ವ್ಯಾಪರಾದ ವೈಷಮ್ಯಕ್ಕಾಗಿ ಕೊಲೆ ಮಾಡಲು ಸುಫಾರಿ ಕೊಟ್ಟಿದ್ದ ಆರೋಪಿ ಹಾಗೂ ಸುಫಾರಿ ಪಡೆದುಕೊಂಡಿದ್ದ ಅಂತರ ರಾಜ್ಯ ಆರೋಪಿತರ ಬಂಧನ

ಬಾಗಲಗುಂಟೆ : ಮುಖ್ಯರಸ್ತೆಯಲ್ಲಿರುವ ಟೆಕ್ಸ್‌ ಟೈಲ್ ಅಂಗಡಿ ಮಾಲೀಕರಾದ ಪಿರ್ಯಾದುದಾರರು ದೂರನ್ನು ಸಲ್ಲಿಸಿರುತ್ತಾರೆ. ದೂರಿನಲ್ಲಿ ಪಿರಾದುದಾರರ ಅಂಗಡಿಯ ಪಕ್ಕದಲ್ಲಿ ಫ್ಯಾಷನ್ಸ್ ಬಟ್ಟೆ ಅಂಗಡಿಯೊಂದಿದ್ದು, ಈ ಫ್ಯಾಷನ್ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಹುಡುಗನನ್ನು ಹೆಚ್ಚಿನ ಸಂಬಳ ನೀಡುವುದಾಗಿ ತಿಳಿಸಿ, ಪಿರ್ಯಾದುದಾರರು ಕೆಲಸಕ್ಕೆ ಸೇರಿಸಿಕೊಂಡಿರುತ್ತಾರೆ.

ಪಿರಾದುದಾರರ ಟೆಕ್ಸ್‌ ಟೈಲ್ಸ್ ಅಂಗಡಿಯ ವ್ಯಾಪಾರ ವ್ಯವಹಾರ ಚೆನ್ನಾಗಿ ನಡೆಯುತ್ತಿದ್ದು, ಫ್ಯಾಷನ್ಸ್ ಬಟ್ಟೆ ಅಂಗಡಿಯ ವ್ಯವಹಾರ ಕುಗ್ಗಿದ್ದರಿಂದ, ಮಾಲೀಕನು ವ್ಯಾಪಾರದ ವೈಷಮ್ಯದಿಂದ ರಾಜಸ್ಥಾನ ಮೂಲದ ಓರ್ವ ವ್ಯಕ್ತಿಗೆ * 05 ಲಕ್ಷಕ್ಕೆ ಪಿರಾದುದಾರರನ್ನು ಕೊಲೆ ಮಾಡಲು ಸುಫಾರಿ ಕೊಟ್ಟಿದಾನೆಂದು ತಿಳಿಸಿರುತ್ತಾರೆ. ಈ ಕುರಿತು ಬಾಗಲಗುಂಟೆಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಪ್ರಕರಣದ ತನಿಖೆಯನ್ನು ಮುಂದುವರೆಸಿದ ಪೊಲೀಸರು, ಎರಡು ವಿಶೇಷ ತಂಡಗಳನ್ನು ರಚಿಸಿ ದಿನಾಂಕ:18/09/2025 ರಂದು ಫ್ಯಾಷನ್ ಬಟ್ಟೆ ಅಂಗಡಿಯ ಮಾಲೀಕನನ್ನು ಬಾಗಲಗುಂಟೆಯ ಫ್ಯಾಷನ್ ಬಟ್ಟೆ ಅಂಗಡಿಯಲ್ಲಿ ವಶಕ್ಕೆ ಪಡೆಯಲಾಯಿತು. ವಶಕ್ಕೆ ಪಡೆದ ಆತನನ್ನು ವಿಚಾರಣೆಗೊಳಪಡಿಸಿದಾಗ, ಈ ಪ್ರಕರಣದಲ್ಲಿ ಕೊಲೆ ಮಾಡಲು ಸುಫಾರಿ ನೀಡಿರುವುದಾಗಿ ತನ್ನೊಪ್ಪಿಕೊಂಡಿದ್ದು, ಸುಫಾರಿ ಪಡೆದುಕೊಂಡ ವ್ಯಕ್ತಿಯ ವಿವರವನ್ನು ತಿಳಿಸಿರುತ್ತಾನೆ. ಅದೇ ದಿನ ಸುಫಾರಿ ಪಡೆದುಕೊಂಡಿದ್ದ ವ್ಯಕ್ತಿಯನ್ನು ರಾಜಸ್ತಾನದ ಸೊಜತ್ ತಾಲ್ಲೂಕು, ಪಾಲಿ ಜಿಲ್ಲೆಯಿಂದ ವಶಕ್ಕೆ ಪಡೆಯಲಾಯಿತು,

ದಿನಾಂಕ:19/09/2025 ರಂದು ಆರೋಪಿಗಳಿಬ್ಬರನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿ, 7 ದಿನಗಳ ಕಾಲ ಪೊಲೀಸ್ ಅಭಿರಕ್ಷೆಗೆ ಪಡೆದುಕೊಳ್ಳಲಾಯಿತು.

ಪೊಲೀಸ್ ಅಭಿರಕ್ಷೆಗೆ ಪಡೆದ ಆರೋಪಿಗಳಿಬ್ಬರನ್ನು ಸುದೀರ್ಘವಾಗಿ ವಿಚಾರಣೆಗೊಳಪಡಿಸಿದ್ದು, ತನಿಖೆ ಪ್ರಗತಿಯಲ್ಲಿದೆ.

ಈ ಕಾರ್ಯಾಚರಣೆಯನ್ನು ವಾಯುವ್ಯ ವಿಭಾಗದ ಉಪ ಪೊಲೀಸ್ ಆಯುಕ್ತರಾದ ನಾಗೇಶ್ ಡಿ.ಎಲ್ ಐಪಿಎಸ್, ರವರು ಹಾಗೂ ಪೀಣ್ಯ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಅಶೋಕ್ ಎಸ್.ಎಮ್ ರವರ ಮಾರ್ಗದರ್ಶನದಲ್ಲಿ, ಬಾಗಲಗುಂಟೆ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಹನುಮಂತರಾಜು.ಎಂ ಹಾಗೂ ಇತರೆ ಅಧಿಕಾರಿ ಮತ್ತು ಸಿಬ್ಬಂದಿಗಳ ತಂಡ ಪ್ರಕರಣವನ್ನು ಬೇಧಿಸುವಲ್ಲಿ ಯಶಸ್ವಿಯಾಗಿರುತ್ತಾರೆ.

error: Content is protected !!