ಡಾ!! ವೀರೇಂದ್ರ ಹೆಗ್ಡೆ ಯವರ ಕನಸಿನ ಕೂಸಾದ ಯೋಜನೆ ಇಂದು ಕರ್ನಾಟಕದ ಹಳ್ಳಿ ಹಳ್ಳಿಯಲ್ಲೂ ತಲೆಯೆತ್ತಿ ರಾಮರಾಜ್ಯದ ಕನಸು ನನಸು ಮಾಡಲು ಶ್ರಮ ವಹಿಸುತ್ತಿದೆ ಎಂದು ಮಾಜಿ ಸಚಿವರು ಹಾಗೂ ಶಾಸಕರಾದ ಪ್ರಭು ಬಿ.ಚವ್ಹಾಣ ನುಡಿದರು.
ಪಟ್ಟಣದ ಕನಕ ಭವನದಲ್ಲಿ ಸೋಮವಾರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ , ಅಖಿಲ ಕರ್ನಾಟಕ ಜನ ಜಾಗೃತಿ ವೇದಿಕೆ ಸಹಯೋಗದಲ್ಲಿ ಏರ್ಪಡಿಸಿದ ಗಾಂಧಿ ಸ್ಮರಣೆ ಮತ್ತು ಸಾಮೂಹಿಕ ಪೂಜಾ ಕಾರ್ಯಕ್ರಮಕ್ಕೆ ಜ್ಯೋತಿ ಪ್ರಜ್ವಲಿಸುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು, ಗ್ರಾಮಾಭಿವ್ರದ್ದಿ ಯೋಜನೆಯು ಗ್ರಾಮೀಣ ಪರಿವರ್ತನೆಗೆ ಹೊಸ ಭಾಷ್ಯ ಬರೆದಿದೆ. ಪೂಜ್ಯ ಡಾ. ವೀರೇಂದ್ರ ಹೆಗ್ಗಡೆ ಅವರಿಗೆ ಸ್ವತಃ ದೇಶದ ಪ್ರಧಾನಿ ನರೇಂದ್ರ ಮೋದಿ ಅವರೇ ರಾಜ್ಯಸಭಾ ಸದಸ್ಯರಾನ್ನಾಗಿ ಮಾಡಿ, ಅವರ ಪುಣ್ಯದ ಕೆಲಸ ಕಾರ್ಯಗಳನ್ನು ಹೊಗಳಿದ್ದಾರೆ ಎಂದರು.
ಗಾಂದೀಜಿಯವರ ಗ್ರಾಮ ರಾಜ್ಯದ ಪರಿಕಲ್ಪನೆ ಈ ಯೋಜನೆಯಿಂದ ಸಾಕಾರಗೊಳ್ಳುತ್ತಿದೆ. ಕೃಷಿ ಮೇಳ, ತರಬೇತಿ, ಮಾನವ ಸಂಪನ್ಮೂಲ ಬಳಕೆ ಮುಂತಾದ ವಿಷಯಗಳು ಯೋಜನೆಯ ಚಿಂತನೆಯ ವಿಷಯ. ಮಾನವ ಸಂಪನ್ಮೂಲ ಅಭಿವ್ರದ್ದಿಗಾಗಿ ಗ್ರಾಮಾಭಿವ್ರದ್ದಿ ಯೋಜನೆ ದೊಡ್ಡ ಕಾರ್ಯಕರ್ತರ ಪಡೆಯನ್ನೇ ಹೊಂದಿದೆ. ಇಂದಿನ ಯುವ ಜನತೆ ಅನೇಕ ದುಶ್ಚಟಗಳಿಗೆ ಬಲಿಯಾಗಿ ತಮ್ಮ ಜೀವನವನ್ನೇ ಹಾಳು ಮಾಡಿಕೊಳ್ಳುತ್ತಿರುವುದು ದುರಂತವಾಗಿದೆ. ಆದರೆ ಶ್ರೀ ಕ್ಷೇತ್ರ ಧರ್ಮಸ್ಥಳ ಯೋಜನೆ ಮತ್ತು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಸದಸ್ಯರು ಪೂಜ್ಯರ ಆಶಯದಂತೆ ಪಣತೊಟ್ಟು ಮಧ್ಯವ್ಯಸನಾ ಶಿಬಿರಗಳನ್ನು ಆಯೋಜಿಸಿ, ಅಗತ್ಯ ಮಾಹಿತಿ ನೀಡಿ, ಮಧ್ಯಪಾನ ಮುಕ್ತ ಕುಟುಂಬ ಮಾಡಲು ಪ್ರಯತ್ನಿಸುತ್ತಿರುವುದು ಮಹಾತ್ಮ ಗಾಂಧೀಜಿಯವರ ಕಂಡ ರಾಮ ರಾಜ್ಯದ ಕನಸು ಈ ಯೋಜನೆಯ ಮೂಲಕ ನನಸಾಗುತ್ತಿದೆ. ಮಹಾತ್ಮ ಗಾಂಧೀಜಿಯವರ ಆಶಯದಂತೆ ಕೆಲಸ ಮಾಡುತ್ತಿರುವ ಶ್ರೀ ಕ್ಷೇತ್ರ ಧರ್ಮಸ್ಥಳ ಯೋಜನೆಯ ಪೂಜ್ಯ ಡಾ.ವೀರೇಂದ್ರ ಹೆಗ್ಗಡೆಯವರ ಕಾರ್ಯ ಶ್ಲಾಘನೀಯ ಎಂದು ಬಣ್ಣಿಸಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಯೋಜನೆಯ ಜಿಲ್ಲಾ ನಿರ್ದೇಶಕ ಪ್ರವೀಣಕುಮಾರ ಮಾತನಾಡಿ, ಯೋಜನೆಯಲ್ಲಿ ಹತ್ತು ಹಲವಾರು ಜನಪರ ಯೋಜನೆಗಳು ಸಮಾಜದ ಪ್ರಗತಿಗೆ ಪೂರಕವಾಗಿವೆ. ಪೂಜ್ಯರ ಕನಸಿನಂತೆ ಈ ಭಾಗದಲ್ಲಿ ಕ್ಷೀರ ಕ್ರಾಂತಿ ಯಲ್ಲಿ ಬೀದರ ಜಿಲ್ಲೆ ಉತ್ತಮ ನಾಂದಿ ಹಾಡುತ್ತಿದೆ. ಕೇವಲ 18 ಸಾವಿರ ಲೀಟರ್ ಹಾಲಿನ ಉತ್ಪಾದನೆ ಇರುವ ಜಿಲ್ಲೆಯಲ್ಲಿ ಸದ್ಯಕ್ಕೆ ದಿನಾಲು 60 ಸಾವಿರ ಲೀಟರ್ ಕ್ಕಿಂತಲೂ ಹೆಚ್ಚು ಹಾಲಿನ ಉತ್ಪಾದನೆ ಆಗುತ್ತಿದೆ. ಗಡಿ ಜಿಲ್ಲೆಯಲ್ಲಿ ಪೂಜ್ಯರು ಹೈನೋದ್ಯಮಕ್ಕೆ ನೀಡಿರುವ ಸೇವೆ ಅಮೋಘವಾಗಿದೆ. ಗಡಿ ತಾಲ್ಲೂಕಿನಲ್ಲಿ ಹಲವಾರು ಪರಿವಾರಗಳು ಯೋಜನೆಯ ಲಾಭ ಪಡೆದು ಸ್ವಾವಲಂಬಿ ಬದುಕು ಸಾಗಿಸುತ್ತಿದ್ದಾರೆ ಎಂದರು.
ಜಿಲ್ಲಾ ಜನ ಜಾಗೃತಿ ವೇದಿಕೆ ಉಪಾಧ್ಯಕ್ಷ ಡಾ. ಶಾಲಿವಾನ್ ಉದಗಿರೆ ಮಾತನಾಡಿ, ಗಾಂಧಿ ಸ್ಮರಣೆ ಕಾರ್ಯಕ್ರಮ ಮಾಡುವುದರ ಮೂಲಕ ಗಾಂಧೀಜಿ ಅವರ ತತ್ವ ಸಿದ್ಧಾಂತಗಳನ್ನು ಸಮಾಜದಲ್ಲಿ ಪಸರಿಸುವುದರ ಮೂಲಕ ಪರಿಸರ ಮತ್ತು ಮನಸುಗಳನ್ನು ಸ್ವಚ್ಛಂದಗೊಳಿಸಿ ಯುವ ಪೀಳಿಗೆಯಲ್ಲಿ ಗಾಂಧಿ ತತ್ವ ಸಿದ್ಧಾಂತಗಳ ಅರಿವು ಮೂಡಿಸಿ ಚಟಮುಕ್ತ ಸಮಾಜ ನಿರ್ಮಾಣ ಮಾಡುತ್ತಿದೆ ಎಂದರು.
ಪಟ್ಟಣ ಪಂಚಾಯತ್ ಅಧ್ಯಕ್ಷೆ ಸರುಬಾಯಿ ಘುಳೆ, ಶಿವರಾಜ್ ಅಲಮಾಜೆ, ರಾಮಶೆಟ್ಟಿ ಪನ್ನಾ ಳೆ, ಜನ ಜಾಗೃತಿ ವೇದಿಕೆ ಜಿಲ್ಲಾ ಸದಸ್ಯ ಮಲ್ಲಪ್ಪ ಗೌಡ, ಉಮಾಕಾಂತ್ ಪಾಟೀಲ್, ಮಡಿವಾಳಪ್ಪ, ಲೋಕೇಶ್ ಭಾಲ್ಕೆ, ಲಕ್ಷ್ಮಿ ಕಾಂತ, ಮಹಾದೇವ, ಸಂಗೀತಾ, ಲಕ್ಷ್ಮಿ, ಸುರೇಖಾ, ಮಹಾನಂದಾ, ಆಶಾ, ಶ್ರೀದೇವಿ, ನೆಹರು ಇದ್ದರು. ತಾಲ್ಲೂಕು ಯೋಜನಾ ಅಧಿಕಾರಿ ರಾಘವೇಂದ್ರ ಗೌಡ ಸ್ವಾಗತಿಸಿದರು. ವಲಯ ಮೇಲ್ವಿಚಾರಕ ಅನಿಲ ದಾವಣೆ ನಿರೂಪಣೆ ಮಾಡಿದರು. ಇದೆ ವೇಳೆ ಶಾಸಕರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಯೋಜನೆಯ ಮಾಹಿತಿಗಳುಳ್ಳ 500 ಕೆರೆಯ ಮರುಜನ್ಮ ಮಹಾಯಾನಾ ನಮ್ಮೂರು ನಮ್ಮ ಕೆರೆ ಗ್ರಂಥ ಕಾಣಿಕೆಯಾಗಿ ನೀಡಲಾಯಿತು.
ಔರಾದ್ ಪಟ್ಟಣದ ಕನಕ ಭವನದಲ್ಲಿ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವ್ರದ್ದಿ ಯೋಜನೆ ವತಿಯಿಂದ ಏರ್ಪಡಿಸಿದ ಗಾಂಧಿ ಸ್ಮೃರಣೆ ಮತ್ತು ಸಾಮೂಹಿಕ ಪೂಜೆ ಕಾರ್ಯಕ್ರಮಕ್ಕೆ ಶಾಸಕ ಪ್ರಭು ಚವ್ಹಾಣ ಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡಿದರು. ಪಟ್ಟಣ ಪಂಚಾಯತ್ ಅಧ್ಯಕ್ಷೆ ಸರುಬಾಯಿ ಘುಳೆ, ಜಿಲ್ಲಾ ನಿರ್ದೇಶಕ ಪ್ರವೀಣ್ ಕುಮಾರ್, ಶಾಲಿವಾನ್ ಉದಗಿರೆ, ಶಿವರಾಜ್ ಅಲಮಾಜೆ, ರಾಮಶೆಟ್ಟಿ ಪನ್ನಾ ಳೆ, ಉಮಾಕಾಂತ್ ಪಾಟೀಲ್, ಮಡಿವಾಳಪ್ಪ, ರಾಘವೇಂದ್ರ ಗೌಡ ಇದ್ದರು.
ವರದಿ : ರಾಚಯ್ಯ ಸ್ವಾಮಿ