ಕತ್ತಾರ್ ಕುವೈಟ್ ದುಬೈ ಸೇರಿದಂತೆ ಎಲ್ಲಾ ವಿಮಾನಗಳು ಸ್ಥಗಿತ
ಹೊಸದಿಲ್ಲಿ: ಸೋಮವಾರ ತಡರಾತ್ರಿ ಇರಾನ್ನಿಂದ ಖತರ್ ಮತ್ತು ಇರಾಕ್ ನಲ್ಲಿರುವ ಅಮೆರಿಕದ ನೆಲೆಗಳ ಮೇಲೆ ಕ್ಷಿಪಣಿ ದಾಳಿ ನಡೆಸಿದ್ದರಿಂದ ಯುಎಇ ಮತ್ತು ಖತರ್ ತಮ್ಮ ವಾಯುಪ್ರದೇಶವನ್ನು ಮುಚ್ಚಿದೆ. ವಾಣಿಜ್ಯ ವಾಯು ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಏರ್ ಇಂಡಿಯವು ಗಲ್ಫ್ ಪ್ರಾಂತ್ಯಕ್ಕೆ ತನ್ನ ಸೇವೆಯನ್ನು ಸ್ಥಗಿತಗೊಳಿಸಿದೆ.
ಇದರಿಂದ ದುಬೈ, ದೋಹಾ ಮತ್ತು ಅಬುಧಾಬಿ ವಾಯು ಸಂಚಾರ ಮಾರ್ಗದಲ್ಲಿ ಸೇವೆಗೆ ತೊಡಕುಂಟಾಗಿದೆ.
ಭಾರತದ ಅನೇಕ ನಗರಗಳು ಸೇರಿದಂತೆ ಪ್ರಪಂಚದಾದ್ಯಂತ ಗಲ್ಫ್ ಪ್ರಾಂತ್ಯಕ್ಕೆ ಹೋಗುತ್ತಿದ್ದ ವಿಮಾನಗಳನ್ನು ಬೇರೆಡೆಗೆ ತಿರುಗಿಸಲಾಯಿತು. ಹಲವು ವಿಮಾನಗಳು ಮೂಲ ಸ್ಥಳಕ್ಕೆ ಮರಳಿದವು. ಕೆಲ ವಿಮಾನಗಳನ್ನು ಸ್ಥಗಿತಗೊಳಿಸಲಾಯಿತು. ಲಕ್ನೋದಿಂದ ದಮ್ಮಾಮ್ಗೆ, ಮುಂಬೈನಿಂದ ಕುವೈತ್ ಗೆ ಮತ್ತು ಅಮೃತಸರದಿಂದ ದುಬೈಗೆ ಹೋಗುವ ವಿಮಾನಗಳು ಅರೇಬಿಯನ್ ಸಮುದ್ರದ ಮೇಲೆ ಟೇಕ್ ಆಫ್ ಆದ ಸ್ಥಳಕ್ಕೆ ಹಿಂದಿರುಗಿದವು. ನಿಲ್ದಾಣದಿಂದ ಹೊರಡಬೇಕಿದ್ದ ವಿಮಾನಗಳು ಟೇಕ್ ಆಫ್ ಆಗದೆ ನಿಂತಿವೆ.
ಈ ಕುರಿತು ಮಂಗಳವಾರ ಬೆಳಗಿನ ಜಾವ ಹೇಳಿಕೆ ಬಿಡುಗಡೆ ಮಾಡಿರುವ ಏರ್ ಇಂಡಿಯಾ, “ಮಧ್ಯಪ್ರಾಚ್ಯಕ್ಕೆ ಮತ್ತು ಉತ್ತರ ಅಮೆರಿಕಾ ಮತ್ತು ಯುರೋಪ್ನ ಪೂರ್ವ ಕರಾವಳಿಗೆ ಮತ್ತು ಅಲ್ಲಿಂದ ಹೊರಡುವ ಎಲ್ಲಾ ಕಾರ್ಯಾಚರಣೆಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ, ಮುಂದಿನ ಸೂಚನೆ ಬರುವವರೆಗೆ ಸ್ಥಗಿತಗೊಳಿಸಿದೆ” ಎಂದು ಹೇಳಿದೆ.
ಮಧ್ಯಪ್ರಾಚ್ಯದಲ್ಲಿನ ಉದ್ವಿಗ್ನ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಉತ್ತರ ಅಮೆರಿಕಾದಿಂದ ಭಾರತಕ್ಕೆ ಬರುವ ನಮ್ಮ ವಿಮಾನಗಳು ಆಯಾ ಮೂಲಗಳಿಗೆ ಹಿಂತಿರುಗುತ್ತಿವೆ. ಇತರ ವಿಮಾನಗಳನ್ನು ಭಾರತಕ್ಕೆ ಹಿಂತಿರುಗಿಸಲಾಗುತ್ತಿದೆ. ಅಥವಾ ಮುಚ್ಚಿದ ವಾಯುಪ್ರದೇಶಗಳಿಂದ ಬೇರೆ ಮಾರ್ಗಗಳಲ್ಲಿ ಕಳುಹಿಸಲಾಗುತ್ತಿದೆ, ಎಂದು ಏರ್ ಇಂಡಿಯಾ ಹೇಳಿದೆ.