ಅಂಬೇಡ್ಕರ್ ಚಿಂತನೆಗಳನ್ನು ಅನುಸರಿಸಿ: ಶಾಸಕ ಪ್ರಭು ಚವ್ಹಾಣ

ಡಾ.ಬಿ.ಆರ್ ಅಂಬೇಡ್ಕರ್ ಅವರು ಮಾನವ ಹಕ್ಕುಗಳು, ಸಮಾನತೆ ಮತ್ತು ಭಾತೃತ್ವದ ಸ್ಥಾಪನೆಗೆ ಹೋರಾಡಿದ ಮಹಾನಾಯಕ. ಅವರ ಚಿಂತನೆಗಳನ್ನು ಎಲ್ಲರೂ ಅನುಸರಿಸಬೇಕಾದ ಅವಶ್ಯಕತೆಯಿದೆ ಎಂದು ಮಾಜಿ ಸಚಿವರು ಹಾಗೂ ಔರಾದ(ಬಿ) ಶಾಸಕರಾದ ಪ್ರಭು.ಬಿ ಚವ್ಹಾಣ ಅವರು ತಿಳಿಸಿದರು.

ಔರಾದ(ಬಿ) ತಾಲ್ಲೂಕಿನ ಬೋರಾಳ ಗ್ರಾಮದ ಬುದ್ದವಿಹಾರಲ್ಲಿ ಡಿ.6ರಂದು ನಡೆದ ಡಾ.ಬಿಆರ್ ಅಂಬೇಡ್ಕರ್ ಅವರ 68ನೇ ಮಹಾಪರಿನಿರ್ವಾಣ ದಿನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಡಾ.ಬಿ.ಆರ್ ಅಂಬೇಡ್ಕರ್ ಅವರು ದೇಶ ಕಂಡ ಅಪರೂಪದ ನಾಯಕ. ದೇಶದಲ್ಲಿ ತಾಂಡವವಾಡುತ್ತಿದ್ದ ಅಸಮಾನತೆ ಹಾಗೂ ಮತ್ತಿತರೆ ಸಾಮಾಜಿಕ ಸಮಸ್ಯೆಗಳ ವಿರುದ್ಧ ಹೋರಾಡಿದ್ದವರು. ಇಡೀ ದೇಶದ ಹಿತವನ್ನು ಬಯಸಿದ್ದರು. ದೇಶಕ್ಕೆ ಮಾದರಿ ಸಂವಿಧಾನವನ್ನು ನೀಡಿ ರಾಷ್ಟç ಸರಿದಾರಿಯಲ್ಲಿ ನಡೆಯುವಂತೆ ಮಾಡಿದ ಮೇರು ನಾಯಕ ಎಂದು ಅಂಬೇಡ್ಕರ್ ಅವರನ್ನು ಸ್ಮರಿಸಿದರು.

ಅಂಬೇಡ್ಕರ್ ಅವರ ಬಗ್ಗೆ ಎಲ್ಲರೂ ತಿಳಿದುಕೊಳ್ಳಬೇಕು. ವಿಶೇಷವಾಗಿ ಮಕ್ಕಳು ಮತ್ತು ಯುವಜನತೆಯಲ್ಲಿ ತಿಳುವಳಿಕೆ ಮೂಡಿಸಬೇಕು. ಅಂಬೇಡ್ಕರ್‌ರನ್ನು ಜಯಂತಿ ಮತ್ತು ಕಾರ್ಯಕ್ರಮಗಳಿಗೆ ಮಾತ್ರ ಸೀಮಿತರಾಗಿಸದೇ ಅವರ ಚಿಂತನೆಗಳನ್ನು ಬದುಕಿನ ಭಾಗವನ್ನಾಗಿಸಿಕೊಳ್ಳಲು ಪ್ರಯತ್ನಿಸಬೇಕು. ಅವರ ವಿಚಾರಧಾರೆಗಳು ನಮ್ಮೆಲ್ಲರ ಬದುಕಿನ ದಾರಿದೀಪವಾಗಬೇಕು ಎಂದು ಹೇಳಿದರು.

ಅಂಬೇಡ್ಕರ್ ಅವರ ಆಶಯದಂತೆ ಮುನ್ನಡೆಯಲು ಪ್ರಯತ್ನಿಸುತ್ತಿರುವ ನಾನು ಬಡವರು, ದೀನ ದಲಿತರ ಏಳಿಗೆಗೆ ನಿರಂತರ ಶ್ರಮಿಸುತ್ತಿದ್ದೇನೆ. ಹಿಂದೆ ಸಚಿವನಾಗಿದ್ದಾಗ ಈ ದಿಶೆಯಲ್ಲಿ ಸಾಕಷ್ಟು ಕೆಲಸ ಕಾರ್ಯಗಳನ್ನು ಮಾಡಿದ್ದೇನೆ. ಪ್ರತಿ ವರ್ಷ ಗ್ರಾಮ ಸಂಚಾರ ನಡೆಸಿ ಜನತೆಯ ಕಷ್ಟ ಸುಖಗಳನ್ನು ಆಲಿಸಿ ಸಮಸ್ಯೆ ಪರಿಹರಿಸಲು ಪ್ರಯತ್ನಿಸುತ್ತೇನೆ ಎಂದು ತಿಳಿಸಿದ ಅವರು, ಗ್ರಾಮಸ್ಥರು ಸಲ್ಲಿಸಿದ ಎಲ್ಲ ಬೇಡಿಕೆಗಳನ್ನು ಹಂತ ಹಂತವಾಗಿ ಈಡೇರಿಸುವುದಾಗಿ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಮುಖಂಡರಾದ ಮಾರುತಿ ಚವ್ಹಾಣ, ಧೊಂಡಿಬಾ ನರೋಟೆ, ಶಿವಾಜಿರಾವ ಪಾಟೀಲ ಮುಂಗನಾಳ, ರಾಮಶೆಟ್ಟಿ ಪನ್ನಾಳೆ, ಸಚಿನ ರಾಠೋಡ್, ಬಜರಂಗ್ ಪಾಂಡ್ರೆ, ಗಣಪತರಾವ, ಸಂಜು ಬೋರಾಳೆ, ಶಿವಾಜಿರಾವ ಬೋರಾಳೆ, ಸಂಬ್ರತ್ ಪಾಟೀಲ್, ಗಜಾನಂದ ಕಾಂಬಳೆ, ನಂದಾದೀಪ, ಮಿಲಿಂದ ಕಾಂಬಳೆ ಸೇರಿದಂತೆ ಮುಖಂಡರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

ಶಾಸಕರ ಕಚೇರಿಯಲ್ಲಿ ಮಹಾಪರಿನಿರ್ವಾಣ ದಿನ: ಔರಾದ(ಬಿ) ಶಾಸಕರ ಕಛೇರಿಯಲ್ಲಿ ಡಿ.6ರಂದು ಡಾ.ಬಿ.ಆರ್ ಅಂಬೇಡ್ಕರ್ ಅವರ ಮಹಾಪರಿನಿರ್ವಾಣ ದಿನವನ್ನು ಆಚರಿಸಲಾಯಿತು. ಶಾಸಕರಾದ ಪ್ರಭು.ಬಿ ಚವ್ಹಾಣ ಅವರು ಡಾ.ಬಿ.ಆರ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಗೌರವ ಸಮರ್ಪಿಸಿದರು. ಈ ವೇಳೆ ಮುಖಂಡರು, ಪಕ್ಷದ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

 

ವರದಿ : ರಾಚಯ್ಯ ಸ್ವಾಮಿ

error: Content is protected !!