ಕೇರಳ ರಾಜ್ಯಕ್ಕೆ ಪ್ರವಾಸ ಬೆಳೆಸಿರುವ ಸಾಹಿತಿ ಶಕೀಲ್ ಐ.ಎಸ್ ತನ್ನ ಅನುಭವ ಹಂಚಿಕೊಂಡಿದ್ದು ಹೀಗೆ

ಮೊದಲಿನಿಂದಲೂ ಸೂಫಿಗಳ ಇತಿಹಾಸ ಹಾಗೂ ಅವರ ಪವಾಡಗಳ ಕುರಿತು ಕೇಳುತ್ತ ಬಂದಿರುವ ನಾನು, ನಮ್ಮೂರಲ್ಲಿಯ ಕುತಾಬ್ ಅಲ್-ಅಕ್ತಾಬ್ ಖ್ವಾಜಾ ಸಯ್ಯಿದ್ ಮುಹಮ್ಮದ್ ಭಕ್ತಿಯಾರ್ ಅಲ್-ಹೂಸೈನಿ, ಕುತ್ಬ್ ಅಲ್-ದಿನ್ ಭಕ್ತಿಯಾರ್ ಕಾಕಿ (ಖಾಜಾ ಖುತಬೊದ್ದಿನ)ರ ಛಿಲ್ಲಾ (ದರ್ಗಾ) ಊರುಸ್ ಕಾರ್ಯಕ್ರಮದಲ್ಲಿ ಒಂಬತ್ತನೇ ತರಗತಿಯಲ್ಲಿರುವಾಗ ನಾಟಕದಲ್ಲಿ ಪಾತ್ರ ಮಾಡಿ ಸೈ ಎನಿಸಿಕೊಂಡಿದಲ್ಲದೆ ‘ಬೀದರ್ ಜಿಲ್ಲೆಯ ಸೂಫಿಗಳು’ ಎನ್ನುವ ಸುಮಾರು ಎರಡನೂರ ಹದಿಮೂರು ಸೂಫಿಗಳ ಪರಿಚಯ ನಿಮಗೆಲ್ಲರಿಗೂ ಮುಟ್ಟಿಸಲು ಪ್ರಯತ್ನಿಸಿದ್ದೇನೆ.

 

ಸೂಫಿ ಬೆಳೆದು ಬಂದ ಬಗೆಯನ್ನು ಕರ್ನಲ್ ಕ್ಲಾರ್ಕ ಸೂಫಿ ಪದ್ಯವೊಂದರಿಂದಲೇ ಈ ಕೆಳಗಿಂನಂತೆ ಉದಾಹರಿಸುತ್ತಾರೆ.

ಸೂಫೀತ್ವದ ಬೀಜ, ಬಿತ್ತಿದ್ದು ಆದಮನ ಕಾಲದಲ್ಲಿ, ಮೊಳೆತದ್ದು ನೋಹಾನ್ ಸಮಯದಲ್ಲಿ,

ಮೋಗ್ಗಾದದ್ದು ಅಬ್ರಾಹಂನ್ ಕಾಲದಲ್ಲಿ,

ವಿಸ್ತರಿಸತೊಡಗಿದ್ದು ಮೋಸಸ್‌ನ ಸಮಯದಲ್ಲಿ, ಪಕ್ವತೆಯನ್ನು ಪಡೆದುದ್ದು ಏಸುವಿನ ಕಾಲದಲ್ಲಿ,

ಶುದ್ಧವಾದ ಮದಿರೆಯನ್ನು ತಯಾರಿಸಿದ್ದು, ಮಹಮ್ಮದರ ಕಾಲದಲ್ಲಿ.

 

ಅಂದರೆ ಸೂಫಿ ತತ್ವಗಳು ಒಮ್ಮೆಲ್ಲೆ ಧುತ್ತೆಂದು ಒಂದು ಸಮಯದಲ್ಲಿ ಬಂದದ್ದಲ್ಲ. ನಿಧಾನವಾಗಿ, ಏಕಸೂತ್ರವಾಗಿ, ನೂರಾರು ವರ್ಷಗಳಲ್ಲಿ ಜ್ಞಾನಿಗಳ ಚಿಂತನೆಯ ಮೂಸೆಯಲ್ಲಿ ಕುದಿದು ರಸಪಾಕವಾಗಿ ಬಂದದ್ದು. ಸಾಮಾನ್ಯವಾಗಿ ಇಸ್ಲಾಮನ್ನು ಸೂಫಿ ಪಂಥದ ಕವಚ ಎಂದು ಕರೆಯುತ್ತಾರೆ.

 

ಹೌದು ಸೂಫಿಗಳ್ಳಲಿರುವ ಅಧ್ಯತ್ಮದ ಜ್ಞಾನವೇ ಜನರ ಮನ ಮುಟ್ಟಿದ್ದು. ನಮ್ಮೂರಲ್ಲಿರುವುದು ಛೀಲಾ, ಆದರೆ ಅಮ್ಮೋರಿನವರು ಅದನ್ನು ದರ್ಗಾ ಅಂತಲೇ ಕರೆದು ಹರಕೆ ಹೊರುತ್ತಾರೆ. ಪಾಪ ನಮ್ಮ ಕಡೆಯ ಇತ್ತೀಚಿನ ಯುವ ಪೀಳಿಗೆಗೆ ದರ್ಗಾ ಮತ್ತು ಛೀಲ್ಲಾದ ನಡುವೆ ಇರುವ ಅಂತರವೇ ಗುರುತಿಲ್ಲ. ದರ್ಗಾ ಅಂದರೆ ಅಲ್ಲಿ ಆ ಸೂಫಿಯ ಸಮಾಧಿ ಇರಬೇಕು. ಛೀಲಾ ಅಂದರೆ ಆ ಸೂಫಿ ಆ ಜಾಗದಲ್ಲಿ ಸುಮಾರು ನಲ್ವತ್ತು ದಿವಸ ಪ್ರಾರ್ಥನೆ ಮಾಡಿದ್ದಿರ್ಬೇಕು. ಆದರೆ ಇತ್ತೀಚಿನ ದಿನಗಳಲ್ಲಿ ದರ್ಗಾದ ಸ್ಥಳದಿಂದ ಏನಾದರು ಒಂದು ವಸ್ತು ತಂದು ಅಲ್ಲಿ ಒಂದು ಛೀಲಾ ಕಟ್ಟಿಸಿ ಹರಕೆ ಹೊರುವ ಪದ್ಧತಿ ನಮ್ಮ ಹೈದ್ರಾಬಾದ್ ಕರ್ನಾಟಕ್ ಕಡೆ ಹೆಚ್ಚೆ ಕಾಣುತ್ತೇವೆ. ಇದಕ್ಕೆ ಉತ್ತಮ ಉದಾ: ಮಹೇಬುಬ್ ಸುಭಾನಿ ದರ್ಗಾಗಳು. ಬಹುಷಃ ಹೆಚ್ಚು ಕಮ್ಮಿ ಹೈದ್ರಾಬಾದ್ ಕರ್ನಾಟಕ ಪ್ರತಿಯೊಂದು ಊರಲ್ಲಿ ಈ ದರ್ಗಾ ಇದೆ. ಆದರೆ ಮಹೇಬುಬ್ ಸುಭಾನಿ ರವರು ಈ ಕಡೆ ಬರಲೇ ಇಲ್ಲ. ಹಾಗಾದ್ರೆ ದರ್ಗಾಗಳು ಹೇಗೆ ಕಟ್ಟಲ್ಪಟ್ಟವು ಅನ್ನುವ ಪ್ರಶ್ನೆಗೆ ಈ ಮೇಲಿನ ವಿಷಯವೇ ಉತ್ತರ. ಅದರಂತೆ ಕುತಾಬ್ ಅಲ್-ಅಕ್ತಾಬ್ ಖ್ವಾಜಾ ಸಯ್ಯಿದ್ ಮುಹಮ್ಮದ್ ಭಕ್ತಿಯಾರ್ ಅಲ್-ಹೂಸೈನಿ, ಕುತ್ಬ್ ಅಲ್-ದಿನ್ ಭಕ್ತಿಯಾರ್ ಕಾಕಿ (ಜನನ 1173 – 1235 ರಲ್ಲಿ)  ಜನನ ದೆಹಲಿ, ಅವರು ಚಿಶ್ತಿ ಆದೇಶದ ಮುಖ್ಯಸ್ಥರಾಗಿ ಮುಯಿನ್ ಅಲ್-ದಿನ್ ಚಿಶ್ತಿಯ ಶಿಷ್ಯ ಮತ್ತು ಆಧ್ಯಾತ್ಮಿಕ ಉತ್ತರಾಧಿಕಾರಿಯಾಗಿದ್ದರು. ಆತನಿಗೆ ಮೊದಲು ಭಾರತದಲ್ಲಿ ಚಿಶ್ತಿ ಕ್ರಮವು ಅಜ್ಮೀರ್ ಮತ್ತು ನಾಗೌರ್‌ಗೆ ಸೀಮಿತವಾಗಿತ್ತು. ದೆಹಲಿಯಲ್ಲಿ ಸುಭದ್ರವಾಗಿ ಆದೇಶವನ್ನು ಸ್ಥಾಪಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದರು. ಮೆಹ್ರೌಲಿಯಲ್ಲಿರುವ ಜಾಫರ್ ಮಹಲ್‌ನ ಪಕ್ಕದಲ್ಲಿರುವ ಅವರ ದರ್ಗಾ ಮತ್ತು ದೆಹಲಿಯ ಅತ್ಯಂತ ಹಳೆಯ ದರ್ಗಾಗಳ್ಳಲಿ ಒಂದಾಗಿದೆ. ಆದರೆ ಇವರ ಛಿಲ್ಲಾಗಳು ಹೈದರಾಬಾದ್ ಕರ್ನಾಟಕದ ಬಹಳಷ್ಟು ಗ್ರಾಮಗಳಲ್ಲಿವೆ, ಅವುಗಳ್ಳಲ್ಲಿ ಅಮ್ಮರಲ್ಲಿರುವುದು ಒಂದು.

 

ಸೂಫಿಸಂನ್ನು ಮೂರು ಘಟ್ಟಗಳಲ್ಲಿ ನೋಡಬಹುದು. ಮೊದಲ ಘಟ್ಟದಲ್ಲಿ ಆದಿಮ್ ಸೂಫಿಗಳು ಅಲೆಮಾರಿಗಳು, ತಾಪಸ ಬದುಕನ್ನು ಬದುಕುತ್ತಿದ್ದರು. ಇವರನ್ನು ಹಜರತ್ ಮಹಮ್ಮದ ಪೈಗಂಬರ್ ರವರ ಶಿಷ್ಯರಿಂದ ಪ್ರಾರಂಭವಾಗುತ್ತದೆ. ಇವರ ಶಿಷ್ಯರು ತಂಡೋಪ ತಂಡವಾಗಿ ಭಾರತ್ತಕೆ ಬರಲು ಪ್ರಾರಂಭಿಸಿದರು. ಅನುಭಾವಿಯಾದ ಇವರು ಪವಾಡ ಪುರುಷ, ದೈವಭಕ್ತಿ ಪ್ರದರ್ಶಿಸಿ ಭಾರತದ ನಾನಾ ಕಡೆಯಿಂದ ಭಕ್ತರು ಸೆಳೆದರು. ನಾನಾ ಸಂತರು ಇವರ ಉಪದೇಶಗಳನ್ನು ಕೇಳಲು ಬರತೊಡಗಿದರು. ಅನೇಕ ಸೂಫಿಗಳೊಂದಿಗೆ ಅವರ ಪತ್ನಿ, ಮಕ್ಕಳು ಸೇರಿದಂತೆ ಮಹಿಳಾ ಸೂಫಿಗಳು ಬರತೋಡಗಿದರು.

 

ನಾನೇಕೆ ಇಲ್ಲಿ ದರ್ಗಾ ಮತ್ತು ಸೂಫಿಗಳ ಕುರಿತು ಹೇಳ್ಳೂತ್ತಿದ್ದೇನೆಂದು ನಿಮ್ಮ ಮನದಲ್ಲಿ ಪ್ರಶ್ನೆ ಎದ್ದಿರಬಹುದು. ಹೌದು ನಿಮ್ಮ ಪ್ರಶ್ನೆಗೆ ಮೊದಲು ಉತ್ತರ ಕೊಡುತ್ತೇನೆ. ಕೇರಳ ರಾಜ್ಯದ ರಾಜಧಾನಿ ತ್ರಿವಂತಪುರಂ ದಿಂದ ಕೇವಲ ಹನ್ನೆರಡು ಕಿಲೋ ಮೀಟರ್ ಅಂತರದಲ್ಲಿರುವ ಬೀಮಾಪಲ್ಲಿ ಗ್ರಾಮದಲ್ಲಿ ಒಂದು ಐತಿಹಾಸಿಕ ದರ್ಗಾ ನೋಡೊಣವೆಂದು ಗೆಳೆಯರು ಹೆಳಿದ್ದರಿಂದ ಭೀಮಪಲ್ಲಿ ಗ್ರಾಮಕ್ಕೆ ಹೊರಟೆವು. ಗ್ರಾಮ ತಲುಪಿದಂತೆ ಊರೆಲ್ಲ ಗುಲಾಬಿ ಬಣ್ಣದ ದೊಡ್ಡದಾದ ಕಾಂಪೌಂಡ ಗೋಡೆ ಹಾಗೂ ಬಹಳಷ್ಟು ಮನೆಗಳು ಸಹ ಗುಲಾಬಿ ಬಣ್ಣದು, ಕಾಂಪೌಂಡ ಮಧ್ಯದಲ್ಲಿ ಗುಲಾಬಿ ಬಣ್ಣದ ಬ್ರಹತ್ ಕಟ್ಟಡ ಕಂಡುಬಂತು. ಅದಕ್ಕೆ ದೊಡ್ಡದಾದ ಮಿನಾರಗಳು, ದೊಡ್ಡ ಗುಮ್ಮಟ್ ಇಸ್ಲಾಮಿಯ ಶೈಲಿಯ ಕಟ್ಟಡವದು. ಗೊಮ್ಮಟ್ ಒಳಗೆ ಹೋದಂತೆ ಒಂದು ಗೋರಿ ಇದ್ದು, ಅದಕ್ಕೆ ಪರ್ದಾ ಕಟ್ಟಲಾಗಿತ್ತು. ಸ್ವಭಾವಿಕವಾಗಿ ಎಲ್ಲರಿಗೂ ದರ್ಶನಕ್ಕೆ ಖುಲ್ಲ ಇರುವ ಗೊರಿಗಳನ್ನು ಕಂಡಿದ್ದ ನನಗೆ, ಇದು ವಿಚಿತ್ರ ಅನಿಸಿತು. ಆಮೇಲೆ ಗುರುತಾಯಿತು ಈ ಗೋರಿ ಒಬ್ಬ ಮಹಿಳಾ ಸೂಫಿಯದ್ದು, ಹಾಗಂತ ಇದು ಶಾಶ್ವತವಾಗಿ ಹಾಕಿದ್ ಪರದೆ ಆಲ್ಲ, ಹರಕೆ ಹೋತ್ತೋಕೊಂಡು ಬಂದಾಗ ಅವರಿಂದ ಕಾಣಿಕೆ ಪಡೆದು ದರ್ಶನ್ ಮಾಡಿಸುತ್ತಿದ್ದರು. ಬೇರೆಯವರು ಹಣ ಕೊಟ್ಟಾಗ್ ಪರ್ದಾ ಸರಿಸಿದ್ದಾಗ ಕೊಡಲೇ ನಾನು ಹತ್ತಿರ ಹೋಗಿ ಈ ಗೋರಿ ನೋಡ್ದೆ. ಮಹಿಳಾ ಸೂಫಿಯ ಹೆಸರು ಸೈದುನ್ನಿಸಾ ಬೀ ಮಾ ಎಂದು. ಬಹುಷಃ ಮಹಿಳಾ ಸೂಫಿಯಾಗಿರುವುದರಿಂದ ಮಹಿಳೆಯ ಅಚ್ಚುಮೆಚ್ಚಿನ ಬಣ್ಣ ಗುಲಾಬಿ ಇರುವುದರಿಂದ ಈ ದರ್ಗಾದ ಗೋಡೆಗಳಿಗೆ ಗುಲಾಬಿ ಬಣ್ಣ ಹಚ್ಚಿರಬಹುದು. ಈ ಎಲ್ಲ ವಿಶೇಷತೆ ನೋಡಿದ ನಾನು ಈ ಮಹಿಳಾ ಸೂಫಿಯ ಕುರಿತು ತಿಳಿದುಕೊಳ್ಳಲು ಮುಂದಾದೆ. ಈ ಗ್ರಾಮವು ಸಹ ಈ ಮಹಿಳಾ ಸೂಫಿಯ ಹೆಸರಿನಲ್ಲಿದೆ. ಸೈದುನ್ನಿಸಾ ಬಿ ಮಾ ಹೆಸರಿನಲ್ಲಿ ಕಡೆಯ ಎರಡು ಅಕ್ಷರಗಳಾದ ‘ಬಿ ಮಾ’ ಶಬ್ದಗಳಿಗೆ ‘ಪಲ್ಲಿ’ ಸೇರಿಸಿದಾರೆ. ಪಲ್ಲಿ ಅಂದರೆ ತಮಿಳಿನಲ್ಲಿ ಮಸೀದಿ ಎಂಬ ಅರ್ಥವಿದೆ. ಹೀಗೆ ಬಿ-ಮಾ-ಪಲ್ಲಿ ‘ಬಿಮಾಪಲ್ಲಿ’ ಎಂದು ಹೆಸರಿಟ್ಟಿದಾರೆ. ಒಬ್ಬ ಮಹಿಳಾ ಸೂಫಿಯ ಹೆಸರಿನಲ್ಲಿ ಒಂದು ಗ್ರಾಮ ಇರುವುದು ಬಹುಷಃ ಭಾರತ ದೇಶದಲ್ಲಿ ಇದೊಂದೆ ಅಂದರು ತಪ್ಪಾಗಲಾರದು.

 

ಭಾರತದ ನೆಲದಲ್ಲಿ ಸೂಫಿ ಪಂಥ ನೆಲೆಯೂರಿದ ಕಾಲದಲ್ಲಿ ಪುರುಷ ಸೂಫಿ ಸಂತರ ಜೊತೆಗೆ ಮಹಿಳಾ ಸೂಫಿ ಸಂತರು ಕೂಡ ಅಷ್ಟೆ ಪ್ರಭಾವಿ ಸಾಧಕರಾಗಿದ್ದರು. ಪವಿತ್ರ ಖುರಾನಿನ ಅಲ್-ಅಹಜಾಬ್ ಅಧ್ಯಾಯದಲ್ಲಿನ 35 ನೇ ವಾಕ್ಯದಲ್ಲಿ ದೇವರ ಅಧ್ಯಾತ್ಮಿಕ ಆಶೀರ್ವಾದಗಳು ಪುರುಷರ ಮೇಲೂ ಮಹಿಳೆಯರ ಮೇಲೂ ಸಮನಾಗಿರುತ್ತವೆಂದು ಹೇಳಲಾಗುವಂತೆ ಮಹಿಳಾ ಸೂಫಿಗಳು ಭಾರತದಲ್ಲಿ ಗೌರವಯುತವಾಗಿ ಅಧ್ಯಾತ್ಮ ಸಾಧನೆಗಳನ್ನು ಮಾಡಿದರು. ಭಾರತದುದ್ದಕ್ಕೂ ನೂರಾರು ಮಹಿಳಾ ಸೂಫಿ ಸಂತರು ಕಂಡು ಬರುತ್ತಾರೆ. ಅಜ್ಮೆರಿನ ಗ್ವಾಜಾ ಮೊಯಿನೋದ್ದಿನ ಚಿಸ್ತಿಯವರ ಮಗಳು ಬೇಗಮ್ ಹಫೀಜ್ ಜಮಾಲ್ (ಗ್ವಾಜಾ ರವರ ದರ್ಗಾದ ದಕ್ಷಿಣ ಭಾಗದಲ್ಲಿ ಇವರ ಮಝಾರ ಇದೆ.) ಬೆಂಗಳೂರಿನ ಹಜ್ರತ ಅಮೀನಾಬೀಬೀ , ದಾದಿ ಮಾ ಸಾಹೇಬಾ, ಮಸ್ತಾನಬಿಬಿ, ಸೈದಾನಿ ಬೀಬಿ, ಮಂಡ್ಯಾದ ಸೈಯಿದಾ ಅಮ್ಮಾಜಾನ, ದೇಹಲಿಯ ಬೀಬಿ ಫಾತಿಮಾ, ಮಂಗಳೂರಿನ ಸೈದಾನಿ ಬೀಬಿ, ಹೈದ್ರಾಬಾದಿನ ಪಹಾಡಿ ಷರೀಫ್ ದರ್ಗಾದ ಫಿಖೀಕಿ ಬೀಬಿ, ಬೀದರಿನ ಹಜರತ್ ಬೀಬೀ ಬಂದಗಿ ಹುಸೈನಿ, ಹಜರತ್ ಮುಕ್ಕಾ ಬೀ, ಶಾರಮ ಬೀಬಿ ಹೀಗೆ ಹಲವಾರು ಮಹಿಳಾ ಸೂಫಿ ಸಂತರು ಭಾರತ ಉದ್ದಗಲಕ್ಕೂ ಕಂಡು ಬರುತ್ತಾರೆ. ಇವರು ತಮ್ಮ ಕುಟುಂಬದ ಹಿನ್ನಲೆಯಿಂದ, ತಮ್ಮ ಪತಿಯಿಂದ, ಸಹೋದರರ, ಹೆತ್ತವರ ಹಿನ್ನಲೆಯಿಂದ ಮಾತ್ರ ಸೂಫಿ ಪಂಥಕ್ಕೆ ಕಾಲಿಟ್ಟವರಾಗಿರದೆ ತಮ್ಮ ಸ್ವಂತ ಪ್ರತಿಭೆಯಿಂದಲೂ ಸೂಫಿ ಅಧ್ಯಾತ್ಮದಲ್ಲಿ ಸಾಧನೆಗಳನ್ನು ಮಾಡಿದ್ದಾರೆ.

 

ದೊಡ್ಡ ಆಧ್ಯಾತ್ಮಿಕ ಶಕ್ತಿಗಳನ್ನು ಹೊಂದಿದರೆಂದು ನಂಬಲಾದ ಧಾರ್ಮಿಕ ಮುಸ್ಲಿಂ ಸೈದುನ್ನಿಸಾ ಬೀಮಾ ರವರು, ಈ ಪ್ರದೇಶದಲ್ಲಿ ಅನಾರೋಗ್ಯದಿಂದ ಬಳಲುತ್ತಿರುವ ಜನರನ್ನು ಗುಣಪಡಿಸಲು ಬಳಸುತ್ತಿದ್ದ ಅದ್ಭುತ ಶಕ್ತಿಯನ್ನು ಹೊಂದಿದ್ದರು ಎಂದು ನಂಬಲಾಗಿದೆ. ದಂತಕಥೆಯ ಪ್ರಕಾರ ಸೈದುನ್ನಿಸಾ ಬೀಮಾ ಬೀವಿ ಮತ್ತು ಅವರ ಮಗ ಸೈದು ಶುಹದಾ ಮಾಹೀನ್ ಅಬೂಬಕರ್ ಇಸ್ಲಾಂ ಧರ್ಮದ ಬೋಧನೆಗಳನ್ನು ಹರಡಲು ಅರೇಬಿಯಾದಿಂದ ಭಾರತಕ್ಕೆ ಬಂದರೆಂದು ನಂಬಲಾಗಿದೆ. ಈ ದರ್ಗಕ್ಕೆ ಹತ್ತಿಕೊಂಡು ಅಷ್ಟೇ ದೊಡ್ಡದಾದ ಮಸೀದಿ ಕಟ್ಟಿದ್ದು, ಅದಕ್ಕೂ ಸಹ ಗುಲಾಬಿ ಬಣ್ಣ ಹಚ್ಚಲಾಗಿದೆ. ಒಟ್ಟಿನಲ್ಲಿ ಹೇಳಬೇಕೆಂದರೆ ಪ್ರವಾಸದಲ್ಲಿ ಮಹಿಳಾ ಸೂಫಿಯ ದರ್ಗಾ ನೋಡ್ದಿದು ಒಂದು ಐತಿಹಾಸಿಕ್ ಕ್ಷಣ….

ಗೆಳೆಯರೆಲ್ಲರೂ ಸೇರಿ ಒಂದು ಪಟ ತೆಗೆದುಕೊಂಡೇವು.

ಮುಂದಿನ ವಿಷಯಗಳು ಮುಂದಿನ ಸಂಚಿಕೆಯಲ್ಲಿ….

 

== ಶಕೀಲ್ ಐ.ಎಸ್. ಹುಮ್ನಾಬಾದ್ ==

error: Content is protected !!