ಕೇರಳ : ಕೇರಳದಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಎಡಿಜಿಪಿ) ಎಂ.ಆರ್ ಅಜಿತ್ ಕುಮಾರ್ ಅವರು ಆರ್ಎಸ್ಎಸ್ ನಾಯಕನನ್ನು ಭೇಟಿಯಾಗಿರುವುದು ನಿಜ ಎಂದು ಕೇರಳ ಪೊಲೀಸರ ವಿಶೇಷ ಘಟಕ ಖಚಿತಪಡಿಸಿರುವುದಾಗಿ ವರದಿಯಾಗಿದೆ.
ಎಡಿಜಿಪಿ ಅಜಿತ್ ಕುಮಾರ್ ಅವರು ಆರ್ಎಸ್ಎಸ್ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಅವರನ್ನು ತ್ರಿಶ್ಶೂರ್ನಲ್ಲಿ ಭೇಟಿಯಾಗಿದ್ದಾರೆ ಎಂದು ವಿಶೇಷ ಪೊಲೀಸ್ ಘಟಕದ ವರದಿ ಹೇಳಿರುವುದಾಗಿ ಈಟಿವಿ ಭಾರತ್ ವರದಿ ಮಾಡಿದೆ.
ಈ ಮೂಲಕ ಎಡಿಜಿಪಿ ವಿರುದ್ಧ ಕೇರಳದ ವಿಧಾನಸಭೆಯ ಪ್ರತಿಪಕ್ಷ ನಾಯಕ ವಿಡಿ ಸತೀಶನ್ ಮಾಡಿರುವ ಆರೋಪವನ್ನು ಪೊಲೀಸರ ವರದಿ ದೃಢೀಕರಿಸಿದಂತಾಗಿದೆ.
ಕೇರಳ ಪೊಲೀಸರ ತ್ರಿಶ್ಶೂರ್ ವಿಶೇಷ ಘಟಕದ ವರದಿ ಪ್ರಕಾರ, “ಮೇ 22, 2023ರಂದು ಪರಮೆಕ್ಕಾವ್ ವಿದ್ಯಾ ಮಂದಿರಲ್ಲಿ ಆರ್ಎಸ್ಎಸ್ ನಾಯಕನನ್ನು ಭೇಟಿಯಾಗಲು ಎಡಿಜಿಪಿ ಅಜಿತ್ ಕುಮಾರ್ ಅವರು ಆರ್ಎಸ್ಎಸ್ ವತಿಯಿಂದಲೇ ವ್ಯವಸ್ಥೆ ಮಾಡಿದ್ದ ಕಾರಿನಲ್ಲಿ ಪ್ರಯಾಣಿಸಿದ್ದರು. ಈ ಬಗ್ಗೆ ಮರುದಿನವೇ ಗುಪ್ತಚರ ಇಲಾಖೆಯ ಮುಖ್ಯಸ್ಥರು, ಕೇರಳ ಪೊಲೀಸ್ ಮತ್ತು ಸರ್ಕಾರಕ್ಕೆ ಮಾಹಿತಿ ದೊರೆತಿತ್ತು” ಎಂದು ಈಟಿವಿ ಭಾರತ್ ತಿಳಿಸಿದೆ.
ಪೊಲೀಸರ ವರದಿ ಆರ್ಟಿಐಯಲ್ಲಿ ಲಭ್ಯವಿಲ್ಲ. ಅದನ್ನು ಬಹಿರಂಗಗೊಳಿಸುತ್ತಿಲ್ಲ. ಪೊಲೀಸರ ಘಟಕ ಎಡಿಜಿಪಿ ಮತ್ತು ಆರ್ಎಸ್ಎಸ್ ನಾಯಕನ ಭೇಟಿಯನ್ನು ಸಿಸಿಟಿವಿ ಆಧರಿಸಿನ ಖಚಿತಪಡಿಸಿದೆ. ಈ ಬಗ್ಗೆ ತಿರುವನಂತಪುರದ ಉನ್ನತಾಧಿಕಾರಿಗಳಿಗೆ ಮಾಹಿತಿ ನೀಡಿದೆ ಎಂದು ಪೊಲೀಸ್ ಮೂಲಗಳನ್ನು ಉಲ್ಲೇಖಿಸಿ ಈಟಿವಿ ಭಾರತ್ ಹೇಳಿದೆ.
ಎಡಿಜಿಪಿ ಅಜಿತ್ ಕುಮಾರ್ ಅವರು ತನ್ನ ಮೇಲಿನ ಆರೋಪದ ಕುರಿತು ಮುಖ್ಯಮಂತ್ರಿ ಕಚೇರಿಗೆ ಸ್ಪಷ್ಟನೆ ಕೊಟ್ಟಿದ್ದಾರೆ ಎಂದು ಕೆಲ ವರದಿಗಳು ಹೇಳಿವೆ. ಮುಖ್ಯಮಂತ್ರಿ ಪರವಾಗಿ ಆಡಳಿತರೂಢ ಸಿಪಿಐಎಂ ರಾಜ್ಯ ಕಾರ್ಯದರ್ಶಿ ಎಂ.ವಿ ಗೋವಿಂದನ್ ಸಭೆ ಆಯೋಜಿಸಿದ್ದರು ಎಂದು ಪ್ರತಿಪಕ್ಷಗಳು ಆರೋಪಿಸಿವೆ. ಆದರೆ, ಆರೋಪವನ್ನು ಗೋವಿಂದನ್ ತಿರಸ್ಕರಿದ್ದಾರೆ. ಶುಕ್ರವಾರ ಕರೆದ ಪತ್ರಿಕಾಗೋಷ್ಠಿಯಲ್ಲಿ ಮುಖ್ಯಮಂತ್ರಿ ಪರವಾಗಿ ಯಾವುದೇ ಸಭೆ ನಡೆಸಿಲ್ಲ ಎಂದು ತಿಳಿಸಿದ್ದಾರೆ.
ಎಡಿಜಿಪಿ ಎಂಆರ್ ಅಜಿತ್ ಕುಮಾರ್ ಅವರೇ ಆರೆಸ್ಸೆಸ್ ಪ್ರಧಾನ ಕಾರ್ಯದರ್ಶಿಯನ್ನು ಭೇಟಿಯಾಗಿರುವುದನ್ನು ಒಪ್ಪಿಕೊಂಡಿದ್ದು, ಮುಖ್ಯಮಂತ್ರಿ ಕಚೇರಿಗೆ ನೀಡಿರುವ ವಿವರಣೆಯಲ್ಲಿ ಈ ವಿಷಯ ಬಹಿರಂಗವಾಗಿದೆ ಎಂದು ಇನ್ನೂ ಕೆಲ ಮಾಧ್ಯಮಗಳಲ್ಲಿ ವರದಿಯಾಗಿದೆ.
ವರದಿ ಸದಾನಂದ ಎಚ್