ಹುಕ್ಕೇರಿ: ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಹುಕ್ಕೇರಿ ತಾಲೂಕು ಘಟಕದ ಅಧ್ಯಕ್ಷ ಸ್ಥಾನಕ್ಕೆ ಸಂಬಂಧಿಸಿದಂತೆ ಎದ್ದಿರುವ ಗೊಂದಲಕ್ಕೆ ರಾಜ್ಯ ನಾಯಕರು ತೆರೆ ಎಳೆದಿದ್ದಾರೆ.
ಸುಮಾರು 3 ತಿಂಗಳ ಹಿಂದೆ ಹುಕ್ಕೇರಿ ಬಸವೇಶ್ವರ ಸರ್ಕಲ್ನಲ್ಲಿ ನಡೆದ ‘ನಮ್ಮ ನೀರು, ನಮ್ಮ ಹಕ್ಕು’ ಹೋರಾಟದ ವೇಳೆ ರಾಜ್ಯ ಗೌರವ ಅಧ್ಯಕ್ಷರಾದ ಪರಮಪೂಜ್ಯ ಶಶಿಕಾಂತ ಗುರೂಜಿ ಹಾಗೂ ಶ್ರೀ ಚುನ್ನಪ್ಪಾ ಪೂಜೇರಿ ಅವರ ನೇತೃತ್ವದಲ್ಲಿ *ನಾಗರಾಜ ಹಾದಿಮನಿ* ಅವರನ್ನು ಹುಕ್ಕೇರಿ ತಾಲೂಕು ಅಧ್ಯಕ್ಷರಾಗಿ ಮತ್ತು *ಸಂಜು ಹಾವನ್ನವರ* ಅವರನ್ನು ಜಿಲ್ಲಾ ಸಮಿತಿ ಮುಖಂಡರಾಗಿ ಆಯ್ಕೆ ಮಾಡಲಾಗಿತ್ತು.
ಆದರೆ ಇತ್ತೀಚೆಗೆ ಸಂಜು ಹಾವನ್ನವರ ಅವರು ತಾವೇ ತಾಲೂಕು ಅಧ್ಯಕ್ಷರೆಂದು ಸ್ವಯಂಘೋಷಣೆ ಮಾಡಿಕೊಂಡು ಮಾಧ್ಯಮಗಳಿಗೆ ಹೇಳಿಕೆ ನೀಡುತ್ತಿರುವುದು ಗೊಂದಲಕ್ಕೆ ಕಾರಣವಾಗಿತ್ತು.
ಈ ಕುರಿತು ಸೆ.06 ರಂದು ಕಮತನೂರು ಮತ್ತು ಸೆ.10 ರಂದು ಮದಮಕನಾಳ ಗ್ರಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ರಾಜ್ಯ ಗೌರವ ಅಧ್ಯಕ್ಷ *ಶಶಿಕಾಂತ ಗುರೂಜಿ* ಅವರು, “ಹುಕ್ಕೇರಿ ತಾಲೂಕು ಅಧ್ಯಕ್ಷರು ನಾಗರಾಜ ಹಾದಿಮನಿ ಅವರೇ, ಬೇರೆ ಯಾರೂ ಅಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ. ಇದರ ವಿಡಿಯೋ ಕೂಡ ಲಭ್ಯವಿದೆ.
ಈ ಕುರಿತು ಪ್ರತಿಕ್ರಿಯಿಸಿದ *ನಾಗರಾಜ ಹಾದಿಮನಿ* ಅವರು, “ಇದು ಮೂರನೇ ಬಾರಿಗೆ ನಡೆಯುತ್ತಿರುವ ಗೊಂದಲ. ಯಾರು ಬೇಕಾದರೂ ತಾವೇ ಅಧ್ಯಕ್ಷರೆಂದು ಹೇಳಿಕೊಂಡರೆ ಸಂಘಟನೆಗೆ ಧಕ್ಕೆಯಾಗುತ್ತದೆ. ನಾವು ವೈಯಕ್ತಿಕ ಜೀವನ ಬಿಟ್ಟು ರೈತರ ಕಲ್ಯಾಣಕ್ಕಾಗಿ ಹಗಲಿರುಳು ಶ್ರಮಿಸುತ್ತಿದ್ದೇವೆ, ಇಂತಹ ಬೆಳವಣಿಗೆ ಬೇಸರ ತರುತ್ತದೆ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಒಂದೇ ಸಂಘಟನೆಯಲ್ಲಿ ‘ನಾನು, ನಾನು’ ಎಂದು ನಾಯಕತ್ವಕ್ಕಾಗಿ ಗೊಂದಲ ಸೃಷ್ಟಿಯಾದರೆ ರೈತರ ಒಗ್ಗಟ್ಟಿಗೆ ಹಾನಿಯಾಗುತ್ತದೆ ಎಂದು ರಾಜ್ಯ ನಾಯಕರು ಎಚ್ಚರಿಸಿದ್ದಾರೆ.
