ಬಸವಕಲ್ಯಾಣ : ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲ್ಲೂಕಿನಲ್ಲಿನ ಕೋಚಿಂಗ್ ಕೇಂದ್ರಗಳಿಂದ ಮಕ್ಕಳು ಶಾಲೆಗೆ ಹೋಗದಂತಾಗಿದೆ. ಇದಲ್ಲದೆ ಶಿಕ್ಷಕರೇ ಇವುಗಳನ್ನು ನಿರ್ವಹಿಸುತ್ತಿರುವ ಕಾರಣ ಅವರು ಪಾಠ ಮಾಡದೆ ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದಿಂದ ದೂರಲಾಗಿದೆ.
ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಈ ಸಂಬಂಧ ಗುರುವಾರ ಮನವಿಪತ್ರ ಸಹ ಸಲ್ಲಿಸಲಾಗಿದೆ.
ಕೋಚಿಂಗ್ ನೀಡುವುದಾಗಿ ಹೇಳಿ ಸಾವಿರಾರು ರೂಪಾಯಿ
ಪಡೆಯಲಾಗುತ್ತಿದೆ.
ಕೇಂದ್ರಗಳಲ್ಲಿ ಯಾವುದೇ ಉತ್ತಮ ಸೌಲಭ್ಯ ಸಹ ಇರುವುದಿಲ್ಲ. ವರ್ಷದವರೆಗೆ ಅಲ್ಲಿಯೇ ಮಕ್ಕಳನ್ನು ಇಟ್ಟುಕೊಳ್ಳುತ್ತಿರುವುದು ಎಷ್ಟು ಸರಿ. ಈ ಬಗ್ಗೆ ಸಂಬಂಧಿಸಿದವರೂ ಕಣ್ಣುಮುಚ್ಚಿ ಕುಳಿತಿರುವುದಕ್ಕೆ ಕಾರಣ ಗೊತ್ತಾಗುತ್ತಿಲ್ಲ. ಇನ್ನು ಮುಂದಾದರೂ ಇಂಥ ಕೇಂದ್ರಗಳನ್ನು ಮುಚ್ಚಬೇಕು ಎಂದು ಆಗ್ರಹಿಸಲಾಗಿದೆ.
ವೇದಿಕೆಯ ತಾಲ್ಲೂಕು ಘಟಕದ ಅಧ್ಯಕ್ಷ ಮಾಂತೇಶ ಗೌರಕರ್, ಉಪಾಧ್ಯಕ್ಷ ಸುಧೀರ ಕಾಂಬಳೆ, ಧಮ್ಮವೀರ ಗೋಡಬೋಲೆ, ಎಂ.ಡಿ.ಹಾಜಿ ಮತ್ತಿತರರು ಇದ್ದರು.
ವರದಿ : ಆದಿತ್ಯ ಗಜರೆ
