FEMA ಉಲ್ಲಂಘನೆ, ವಿದೇಶಿ ಹೂಡಿಕೆ ಆರೋಪದಡಿ 4 ನಗರಗಳಲ್ಲಿ ಶೋಧ – ಸಚಿವರ 4 ಪಾಯಿಂಟ್ ಸ್ಪಷ್ಟನೆ
ಬೆಂಗಳೂರು: ರಾಜ್ಯ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಮತ್ತು ಅವರ ಕುಟುಂಬಸ್ಥರಿಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ED) ಬೆಂಗಳೂರು ವಲಯ ಭಾರೀ ಕಾರ್ಯಾಚರಣೆ ನಡೆಸಿದೆ.
ED ಪತ್ರಿಕಾ ಪ್ರಕಟಣೆ ಪ್ರಕಾರ:
ಸೆಪ್ಟೆಂಬರ್ 09 ಮತ್ತು 10 ರಂದು ಬೆಂಗಳೂರು, ಬೆಳಗಾವಿ, ಗೋಕಾಕ ಮತ್ತು ಕೋಲ್ಕತ್ತಾದ ಒಟ್ಟು *21 ಸ್ಥಳಗಳಲ್ಲಿ* ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (FEMA) ಅಡಿ ಶೋಧ ಕಾರ್ಯಾಚರಣೆ ನಡೆಸಲಾಗಿದೆ.
ಶೋಧದಲ್ಲಿ ಏನು ಸಿಕ್ತು?
– ₹3.3 ಕೋಟಿಗೂ ಹೆಚ್ಚು ಲೆಕ್ಕಕ್ಕೆ ಸಿಗದ ಭಾರತೀಯ ನಗದು
– ಸುಮಾರು ₹15 ಲಕ್ಷ ಮೌಲ್ಯದ ಅಮೆರಿಕನ್ ಡಾಲರ್, ಯೂರೋ ಸೇರಿದಂತೆ ವಿದೇಶಿ ಕರೆನ್ಸಿ
– ಹಲವು ದಾಖಲೆಗಳು ಮತ್ತು ಸಾಕ್ಷ್ಯಾಧಾರಗಳು ವಶಪಡಿಸಿಕೊಳ್ಳಲಾಗಿದೆ
ಜಾರಕಿಹೊಳಿ ಕುಟುಂಬದವರು ವಿದೇಶಗಳಲ್ಲಿ ಹೊಂದಿರುವ ಹೂಡಿಕೆ, ಗಡಿ ದಾಟಿದ ವ್ಯವಹಾರ ಮತ್ತು ಶಂಕಿತ ಹಣಕಾಸು ಅಕ್ರಮಗಳ ಕುರಿತು ಮಾಹಿತಿ ಸಂಗ್ರಹಿಸಲು ಈ ದಾಳಿ ನಡೆಸಲಾಗಿದೆ ಎಂದು ED ತಿಳಿಸಿದೆ.
ಈ ಪ್ರಕರಣದಲ್ಲಿ ಚಿಕ್ಕೋಡಿ ಸಂಸದೆ ಪ್ರಿಯಾಂಕಾ ಜಾರಕಿಹೊಳಿ, ರಾಹುಲ್ ಜಾರಕಿಹೊಳಿ, ಅಳಿಯ ವೈ.ಡಿ. ಮಂಜುನಾಥ್ ಹಾಗೂ ಆಪ್ತರಾದ ಮಲಗೌಡ ಪಾಟೀಲ್, ರಾಜು ದರಗಶೆಟ್ಟಿ, ವಿಠ್ಠಲ್ ಪರಸನ್ನವರ್, ಡಾ. ಗಿರೀಶ್ ಸೋನವಲ್ಕರ್ ಹೆಸರು ಕೇಳಿಬಂದಿದ್ದು, ಕಾಂಗೋ ದೇಶದ M/s Eldorado Mining Resources, M/s Nava Aurum Mining Ltd, M/s Magnitude Star SARL ಸಂಸ್ಥೆಗಳ ನಂಟಿನ ಬಗ್ಗೆಯೂ ತನಿಖೆ ನಡೆಯುತ್ತಿದೆ.
ಸಚಿವ ಸತೀಶ್ ಜಾರಕಿಹೊಳಿ ಅವರ 4 ಪಾಯಿಂಟ್ ಹೇಳಿಕೆ
:
ಈ ದಾಳಿ ಬಳಿಕ ಸಚಿವ ಸತೀಶ್ ಜಾರಕಿಹೊಳಿ ಪ್ರತಿಕ್ರಿಯಿಸಿದ್ದು,
• “₹2 ಕೋಟಿ ನಮ್ಮದೇ ಹಣ, ನಮ್ಮ ವರ್ಷದ ವಹಿವಾಟೇ 2000 ಕೋಟಿ ಇದೆ. ಇದನ್ನು ಕಾನೂನಾತ್ಮಕವಾಗಿ ಕ್ಲೇಮ್ ಮಾಡ್ತೀವಿ”
• “ನಾವು ವಿದೇಶದಲ್ಲಿ ಹೂಡಿಕೆ ಮಾಡಿಲ್ಲ, ಆಫ್ರಿಕಾದಲ್ಲಿ ಹೂಡಿಕೆ ಮಾಡುವ ಯೋಜನೆ ಇದೆ, RBI ಅನುಮತಿಗಾಗಿ ಪ್ರಕ್ರಿಯೆ ನಡೆಯುತ್ತಿದೆ”
• “ಇದು ರಾಜಕೀಯ ಪ್ರೇರಿತ ದಾಳಿ, ನಾನೇ ಮೊದಲಲ್ಲ, ಇನ್ನೂ ದೊಡ್ಡ ದೊಡ್ಡ ಮೀನುಗಳಿವೆ, ಅವುಗಳನ್ನು ಬಿಟ್ಟು ನಮ್ಮ ಹತ್ರ ಬಂದಿದ್ದಾರೆ”
• “ಇದು ಪೂರ್ಣ ಪ್ರಮಾಣದ ದಾಳಿ ಅಲ್ಲ, ಕೇವಲ ಸರ್ಚ್ ಆಪರೇಷನ್, ಅಧಿಕಾರಿಗಳು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ್ದೇನೆ, ನೋಟಿಸ್ ಬಂದರೆ ಕಾನೂನು ಪ್ರಕಾರ ಉತ್ತರ ಕೊಡ್ತೀನಿ” ಎಂದಿದ್ದಾರೆ.
ವರದಿ : ಸದಾನಂದ ಎಂ
