34ನೇ ವರ್ಷದ ನಾಗಸ್ವಾಮಿ ಗಣೇಶೋತ್ಸವ; ಭಾನುವಾರ ಅದ್ಧೂರಿ ಶೋಭಾಯಾತ್ರೆ

ಗೌರಿಬಿದನೂರು ತಾಲ್ಲೂಕು ನಗರಗೆರೆ ಹೋಬಳಿಯ ವಾಟದಹೊಸಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಕೋಟೆಗಡ್ಡೆ ಈಶ್ವರ ದೇವಸ್ಥಾನದ ಆವರಣದಲ್ಲಿ ಶ್ರೀ ವಿನಾಯಕ ಗೆಳೆಯರ ಬಳಗದ ವತಿಯಿಂದ ಶನಿವಾರ ಉಚಿತ ಸಕ್ಕರೆಕಾಯಲೆ ಹಾಗು ರಕ್ತದ ಹೊತ್ತಡದ ಶಿಬಿರ ಹಾಗೂ ಪತ್ರಿಕಾಗೋಷ್ಠಿಯನ್ನು ಏರ್ಪಡಿಸಲಾಗಿತ್ತು

ಶ್ರೀ ವಿನಾಯಕ ಗೆಳೆಯರ ಬಳಗದ ವತಿಯಿಂದ 34ನೇ ವರ್ಷದ ಶ್ರೀ ನಾಗಸ್ವಾಮಿ ಗಣಪತಿ ಉತ್ಸವವನ್ನು ಆಚರಿಸಲಾಗುತ್ತಿದ್ದು, ಇದರ ಅಂಗವಾಗಿ ಭಾನುವಾರ ಗಣೇಶ ಮೂರ್ತಿಯ ವಿಸರ್ಜನೆ ಹಾಗೂ ಅದ್ಧೂರಿ ಶೋಭಾಯಾತ್ರೆ ಹಮ್ಮಿಕೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ಶನಿವಾರ ಪತ್ರಿಕಾಗೋಷ್ಠಿ ನಡೆಸಿ ಶೋಭಾಯಾತ್ರೆಯ ಸಿದ್ಧತೆಗಳ ಕುರಿತು ಮಾಹಿತಿ ನೀಡಿದರು

ಬಳಗದ ಸದಸ್ಯ ದಿನೇಶ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಸಕ್ಕರೆ ಕಾಯಿಲೆ, ರಕ್ತದೊತ್ತಡ, ಕ್ಯಾನ್ಸರ್, ಥೈರಾಯ್ಡ್ ಸೇರಿದಂತೆ ಹಲವು ಆರೋಗ್ಯ ಸಮಸ್ಯೆಗಳು ಹೆಚ್ಚಾಗುತ್ತಿವೆ. ತುರ್ತು ಸಂದರ್ಭಗಳಲ್ಲಿ ಬಡವರು ಹಾಗೂ ಕೂಲಿ ಕಾರ್ಮಿಕ ವರ್ಗದ ಕುಟುಂಬಗಳಿಗೆ ಅವಶ್ಯಕತೆ ಎದುರಾದಾಗ ನೆರವಾಗುವ ಉದ್ದೇಶದಿಂದ ರಕ್ತದೊತ್ತಡ ಮತ್ತು ಮದುಮೇಹ ಪರೀಕ್ಷಾ ಶಿಬಿರ ಜೀವ ಉಳಿಸುವ ಮಹತ್ವದ ಸೇವೆಯಾಗಿದೆ ಎಂದರು.

ಶಿಬಿರದಲ್ಲಿ ಕೋಟೆಗಡ್ಡೆ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಜನರು ಉತ್ಸಾಹದಿಂದ ಪಾಲ್ಗೊಂಡರು. ಬೆಳಗ್ಗೆಯಿಂದ ಸಂಜೆವರೆಗೆ ಶಿಬಿರದಲ್ಲಿ ಸುಮಾರು ನೂರಾರು ಮಂದಿ ಭಾಗವಹಿಸಿ ಪರೀಕ್ಷಿಸಿಕೊಂಡರು

34ನೇ ವರ್ಷದ ಗಣೇಶೋತ್ಸವದ ಅಂಗವಾಗಿ ಪ್ರತಿದಿನ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಗ್ರಾಮದ ಹಿರಿಯ ನಾಗರಿಕರ ನೇತೃತ್ವದಲ್ಲಿ ಪೌರಾಣಿಕ ನಾಟಕಗಳು ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದ್ದು, ಗ್ರಾಮಸ್ಥರು ಹಾಗೂ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುತ್ತಿದ್ದರು

ಭಾನುವಾರ ಶ್ರೀ ನಾಗಸ್ವಾಮಿ ಗಣೇಶನ ವಿಸರ್ಜನಾ ಕಾರ್ಯಕ್ರಮದ ಅಂಗವಾಗಿ ವಾಟದಹೊಸಹಳ್ಳಿ ಗ್ರಾಮದ ಪ್ರಮುಖ ರಾಜಬೀದಿಗಳಲ್ಲಿ ಶೋಭಾಯಾತ್ರೆ ನಡೆಯಲಿದೆ. ಸುತ್ತಮುತ್ತಲಿನ ಗ್ರಾಮಗಳಿಂದ ಸುಮಾರು 2,000ರಿಂದ 3,000 ಭಕ್ತರು ಭಾಗವಹಿಸುವ ನಿರೀಕ್ಷೆಯಿದೆ ಎಂದು ಆಯೋಜಕರು ತಿಳಿಸಿದರು.

ಶಿಕ್ಷಕ ರಹಮಾನ್ ಖಾನ್ ಮಾತನಾಡಿ, ಕೋಟೆಗಡ್ಡೆ ಗ್ರಾಮದಲ್ಲಿ ಗೌರಿ-ಗಣೇಶ ಹಬ್ಬವನ್ನು ಜಾತಿ, ಧರ್ಮದ ಭೇದವಿಲ್ಲದೆ ಎಲ್ಲರೂ ಒಗ್ಗಟ್ಟಿನಿಂದ ಆಚರಿಸುತ್ತಿರುವುದು ವಿಶೇಷ. ಹಿಂದೂ–ಮುಸ್ಲಿಂ ಸಮುದಾಯದವರು ಪರಸ್ಪರ ಸಹಕಾರದಿಂದ ಗಣೇಶೋತ್ಸವದಲ್ಲಿ ಪಾಲ್ಗೊಂಡು, ಶೋಭಾಯಾತ್ರೆಯಲ್ಲಿ ಒಟ್ಟಾಗಿ ಹೆಜ್ಜೆ ಹಾಕುವ ಮೂಲಕ ಸ್ನೇಹ, ಸೌಹಾರ್ದತೆ ಹಾಗೂ ಸಹಬಾಳ್ವೆಯ ಸಂದೇಶವನ್ನು ಸಾರುತ್ತಿದ್ದಾರೆ ಎಂದರು.

ಹಬ್ಬಗಳು ಕೇವಲ ಧಾರ್ಮಿಕ ಆಚರಣೆಗಳಿಗೆ ಸೀಮಿತವಾಗದೆ, ಸಮಾಜದ ವಿವಿಧ ವರ್ಗಗಳ ಜನರನ್ನು ಒಂದೆಡೆ ಸೇರಿಸಿ ಪರಸ್ಪರ ಪ್ರೀತಿ, ವಿಶ್ವಾಸ ಮತ್ತು ಬಾಂಧವ್ಯವನ್ನು ಬೆಳೆಸುವ ವೇದಿಕೆಗಳಾಗಬೇಕು. ಕೋಟೆಗಡ್ಡೆಯಲ್ಲಿ ನಡೆಯುತ್ತಿರುವ ಗಣೇಶೋತ್ಸವ ಇದಕ್ಕೆ ಉತ್ತಮ ಉದಾಹರಣೆಯಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕಲೀಲ್ ಬಾಬಾ, ವೆಂಕಟೇಶ್, ನಾರಾಯಣಸ್ವಾಮಿ, ಶಾಂತರಾಜು, ಮುರಳಿ, ಕೇಶವ, ಗೋವಿಂದ, ಉಪೇಂದ್ರ ಸೇರಿದಂತೆ ಶ್ರೀ ವಿನಾಯಕ ಗೆಳೆಯರ ಬಳಗದ ಸದಸ್ಯರು, ಗ್ರಾಮದ ಹಿರಿಯ ನಾಗರಿಕರು ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.

error: Content is protected !!