ಅಂದು ಆ ನಿರ್ಧಾರ ಮಾಡಿದ್ದರೆ, ಇಂದು ಹೂ ಹಾಕಿ ಸ್ವಾಗತಿಸಲು ಇವರು ಸಿಗುತ್ತಿರಲಿಲ್ಲ…

ಖಿದ್ಮಾ ಕನ್ನಡ ಸಂಗಮ ಎಂಬ ಮಹತ್ವಾಕಾಂಕ್ಷೆಯ ಕಾರ್ಯಕ್ರಮದೊಂದಿಗೆ ಸಾಂಸ್ಕೃತಿಕ ನಗರಿ ಮೈಸೂರು ತಲುಪಿದಾಗ, ಮೊದಲು ಕೈ ಹಿಡಿದು ಮುನ್ನಡೆಸಿದವರು ಮುಹಮ್ಮದ್ ಹುಮಾಯೂನ್ ಸಾರ್. ಕಾರ್ಯಕ್ರಮದ ಆಶಯ ಹೇಳುವಾಗ ತಾಳ್ಮೆ ಮತ್ತು ವಿನಯದಿಂದ ಆಲಿಸಿದರು. ಸಾಧಕ ಬಾದಕಗಳ ಬಗ್ಗೆ ಸುದೀರ್ಘ ಚರ್ಚಿಸಿದರು. ಧನಾತ್ಮಕ ಸಲಹೆ ನೀಡಿದರು. ರೂಪರೇಷಗಳ ರೇಖೆಯನ್ನು ಬಿಡಿಸಿಕೊಟ್ಟರು. ನನ್ನಂತೆ, ಅವರಿಗೂ ಕೂಡ ಕಾರ್ಯಕ್ರಮದ ಯಶಸ್ಸು ಮುಖ್ಯವಾಗಿತ್ತು ಎಂಬುವುದಕ್ಕೆ ಅವರ ಒಂದೊಂದು ಮಾತುಗಳೇ ಸಾಕ್ಷಿ. ಒಂದುವರೆ ತಿಂಗಳುಗಳ ಕಾಲ ಕಾರ್ಯಕ್ರಮಕ್ಕಾಗಿ ಎಲ್ಲ ಅರ್ಥದಲ್ಲೂ ಸಹಕಾರ ನೀಡಿದರು. ಕಾರ್ಯಕ್ರಮದ ಯಶಸ್ಸಿನ ಮೊಟ್ಟಮೊದಲ ರುವಾರಿಯಾಗಿ ಅವರನ್ನೇ ಕಾಣುವೆ.‌

ಪ್ರಸ್ತುತ ಕಾರ್ಯಕ್ರಮದ ಕೇಂದ್ರ ಬಿಂದು ವಿದ್ಯಾರ್ಥಿಗಳಾಗಿದ್ದರು. ಅವರಿಗಾಗಿ, ಅವರ ಪ್ರತಿಭೆಗಳ ಪ್ರದರ್ಶನಕ್ಕಾಗಿ ಆಯೋಜಿಸಲಾಗಿದ್ದ ಕಾರ್ಯಕ್ರಮದ ಮಾಹಿತಿಯನ್ನು ವಿದ್ಯಾರ್ಥಿಗಳಿಗೆ ಪೋಷಕರ ಮತ್ತು ಅಧ್ಯಾಪಕರ ಮೂಲಕ ತಲುಪಿಸಿದರು. ಸಂಜೆ ತರಗತಿ ಮುಗಿಸಿ ಬಂದು ತನ್ನ ಒಂದಿಷ್ಟು ಸಮಯವನ್ನು ಅದಕ್ಕಾಗಿ ಪ್ರತಿನಿತ್ಯವೂ ಮೀಸಲಿರಿಸುತ್ತಿದ್ದರು ಎಂದು ಅವರ ಪತ್ನಿಯೇ ಹೇಳುತ್ತಾರೆ. ಅವರ ಈ ಪ್ರಾಮಾಣಿಕ ಸೇವೆಯಿಂದ ಬಹಳಷ್ಟು ವಿದ್ಯಾರ್ಥಿಗಳು ಖಿದ್ಮಾ ಕನ್ನಡ ಸಂಗಮದ ವೇದಿಕೆಯನ್ನು ಸಮರ್ಪಕವಾಗಿ ಸದ್ಬಳಕೆ ಮಾಡಿಕೊಂಡರು. ಅದರ ಪರಿಣಾಮ, ಅವರಿಗೆ ಬಹುಮಾನಗಳನ್ನು ಪಡೆದುಕೊಳ್ಳಲು ಸಾಧ್ಯವಾಯಿತು. ಕಾರ್ಯಕ್ರಮದ ಸಂಜೆ ಬಹುಮಾನ ವಿಜೇತರಾದ ವಿದ್ಯಾರ್ಥಿಗಳಿಂದ ಒಂದೆರಡು ವಿದ್ಯಾರ್ಥಿಗಳನ್ನು ವೈಯಕ್ತಿಕವಾಗಿ ಪರಿಚಯಸಿದರು. ಇವರಲ್ಲಿ ಉತ್ತಮವಾದ ಪ್ರತಿಭೆಗಳು ಹಡಗಿವೆ. ಅದನ್ನು ಹೊರ ತರಲು ಸೂಕ್ತವಾದ ವೇದಿಕೆ ಅವರಿಗೆ ದೊರಕಲಿಲ್ಲ. ಖಿದ್ಮಾ ಫೌಂಡೇಶನ್ ಕರ್ನಾಟಕ ಅವಕಾಶ ಕೊಟ್ಟಿತು. ಆ ಕಾರಣಕ್ಕೆ ಇವರ ಕೈಯಲ್ಲಿ ಈ ಬಹುಮಾನಗಳಿವೆ ಎಂದು ವಿದ್ಯಾರ್ಥಿಗಳ ಪರ ಸಂಘಟನೆಗೆ ಧನ್ಯವಾದ ಸೂಚಿಸಿದ ಘಳಿಗೆಯನ್ನು ನಿಜಕ್ಕೂ ಕಣ್ತುಂಬಿಸಿಕೊಂಡೆ. ಹೀಗೆ ಒಳಿತಿಗಾಗಿ ಮತ್ತು ಇತರರ ಯಶಸ್ಸು ಹಾಗೂ ಅಭಿವೃದ್ಧಿಗಾಗಿ ಸದಾ ಮಿಡಿಯುವ ವ್ಯಕ್ತಿತ್ವ ಮುಹಮ್ಮದ್ ಹುಮಾಯೂನ್ ಸಾರ್ ಅವರದ್ದು. ಏನೇ ವಿಚಾರವನ್ನು ಹೇಳಿದರೂ ತಾಳ್ಮೆಯಿಂದ ಕೇಳಿಸಿಕೊಳ್ಳುತ್ತಾ, ಅದರ ಬಗೆಗಿನ ಮುಕ್ತವಾದ ಅಭಿಪ್ರಾಯವನ್ನು ಹಂಚುವ ಗುಣ ಅವರನ್ನು ವಿಶೇಷಗೊಳಿಸುತ್ತದೆ. ಯಾರ ಭಾವನೆಗಳಿಗೂ ಘಾಸಿಗೊಳಿಸದ ಸೂಕ್ಷ್ಮತೆ ಅವರಲ್ಲಿದೆ. ಅದಕ್ಕಿರುವ ಕಾರಣವಾಗಿ ಅವರನ್ನೇ ಕೊಡಬಲ್ಲೆ. ಅವರು ಬಂದ ದಾರಿ, ಅನುಭವಿಸಿದ ಅವಮಾನ, ಸಹಿಸಿದ ನೋವು, ಎದುರಿಸಬೇಕಾಗಿ ಬಂದ ಕಷ್ಟ ನಷ್ಟಗಳು ಅವರನ್ನು ಅವರನ್ನಾಗಿ ಮಾರ್ಪಾಡುಗೊಳಿಸಿದೆ.

ಶಿಕ್ಷಣವನ್ನು ಸದಾ ಗೌರವಿಸುವ, ಅದನ್ನು ಕರಗತ ಮಾಡಲು ಹಂಬಲಿಸುವ ಮನಸ್ಸು ಅವರದ್ದು. ವಿದ್ಯೆಯನ್ನು ನಾವು ಗೌರವಿಸಿದರೆ, ವಿದ್ಯೆಯು ನಮಗೆ ಗೌರವ ತಂದು ಕೊಡುತ್ತದೆ. ಇತರರ ಮುಂದೆ ತಲೆಯೆತ್ತಿ ನಡೆಯುವಂತೆ ಮಾಡುತ್ತದೆ, ಯಾರ ಮುಂದೆಯೂ ತಲೆತಗ್ಗಿಸದಂತಯೂ ಕಾಪಾಡುವ ಶಕ್ತಿ ವಿದ್ಯೆಗಿದೆ ಎನ್ನುತ್ತಾರೆ. ಅವರದ್ದು ವಿದ್ಯೆಯನ್ನು ಗೌರವಿಸುವ ಬದುಕು ಎಂಬುದನ್ನು ಬಹಳ ಹತ್ತಿರದಿಂದ ಬಲ್ಲವನು. ನಾನು ಕಳೆದ ಹಲವು ವರ್ಷಗಳಿಂದ ಅವರಲ್ಲಿ ಅದನ್ನು ಕಾಣುತ್ತಿರುವೆ. ಸಮಾಜ ವಿಜ್ಞಾನ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿರುವ ಇವರು ಶಿಕ್ಷಣ ಕ್ಷೇತ್ರದಲ್ಲಿ ತನ್ನನ್ನು ತಾನು ಕಳೆದ 20 ವರ್ಷಗಳಿಂದ ತೊಡಗಿಸಿಕೊಂಡಿದ್ದಾರೆ. ರಾಜ್ಯದ ಬಹುತೇಕ ಜಿಲ್ಲೆಗಳಿಗೆ ತೆರಳಿ ಅಲ್ಲಿನ ವಿದ್ಯಾರ್ಥಿಗಳಿಗೆ ಪ್ರತ್ಯೇಕವಾದ ತರಬೇತಿಯನ್ನು ನೀಡಿದ್ದಾರೆ, ಇಂದಿಗೂ ನೀಡುತ್ತಿದ್ದಾರೆ. ತನ್ನ ಹೆಚ್ಚಿನ ಸಮಯವನ್ನು ಕುಟುಂಬಕ್ಕಿಂತ ವಿಧ್ಯಾರ್ಥಿಗಳಿಗೆ ನೀಡುತ್ತಿರುವುದು ನನಗೆ ಹೆಮ್ಮೆಯ ವಿಚಾರವೆಂದು ಅವರ ಧರ್ಮಪತ್ನಿ ಶ್ರೀಮತಿ ಅಸ್ಮಾ ಮೇಡಂ ಸಂತೋಷದಿಂದ ಹೇಳುತ್ತಾರೆ. ದೂರ ದೂರದ ಊರುಗಳಿಗೆ ತೆರಳಿ, ತರಬೇತಿ ನೀಡಿ ಮನೆಗೆ ಹಿಂತಿರುಗುವಾಗ ತಡವಾದರೂ ತಂದೆಗಾಗಿ ಕಾಯುತ್ತಾ ಕೂತಿರುವ ತನ್ನ ಮುದ್ದು ಮಗನಾದ ಮುಹಮ್ಮದ್ ಜುನೈದ್ ನನ್ನು ಮಾರನೇ ದಿನದ ಶಾಲಾ ಚಟುವಟಿಕೆಗಳನ್ನು ಕೇಳಿ ಸಮಾಧಾನಪಡಿಸುವ ವಾಡಿಕೆ ಇವರದ್ದು. ತಾಸುಗಟ್ಟಲೆ ತರಬೇತಿ ನೀಡಿ ಬರುವಾಗ ಅದೆಷ್ಟು ಆಯಾಸಗೊಂಡರು, ಮಗನ ಶೈಕ್ಷಣಿಕ ಚಟುವಟಿಕೆಗಳ ಬಗ್ಗೆ ಕೇಳದೆ ಒಂದು ದಿನ ಮಲಗಿಲ್ಲ ಎಂಬ ಕಾಳಜಿಯ ಮಾತು ಎಲ್ಲಾ ಪೋಷಕರಿಗೂ ಆದರ್ಶವಾಗಲಿ. ಮೊದಲು ನಾನು ನನ್ನ ಮಕ್ಕಳ ಬಗ್ಗೆ ಕಾಳಜಿ ತೋರಬೇಕು.‌ ಆದರೆ ಮಾತ್ರ ಇತರ ಮಕ್ಕಳ ಮೇಲೆ ಕಾಳಜಿ ತೋರುವುದಕ್ಕೆ ಅರ್ಥ ಸಿಗುವುದು. ಈ ಮಾತಿಗೆ ನಾನು ಮತ್ತೊಮ್ಮೆ ಅವರ ಅಭಿಮಾನಿಯಾದೆ. ಅದನ್ನು ವಿವರಿಸಿ ಅವರು ಹೀಗೆ ಹೇಳಿದರು, “ನೋಡಿ ಊರು ಊರುಗಳಿಗೆ ಹೋಗಿ ಪಾಠ ಹೇಳಿ ಬರುವಾಗ ಆಯಾಸ ಸಹಜ. ಮಾರನೇ ದಿನದ ತರಗತಿಗೆ ತಯಾರಿ ಬೇರೆ ನಡೆಸಬೇಕು. ಇದೇ ನೆಪ ಹೇಳಿ ನಮ್ಮ ಮನೆಯ ಮಕ್ಕಳ ಬಗ್ಗೆ ನಿರ್ಲಕ್ಷ್ಯ ಧೋರಣೆ ತೋರಿದರೆ ಹೇಗೆ?. ಕೆಲವರ ಮನೆಯಲ್ಲಿ ಇದು ನಡೆಯುತ್ತದೆ. ಹಾಗೆ ಆಗಬಾರದು.” ಎಂದು ಮಕ್ಕಳ ಬಗೆಗಿನ ಕಾಳಜಿಯನ್ನು ಮತ್ತೊಮ್ಮೆ ಸಾಬೀತುಪಡಿಸಿದರು. ಅವರಂತೆಯೇ ಪತ್ನಿ ಅಸ್ಮಾ ಮೇಡಂ ಕೂಡ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇಬ್ಬರಿಗೂ ಒಳ್ಳೆಯದಾಗಲಿ.

ಹುಮಾಯೂನ್ ಸರ್ ಅವರ ಬದುಕಿಗೆ ರೋಚಕ ಕಥೆಗಳು ಹೇಳಲಿಕ್ಕಿದೆ. ಆ ದಿನ, ಆ ದಾರಿಯನ್ನು ಹಿಡಿದಿದ್ದರೆ, ಈ ದಿನ ಈ ದಾರಿಯಲ್ಲಿ ಹೂ ಹಾಕಿ ಸ್ವಾಗತಿಸಲು ಇವರನ್ನು ಸಿಗುತ್ತಿರಲಿಲ್ಲ.

•ಆಮಿರ್ ಅಶ್ಅರೀ ಬನ್ನೂರು

error: Content is protected !!