ಔರಾದ್ : ದೇಗುಲಗಳಲ್ಲಿ ದೀಪೋತ್ಸವ ಮಾಡುವುದು ಸರ್ವೇಸಾಮಾನ್ಯ ಆದರೆ ಎಕಲಾರ ಶಾಲೆಯನ್ನು ಜ್ಞಾನ ನೀಡುವ ದೇಗುಲವಾಗಿ ಕಂಡು ಮಕ್ಕಳು, ಶಿಕ್ಷಕರು ಮತ್ತು ಪಾಲಕರು ಜೊತೆಯಾಗಿ ಸಾವಿರಾರು ಹಣತೆಗಳಿಂದ ಕನ್ನಡ ದೀಪೋತ್ಸವ ಮಾಡಿರುವುದು ಖುಷಿ ತಂದಿದೆ ಎಂದು ಸಿಪಿಐ ರಘುವೀರಸಿಂಗ್ ಠಾಕೂರ್ ನುಡಿದರು.
ತಾಲೂಕಿನ ಎಕಲಾರ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಕನ್ನಡ ದೀಪೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಕನ್ನಡ ಸಂಸ್ಕೃತಿ ಮಕ್ಕಳಲ್ಲಿ ಬಿತ್ತುವ ಮೂಲಕ ಮಕ್ಕಳಿಗೆ ಕನ್ನಡ ನಾಡು ನುಡಿ ಬಗ್ಗೆ ಅಭಿಮಾನ ಮೂಡಿಸುತ್ತಿರುವ ಶಾಲಾ ಶಿಕ್ಷಕರ ಕಾರ್ಯ ಅವಿಸ್ಮರಣೀಯವಾಗಿದೆ.
ಶಾಲೆಯ ಕುರಿತು ಮಕ್ಕಳು ಸೇರಿದಂತೆ ಗ್ರಾಮಸ್ಥರಿಗೆ ವಿಶೇಷ ಕಾಳಜಿ, ಗೌರವ ಭಾವನೆ ಮೂಡಿಸುವ ಮತ್ತು ಗ್ರಾಮವನ್ನು ಸಾಂಸ್ಕೃತಿಕವಾಗಿ ಸಮೃದ್ಧಗೊಳಿಸಲು ಕನ್ನಡ ದೀಪೋತ್ಸವದಂತಹ ಕಾರ್ಯಕ್ರಮಗಳು ಹೆಚ್ಚೆಚ್ಚು ನಡೆಯಲಿ ಎಂದು ಆಶಯ ವ್ಯಕ್ತಪಡಿಸಿದ್ದರು.
ಒಂದಿಲ್ಲೊಂದು ವಿನೂತನ ಕೆಲಸ ಕಾರ್ಯಗಳಿಗೆ ಹೆಸರಾದ ಎಕಲಾರ ಪ್ರಾಥಮಿಕ ಶಾಲೆ ಶಿಕ್ಷಕರು ಖಾಸಗಿ ಶಾಲೆಗಳಿಗೂ ಮೀರಿ ತಮ್ಮ ಮಕ್ಕಳ ಪ್ರತಿಭೆ ಗುರುತಿಸಿ ಅವರಲ್ಲಿನ ಕ್ರಿಯಾಶೀಲತೆ, ಸೃಜನಶೀಲತೆಗೆ ನೀರೆರೆದು ಬೋಧಿಸುತ್ತಿರುವುದು ಜಿಲ್ಲೆಯಲ್ಲಿ ಮಾದರಿಯಾಗಿದೆ ಎಂದರು.
ಸಾಹಿತಿ, ಸಂಪನ್ಮೂಲ ಶಿಕ್ಷಕ ಶಿವಲಿಂಗ ಹೇಡೆ ಮಾತನಾಡಿ, ಎಕಲಾರ ಪ್ರಾಥಮಿಕ ಶಾಲೆ ಹೊಸ ಪ್ರಯೋಗಗಳ ಕೇಂದ್ರವಾಗಿ ಬೆಳೆದಿದೆ. ಪ್ರೌಢಶಾಲೆ, ಕಾಲೇಜು ಹಂತದಲ್ಲಿ ಕವನ, ಭಾಷಣ, ಪ್ರಬಂಧ, ಗಾಯನದಂತದ ಹಲವು ಚಟುವಟಿಕೆಗಳ ಸ್ಪರ್ಧೆ ಇಲ್ಲಿ ನಡೆಯುತ್ತವೆ. ಪ್ರಾಥಮಿಕ ಹಂತದಲ್ಲಿ ಸರ್ವತೋಮುಖ ಬೆಳವಣಿಗೆಗೆ ಶ್ರಮಿಸುತ್ತಿರುವ ಶಾಲಾ ಶಿಕ್ಷಕರ ನಡೆ ಶ್ಲಾಘನೀಯವಾಗಿದೆ.
ಮಕ್ಕಳಿಗೆ ಭವಿಷ್ಯದ ಶಿಕ್ಷಣ ಪಡೆಯುವ ಆಸಕ್ತಿ, ಉತ್ಸಾಹ ಪ್ರಾಥಮಿಕ ಶಾಲೆಯಲ್ಲಿಯೇ ನಿರ್ಮಾಣವಾಗುತ್ತದೆ. ಆಕಾಶದಲ್ಲಿ ಮನೆ ಕಟ್ಟಲು ಸಾಧ್ಯವಿಲ್ಲ ಎಂದ ಅವರು, ಬೇರಿಗೆ ನೀರೆರೆದಾಗ ಮಾತ್ರ ಗಿಡಗಳು ಗಟ್ಟಿಯಾಗಿ ನಿಂತು ಹೂಗಳು ಅರಳಿಸಲು ಸಾಧ್ಯ. ಇಲ್ಲಿನ ಮಕ್ಕಳು ತಾವು ಪಡೆದ ಗುಣಾತ್ಮಕ ಶಿಕ್ಷಣದಿಂದ ಮುಂದೆ ಪ್ರೌಢಶಾಲೆ, ಕಾಲೇಜುಗಳಲ್ಲಿ ಅಗ್ರಶ್ರೇಣಿ ಪಡೆದು ಗ್ರಾಮದ ಕೀರ್ತಿ ಹೆಚ್ಚಿಸುತ್ತಿದ್ದಾರೆ ಎಂದರು.
ಸಾಹಿತಿ ಮಹೇಶ್ವರಿ ಹೇಡೆ, ಮಲ್ಲಿಕಾರ್ಜುನ ಹಿಪ್ಪಳಗಾವೆ, ರಿಯಾಜ್ಪಾಶಾ ಕೊಳ್ಳುರ ಮಾತನಾಡಿದರು. ಶಿಕ್ಷಕ ಬಾಲಾಜಿ ಅಮರವಾಡಿ ಮಾತನಾಡಿ, ಮಕ್ಕಳಲ್ಲಿ ನಮ್ಮ ಶಾಲೆಯೇ ನಮ್ಮ ದೇಗುಲ ಎಂಬ ವಿಚಾರ ಬಿತ್ತುವ ಮತ್ತು ಕನ್ನಡ ಭಾಷೆ ಕುರಿತು ಅಭಿಮಾನ ಮೂಡಿಸುವ ಉದ್ದೇಶದಿಂದ ಸಮಾರಂಭ ಆಯೋಜಿಸಲಾಗಿದೆ ಎಂದರು.
ಸನ್ಮಾನ ಮತ್ತು ಪ್ರತಿಭಾ ರತ್ನ ಪುರಸ್ಕಾರ
ಎಕಲಾರ ಗ್ರಾಮದ ಶೈಕ್ಷಣಿಕ, ಸಾಮಾಜಿಕ ಕ್ಷೇತ್ರದ ಸಾಧಕ ಮಲ್ಲಿಕಾರ್ಜುನ ಹಿಪ್ಪಳಗಾವೆ, ಪರಿಸರ ಕ್ಷೇತ್ರದ ಕಾಳಜಿ ಮತ್ತು ಸಾಧನೆಗಾಗಿ ರಿಯಾಜ್ಪಾಶಾ ಕೊಳ್ಳುರ್ ಅವರಿಗೆ ವಿಶೆಷ ಸನ್ಮಾನ ಮಾಡಲಾಯಿತು. ಅಲ್ಲದೇ ಗ್ರಾಮದ ಕೀರ್ತಿ ಹೆಚ್ಚಿಸಿದ ಪಿಯುಸಿ ವಿಭಾಗದ ಸಂಗಮೇಶ ಸಂಜುಕುಮಾರ್, ಎಸ್ಸೆಸ್ಸೆಲ್ಸಿ ವಿಭಾಗದ ಭಕ್ತರಾಜ ಶಂಕರ, ಗೀತಾ ಶಿವನಾಥ, ಅಮೃತ ರಾಜಕುಮಾರ, ಅಕ್ಮಲ್ ಶಾದುಲ್ ವಿದ್ಯಾರ್ಥಿಗಳಿಗೆ ಪ್ರತಿಭಾ ರತ್ನ ಪುರಸ್ಕಾರ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷೆ ಸುನೀತಾ, ಮುಖಂಡ ಶಿವಶಂಕರ್ ಮಣಿಗೆಂಪೂರೆ ಚಿತ್ರನಟ ಹಣ್ಮು ಪಾಜಿ, ಸಪನಾ ರಘುವೀರಸಿಂಗ್ ಠಾಕೂರ್, ಪಿಎಸ್ಐ ರೇಣುಕಾ ಭಾಲೇಕರ್, ಸಿಆರ್ಪಿ ಮಾಹಾದೇವ ಘುಳೆ, ಮುಖ್ಯ ಶಿಕ್ಷಕ ಪ್ರಭು ಬಾಳೂರೆ, ಶಿಕ್ಷಕರಾದ ಬಾಲಾಜಿ ಅಮರವಾಡಿ, ವೀರಶೆಟ್ಟಿ ಗಾದಗೆ, ಅಂಕುಶ ಪಾಟೀಲ್, ರೂಪಾ, ಸಬೀತಾ, ಕಿರಣ, ಕಾವೇರಿ, ಸಿದ್ದೇಶ್ವರಿ ಸ್ವಾಮಿ, ರಮೇಶ ಹಿಪ್ಪಳಗಾವೆ ಸೇರಿದಂತೆ ಎಕಲಾರ, ತುಳಜಾಪುರ, ಕೊಳ್ಳುರ್, ಬೋರಾಳ ಗ್ರಾಮಸ್ಥರು ಉಪಸ್ಥಿತರಿದ್ದರು.
ದೀಪಗಳಿಂದ ಕಂಗೊಳಿಸಿದ ಶಾಲಾ ಕಟ್ಟಡ
ಎರಡು ದಿನಗಳಿಂದ ಶಾಲೆಯ ಕಟ್ಟಡವೆಲ್ಲ ವಿದ್ಯುತ್ ದೀಪಾಲಂಕಾರ ಮತ್ತು ದೀಪಗಳಿಂದ ಕಂಗೊಳಿಸುತ್ತಿತ್ತು. ಶಾಲಾ ಮಕ್ಕಳು ಸುರಸುರಬತ್ತಿ ಹಚ್ಚಿ ಸಂಭ್ರಮಿಸಿದರು. ಇದೇ ವೇಳೆ ಮಕ್ಕಳಿಂದ ಕನ್ನಡ ನಾಡು ನುಡಿ ಗಾಯನಗಳ ಮೇಲೆ ನಡೆದ ನೃತ್ಯೋತ್ಸವ, ಸಾಂಸ್ಕೃತಿಕ ಕಾರ್ಯಕ್ರಮಗಳು ಎಲ್ಲರ ಮನಸೂರೆಗೊಂಡವು.
ವರದಿ : ರಾಚಯ್ಯ ಸ್ವಾಮಿ