ಗುಡಿಬಂಡೆ : ಪಟ್ಟಣದಲ್ಲಿ ಇಂದು ನಡೆದ ಎಂಟನೇ ಕರ್ನಾಟಕ ಪ್ರಾಂತ ರೈತ ಸಂಘದ ತಾಲೂಕು ಸಮ್ಮೇಳನದಲ್ಲಿ ಹಲವು ಮಹತ್ವದ ಕೃಷಿ ಸಂಬಂಧಿತ ನಿರ್ಣಯಗಳನ್ನು ಕೈಗೊಳ್ಳಲಾಗಿದೆ.
ಫಾರಂ ನಂ. 50, 53 ಮತ್ತು 57ರ ಅಡಿಯಲ್ಲಿ ಅರ್ಜಿ ಸಲ್ಲಿಸಿರುವ ರೈತರಿಗೆ ತಕ್ಷಣ ಸಾಗುವಳಿ ಚೀಟಿ ವಿತರಿಸಬೇಕೆಂದು ಆಗ್ರಹ ವ್ಯಕ್ತವಾಗಿದೆ.
ಜೊತೆಗೆ, ಚಿಕ್ಕಬಳ್ಳಾಪುರ ಜಿಲ್ಲೆಗೆ ಕೃಷ್ಣಾ ನದಿ ನೀರು ಹಂಚಿಕೆ ಮಾಡುವಂತೆ ಸರ್ಕಾರವನ್ನು ಒತ್ತಾಯಿಸಲಾಗಿದೆ.
ಸಮ್ಮೇಳನದಲ್ಲಿ ರೈತರ ಹಿತಾಸಕ್ತಿಗೆ ಸಂಬಂಧಿಸಿದಂತೆ ಬೆಲೆ ಸ್ಥಿರತೆ, ಸ್ಮಾರ್ಟ್ ಮೀಟರ್ ಸಮಸ್ಯೆ, ಹಾಲಿನ ಬೆಲೆ ಹೆಚ್ಚಳ ಹಾಗೂ ಸಾರಿಗೆ ಸೌಲಭ್ಯಗಳ ಕುರಿತು ಅನೇಕ ಬೇಡಿಕೆಗಳು ಮಂಡನೆಗೊಂಡಿವೆ.
ಗುಡಿಬಂಡೆ: ತಾಲೂಕಿನಲ್ಲಿ ಫಾರಂ ನಂ. 50, 53 ಮತ್ತು 57ರ ಅಡಿಯಲ್ಲಿ ಅರ್ಜಿ ಸಲ್ಲಿಸಿರುವ ಅರ್ಹ ರೈತರಿಗೆ ತಕ್ಷಣ ಸಾಗುವಳಿ ಚೀಟಿ ವಿತರಣೆ ಮಾಡಬೇಕು ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗೆ ಕೃಷ್ಣಾ ನದಿ ನೀರಿನ ಹಂಚಿಕೆ ಒದಗಿಸಬೇಕು ಎಂದು ಕರ್ನಾಟಕ ಪ್ರಾಂತ ರೈತ ಸಂಘ ಹಾಗೂ ರೈತ ನಾಯಕರು ಆಗ್ರಹಿಸಿದ್ದಾರೆ.
ಪಟ್ಟಣದಲ್ಲಿ ನಡೆದ ಎಂಟನೇ ಗುಡಿಬಂಡೆ ತಾಲೂಕು ರೈತ ಸಂಘದ ಸಮ್ಮೇಳನದಲ್ಲಿ ರೈತರ ಬೇಡಿಕೆಗಳನ್ನು ಚರ್ಚಿಸಿ ಸರ್ಕಾರಕ್ಕೆ ಮನವಿ ಸಲ್ಲಿಸಲು ಸಭೆಯಲ್ಲಿಯೇ ನಿರ್ಧಾರ ಕೈಗೊಳ್ಳಲಾಯಿತು. ರೈತರ ಹಕ್ಕುಗಳು, ಬೆಳೆ ಬೆಲೆ, ನೀರಿನ ಸಮಸ್ಯೆ, ವಿದ್ಯುತ್ ಹಾಗೂ ಸಾರಿಗೆ ಸೇರಿದಂತೆ ಹಲವು ವಿಷಯಗಳು ಸಭೆಯಲ್ಲಿ ಪ್ರಬಲವಾಗಿ ಚರ್ಚೆಗೆ ಬಂದವು.
ಸಭೆಯಲ್ಲಿ ಅಂಗೀಕರಿಸಲಾದ ಪ್ರಮುಖ ನಿರ್ಣಯಗಳ ಪ್ರಕಾರ, ತಾಲೂಕಿನಲ್ಲಿ ತಕ್ಷಣ ಮೆಕ್ಕೆಜೋಳ ಖರೀದಿ ಕೇಂದ್ರ ಆರಂಭಿಸಿ ಪ್ರತಿ ಕ್ವಿಂಟಾಲ್‌ಗೆ ರೂ. 3,000 ನಿಗದಿ ಮಾಡಬೇಕು ಮತ್ತು ತಾಲೂಕಿನಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ (APMC) ಸ್ಥಾಪಿಸಬೇಕು ಎಂದು ಒತ್ತಾಯಿಸಲಾಯಿತು. ಗ್ರಾಮ ಹಾಗೂ ನಗರ ಮಟ್ಟದಲ್ಲಿ ಮನೆಗಳು ಹಾಗೂ ಪಂಪ್‌ಸೆಟ್‌ಗಳಿಗೆ ಅಳವಡಿಸಲಾಗುತ್ತಿರುವ ಸ್ಮಾರ್ಟ್ ಮೀಟರ್ ಮಾರ್ಪಾಡನ್ನು ತಕ್ಷಣ ನಿಲ್ಲಿಸಬೇಕೆಂದು ಸಭೆಯಲ್ಲಿ ತೀರ್ಮಾನಿಸಲಾಯಿತು.
ಹೈನುಗಾರಿಕೆಗೆ ಸಂಬಂಧಿಸಿದಂತೆ, ಕಾಂಗ್ರೆಸ್ ಸರ್ಕಾರ ಪ್ರಕಟಿಸಿದ್ದ ಭರವಸೆಯಂತೆ ಹಾಲಿಗೆ ಲೀಟರ್‌ಗೆ ರೂ. 7 ಪ್ರೋತ್ಸಾಹ ಧನ ನೀಡಬೇಕು ಹಾಗೂ ಹಾಲಿನ ದರವನ್ನು ರೂ. 50ಕ್ಕೆ ಏರಿಸಬೇಕು ಎಂದು ನಿರ್ಧರಿಸಲಾಯಿತು. ತಾಲೂಕಿನಲ್ಲಿ ಕೆಎಸ್‌ಆರ್‌ಟಿಸಿ ಡಿಪೋ ಸ್ಥಾಪನೆ, ಪ್ರತಿಯೊಂದು ಗ್ರಾಮಕ್ಕೂ ಬಸ್ ಸೌಲಭ್ಯ ಮತ್ತು ಆಲೂಗಡ್ಡೆ ಹಾಗೂ ದಾಳಿಂಬೆ ಬೆಳೆಗಾರರಿಗೆ ಶೀತಲ ಶೇಖರಣಾ ಘಟಕಗಳ ಅವಶ್ಯಕತೆ ಪ್ರಸ್ತಾಪಿಸಲಾಯಿತು.
ನರೇಗಾ ಯೋಜನೆಯಡಿ ಕುರಿ, ಮೇಕೆ, ಹಂದಿ ಮತ್ತು ಈರುಳ್ಳಿ ಘಟಕಗಳಿಗೆ ನೀಡಲಾಗುವ ಸಹಾಯಧನವನ್ನು ರೂ. 1.50 ಲಕ್ಷಕ್ಕೆ ಹೆಚ್ಚಿಸಬೇಕು, ಸರ್ಕಾರಿ ಕಚೇರಿಗಳಲ್ಲಿನ ಭ್ರಷ್ಟಾಚಾರ ತಡೆಯಬೇಕು ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಕೇಂದ್ರ ಕಚೇರಿಯಲ್ಲಿಯೇ ವಾಸ್ತವ್ಯ ಹೂಡಬೇಕು ಎಂಬ ನಿರ್ಣಯಗಳನ್ನೂ ಸಭೆಯಲ್ಲಿ ಅಂಗೀಕರಿಸಲಾಯಿತು.
ಸಮ್ಮೇಳನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಭಾಗವಹಿಸಿದ್ದು, ಬೇಡಿಕೆಗಳ ನೆರವೇರಿಕೆಗೆ ಹೋರಾಟ ತೀವ್ರಗೊಳಿಸುವುದಾಗಿ ರೈತ ಸಂಘ ಎಚ್ಚರಿಕೆ ನೀಡಿದೆ.
ವರದಿ : ಜೆ.ಎನ್. ಕೃಷ್ಣಾರೆಡ್ಡಿ
