ್ಶಕನನ್ನು ಕಳೆದುಕೊಂಡು ನಾಡು ಬಡವಾಗಿದೆ ಎಂದು ಕಂಬನಿ ಮಿಡಿದಿದ್ದಾರೆ.

ಕೃಷ್ಣಾ ಮೇಲ್ದಂಡೆ ಯೋಜನೆಗೆ ಮುಳುಗಡೆಯಾದ ಬಳೂತಿ ಗ್ರಾಮದ ಸಂತ್ರಸ್ತರ ಪರವಾಗಿ ಗಟ್ಟಿ ಧ್ವನಿಯಾಗಿದ್ದ ಭಾವಾ ಅವರು, ಅಲ್ಲಿನ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ ಹುಟ್ಟೂರಿನ ಅಭಿವೃದ್ಧಿಗೆ ಶ್ರಮಿಸಿದ್ದರು. ಸಹಕಾರಿ ರಂಗದಲ್ಲೂ ತಮ್ಮನ್ನು ಸಮರ್ಪಿಸಿಕೊಂಡಿದ್ದ ಬಾವಾ ಅವರು, ಬಳೂತಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾಗಿ ರೈತರ ಆರ್ಥಿಕ ಅಭಿವೃದ್ಧಿಗೆ ಯೋಗದಾನ ನೀಡಿದ್ದರು ಎಂದು ಸಚಿವರು ಗುಣಗಾನ ಮಾಡಿದ್ದಾರೆ.

ಮರಾಠಾ ಸಮುದಾಯದ ಹಿರಿಯರಾಗಿದ್ದ ಪೀರನಾಥ ಅವರು ಸನ್ಯಾಸತ್ವ ಸ್ವೀಕರಿಸಿ ಸಮುದಾಯದ ಜನರಲ್ಲಿ ನೈತಿಕ ಪ್ರಜ್ಞೆ ಮೂಡಿಸುವುದಕ್ಕಾಗಿ ತಮ್ಮ ಜೀವನ ಮುಡಿಪಾಗಿಟ್ಟಿದ್ದರು. ರಾಜಕೀಯವಾಗಿ ತಮಗೆ ಮಾರ್ಗದರ್ಶಕಾರಿದ್ದ ಬಾವಾ ಮುತ್ಯಾ ಅವರ ನಿಧನದಿಂದ ಸ್ವಸ್ಥ ಸಮಾಜ ನಿರ್ಮಾಣದ ಹರಿಕಾರನನ್ನು ಕಳೆದುಕೊಂಡು ಬಳೂತಿ ಪರಿಸರ ಅನಾಥ ಪ್ರಜ್ಞೆ ಎದುರಿಸುತ್ತಿದೆ ಎಂದು ಸಂತಾಪ ವ್ಯಕ್ತಪಡಿಸಿದ್ದಾರೆ.

ವಯೋಸಹಜ ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದ ಹಿರಿ ಜೀವವನ್ನು
ಕೇವಲ ನಾಲ್ಕು ದಿನಗಳ ಹಿಂದಷ್ಟೇ ಭೇಟಿಯಾಗಿ, ಆರೋಗ್ಯ ವಿಚಾರಿಸಿ ಶೀಘ್ರ ಗುಣಮುಖರಾಗುತ್ತೀರಿ ಎಂದು ಆಶಯ ವ್ಯಕ್ತಪಡಿಸಿದ್ದಾಗಿ ಸಚಿವರು ವಿವರಿಸಿರುವ ಸಚಿವ ಶಿವಾನಂದ ಪಾಟೀಲ, ಮೃತರ ಆತ್ಮಕ್ಕೆ ಶಾಂತಿ ಸಿಗಲಿ, ಅವರನ್ನು ಕಳೆದುಕೊಂಡಿರುವ ಕುಟುಂಬ ಸದಸ್ಯರು ಹಾಗೂ ಅಭಿಮಾನಿ ಬಳಗಕ್ಕೆ ದುಃಖ ಭರಿಸುವ ಶಕ್ತಿ ಲಭಿಸಲಿ ಎಂದು ಕೋರಿದ್ದಾರೆ.

ವರದಿ ರವಿಕುಮಾರ್ ತುಪ್ಪದ ಕೊಲ್ಹಾರ

error: Content is protected !!