ಬೆಳಗಾವಿ : ಜಿಲ್ಲೆಯಲ್ಲಿ ರಾಜಕೀಯ ಸಮೀಕರಣ ಬದಲಾಗಿಸಿದೆ. ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರಿಗೆ ಜಾರಕಿಹೊಳಿ ಸಹೋದರರು ಅಚ್ಚರಿ ಶಾಕ್ ನೀಡಿದ್ದಾರೆ.
ಕಳೆದ ಮೂರು ದಶಕಗಳಿಂದ ಸವದಿ ಹಾಗೂ ಕತ್ತಿ ಕುಟುಂಬದ ಹಿಡಿತದಲ್ಲಿದ್ದ ಬೆಳಗಾವಿ ಡಿಸಿಸಿ ಬ್ಯಾಂಕ್ ಆಡಳಿತ ಈಗ ಜಾರಕಿಹೊಳಿ ಕುಟುಂಬದತ್ತ ತಿರುಗಿಕೊಂಡಿದೆ. ಈ ಬಾರಿ ಜಾರಕಿಹೊಳಿ ಸಹೋದರರು ತಮ್ಮ ಕುಟುಂಬದ ಇಬ್ಬರನ್ನು ನಿರ್ದೇಶಕ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆ ಮಾಡಿಸಿಕೊಂಡು ಬ್ಯಾಂಕ್ ರಾಜಕೀಯದಲ್ಲಿ ಬಲಿಷ್ಠ ಸ್ಥಾನ ಗಳಿಸಿದ್ದರು.
ಇದೀಗ ಮತ್ತೊಂದು ಮಹತ್ವದ ಬೆಳವಣಿಗೆಯಲ್ಲಿ, ಸವದಿ ಅವರ ಆಪ್ತ ವಲಯದವರ ಪಾಲಾಗುತ್ತಿದ್ದ ಅಪೆಕ್ಸ್ ಬ್ಯಾಂಕ್ ನಿರ್ದೇಶಕ ಸ್ಥಾನವನ್ನೂ ಜಾರಕಿಹೊಳಿ ಕುಟುಂಬ ವಶಪಡಿಸಿಕೊಂಡಿದೆ. ಡಿಸಿಸಿ ಬ್ಯಾಂಕ್‌ನಿಂದ ಅಪೆಕ್ಸ್ ಬ್ಯಾಂಕಿಗೆ ಆಯ್ಕೆಯಾಗುವ ಪ್ರಮುಖ ಸ್ಥಾನಕ್ಕೆ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರ ಪುತ್ರ ರಾಹುಲ್ ಜಾರಕಿಹೊಳಿ ಈ ಬಾರಿ ಆಯ್ಕೆಯಾಗಿದ್ದಾರೆ.
ಇತ್ತೀಚೆಗೆ ನಡೆದ ಡಿಸಿಸಿ ಬ್ಯಾಂಕ್ ನಿರ್ದೇಶಕ ಚುನಾವಣೆಯಲ್ಲಿ ರಾಹುಲ್ ಜಾರಕಿಹೊಳಿ ಬೆಳಗಾವಿ ತಾಲೂಕಿನಿಂದ ಅವಿರೋಧವಾಗಿ ಆಯ್ಕೆಯಾಗಿದ್ದರು. ಅಪೆಕ್ಸ್ ಬ್ಯಾಂಕ್ ಸ್ಥಾನವೂ ದೊರಕುವುದರಿಂದ, ಯುವ ನಾಯಕನಾದ ರಾಹುಲ್ ಜಾರಕಿಹೊಳಿ ರಾಜಕೀಯ ವಲಯದಲ್ಲಿ ಮಹತ್ವದ ಸ್ಥಾನ ದಾಖಲಿಸಿದ್ದಾರೆ.
ಈ ಬೆಳವಣಿಗೆ ಬೆಳಗಾವಿ ಜಿಲ್ಲಾ ರಾಜಕಾರಣದಲ್ಲಿ ಜಾರಕಿಹೊಳಿ ಕುಟುಂಬದ ಪ್ರಾಬಲ್ಯ ಮತ್ತಷ್ಟು ಹೆಚ್ಚಿಸಿದೆ ಎಂಬುದು ರಾಜಕೀಯ ವಲಯದ ಚರ್ಚೆ.
