ವಿಜಯಪುರ: ನಗರವನ್ನು ಪ್ರತಿನಿತ್ಯ ಸ್ವಚ್ಛಗೊಳಿಸಿ ಜನರ ಆರೋಗ್ಯ ಕಾಪಾಡುವ ಪೌರಕಾರ್ಮಿಕರ ಸೇವೆಯನ್ನು ಗುರುತಿಸಿ ಭಾರತೀಯ ಜನತಾ ಪಕ್ಷದ ನಗರ ಘಟಕದ ವತಿಯಿಂದ ಗೌರವಪೂರ್ವಕ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ನಗರದ ಸಾಯಿ ಗಾರ್ಡನ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು 750ಕ್ಕೂ ಹೆಚ್ಚು ಪೌರಕಾರ್ಮಿಕರಿಗೆ ಉಡುಗೊರೆ ನೀಡಿ, ಪುಷ್ಪವೃಷ್ಟಿಗೈದು ಸನ್ಮಾನಿಸಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ವಿಜಯೇಂದ್ರ, ನಮ್ಮ ನಾಡು ಸ್ವಚ್ಛವಾಗಿರಲು ಪೌರಕಾರ್ಮಿಕರ ಶ್ರಮವೇ ಕಾರಣ. ಅವರು ಸ್ವಚ್ಛತೆಯ ರಾಯಭಾರಿಗಳು. ಪೌರಕಾರ್ಮಿಕರ ಬಗ್ಗೆ ಬಿಜೆಪಿಗೆ ಅಪಾರ ಗೌರವವಿದೆ. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಕೋವಿಡ್ ಸಂದರ್ಭದಲ್ಲಿ ಪೌರಕಾರ್ಮಿಕರಿಗೆ ವಿಶೇಷ ಕಾರ್ಯಕ್ರಮ ರೂಪಿಸಿದ್ದರು. ಬಸವರಾಜ ಬೊಮ್ಮಾಯಿ ಅವರು 5 ಸಾವಿರಕ್ಕೂ ಹೆಚ್ಚು ಪೌರಕಾರ್ಮಿಕರ ಸೇವೆಯನ್ನು ಖಾಯಂಗೊಳಿಸಿದ್ದರು. ಇದು ನಮ್ಮ ಪಕ್ಷದ ಬದ್ಧತೆಗೆ ಸಾಕ್ಷಿ ಎಂದರು.
ಪ್ರಧಾನಿ ನರೇಂದ್ರ ಮೋದಿ ಅವರು ಪೌರಕಾರ್ಮಿಕರ ಪಾದಪೂಜೆ ಮಾಡುವ ಮೂಲಕ ಗೌರವ ನೀಡಿದ್ದಾರೆ. ಅವರ ಆದರ್ಶದಂತೆ ನಾವೆಲ್ಲರೂ ಪೌರಕಾರ್ಮಿಕರನ್ನು ಗೌರವಿಸಬೇಕು. ಪೌರಕಾರ್ಮಿಕರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿ ಉನ್ನತ ಹುದ್ದೆಗೆ ತರಬೇಕು ಎಂದರು.
750ಕ್ಕೂ ಹೆಚ್ಚು ಪೌರಕಾರ್ಮಿಕರಿಗೆ ಒಂದೇ ವೇದಿಕೆಯಲ್ಲಿ ಸನ್ಮಾನ ಮಾಡಿರುವುದು ಅದ್ಭುತ ಕಾರ್ಯ. ಇದರ ರೂವಾರಿ ಉಮೇಶ ಕಾರಜೋಳ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಈ ಕಾರ್ಯಕ್ರಮವನ್ನು ಬಿಜೆಪಿ ಎಸ್.ಸಿ. ಮೋರ್ಚಾ ರಾಜ್ಯ ಉಪಾಧ್ಯಕ್ಷ ಉಮೇಶ ಕಾರಜೋಳ ಅವರ ಸಾರಥ್ಯದಲ್ಲಿ ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ, ಮೇಯರ್, ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ಉಪಮೇಯರ್ ಸುಮಿತ್ರಾ ಜಾಧವ, ನಗರಾಧ್ಯಕ್ಷ ಸಂದೀಪ ಪಾಟೀಲ ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು.
ವರದಿ: ಅಜೀಜ್ ಪಠಾಣ್, ವಿಜಯಪುರ ಜಿಲ್ಲಾ ವರದಿಗಾರ
