ಕನ್ನಡ ನಾಡಿನ ಪುಣ್ಯಭೂಮಿಯ ಮಣ್ಣಿನಿಂದ ಅದೆಷ್ಟೋ ದೂರ ಇರುವ ಸೌಥ್ ಆಫ್ರೀಕಾದ ಕೇಪ ಟೌನ್ ನಗರದಲ್ಲಿರುವ ಕನ್ನಡಿಗರು ಕನ್ನಡ ರಾಜ್ಯೋತ್ಸವವನ್ನು ಕನ್ನಡಿಗರ ಸಂಘದ ಆಶ್ರಯದಲ್ಲಿ ಸಂಭ್ರಮದಿಂದ ಆಚರಿಸಿದರು…
ಎತ್ತಣ ಮಾಮರ ಎತ್ತಣ ಕೋಗಿಲೆ ಎತ್ತಣಿಂದೆತ್ತ ಸಂಬಂಧವಯ್ಯಾ ? ಬೆಟ್ಟದ ಮೇಲಣ ನೆಲ್ಲಿಯ ಕಾಯಿ ಸಮುದ್ರದೊಳಗಣ ಉಪ್ಪುಎತ್ತಣಿಂದೆತ್ತ ಸಂಬಂಧವಯ್ಯಾ ? ಎಂಬಂತೆ ವಿದೇಶದಲ್ಲಿ ಕನ್ನಡ ಭಾಷೆಯ ಕಂಪನ್ನು ಪಸರಿಸುತ್ತಿರುವ ಹೊರದೇಶದ ಕನ್ನಡಿಗರು ಏರ್ಪಡಿಸಿದ್ದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮ ಕನ್ನಡ ಕಂಪು ಬೀರುವಿಕೆಗೆ ಸಾಕ್ಷಿಯಾಗಿತ್ತು. ಕನ್ನಡ ಸಂಘವು ಕನ್ನಡ ರಾಜ್ಯೋತ್ಸವ ನಿಮಿತ್ತ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು. ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಬಿ ಸುಬ್ಬರಾವ್ ಚಾಲನೆ ನೀಡಿದರು.
ಕಾರ್ಯಕ್ರಮ ಉದ್ದೇಶಿಸಿ ಕೇಪಟೌನ್ ಕನ್ನಡ ಸಂಘದ ಸದಸ್ಯರಾದ ರವಿ ದಬಗೊಂದಿ ಮಾತನಾಡಿ ರಾಜ್ಯೋತ್ಸವ ಕೇವಲ ಒಂದು ದಿನಕ್ಕೆ ಮಾತ್ರ ಸೀಮಿತವಾಗಬಾರದು. ವ್ಯವಹಾರಕ್ಕಾಗಿ ಆಂಗ್ಲ ಭಾಷೆ ಬೇಕು, ಆದರೆ ನಾವು ಯಾವಾಗಲೂ ಕನ್ನಡ ಭಾಷೆಯನ್ನು ಮರೆಯಬಾರದು ಎಂದು ಸಲಹೆ ನೀಡಿದರು.
30ಕ್ಕೂ ಹೆಚ್ಚು ಕಲಾವಿದರು ಭಾಗವಹಿಸಿ ತಮ್ಮ ಕಲಾ ಪ್ರದರ್ಶನ ನೀಡಿ ಮನರಂಜಿಸಿದರು. ಮಕ್ಕಳ ಪ್ರಾರ್ಥನೆ, ನಾಡಗೀತೆ ಹಾಡುವುದರೊಂದಿಗೆ ಕನ್ನಡ ತಾಯಿ ಭುವನೇಶ್ವರಿಗೆ ನಮಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಕಾರ್ಯಕ್ರಮದಲ್ಲಿ ಮಕ್ಕಳ ನೃತ್ಯ, ಭರತನಾಟ್ಯ, ಜಾನಪದ ನೃತ್ಯ, ಗೀತ ಗಾಯನ, ರಸಪ್ರಶ್ನೆ, ಮಕ್ಕಳ ವೇಷಭೂಷಣಗಳು ಕಾಯಕ್ರಮದಲ್ಲಿ ನೋಡುಗರನ್ನು ಆಕರ್ಷಿಸಿದವು. ಇನ್ನು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಎಲ್ಲ ಅತಿಥಿಗಳಿಗೆ ಕನ್ನಡ ನಾಡಿನ ವಿವಿಧ ಭಾಗಗಳ ಆಹಾರ ಖಾದ್ಯಗಳ ವ್ಯವಸ್ಥೆ ಮಾಡಲಾಗಿತ್ತು.
ಕಾರ್ಯಕ್ರಮದಲ್ಲಿ ಸುಮಾರು 150ಕ್ಕೂ ಹೆಚ್ಚು ಜನ ಭಾಗವಹಿಸಿದ್ದರು. ನಮ್ಮ ಕನ್ನಡ ಸಂಸ್ಕೃತಿ, ಭಾಷೆಯ ಮಹತ್ವವನ್ನು ಸಾರುವ ಇಂಥ ಅನೇಕ ಕಾರ್ಯಕ್ರಮಗಳನ್ನು ಆಚರಿಸಿ ನಮ್ಮ ನಾಡಿನ ಅಸ್ತಿತ್ವವನ್ನು ಜಗತ್ತಿಗೆ ಸಾರುವ ಪ್ರಯತ್ನ ಸದಾ ಹೀಗೆ ಮುಂದುವರೆಯುತ್ತದೆ ಎಂದು ಸೌಥ್ ಆಫ್ರೀಕಾದ ಕನ್ನಡಿಗರು ಕನ್ನಡನಾಡಿನ ಅಭಿಮಾನವನ್ನು ವಿದೇಶದಲ್ಲೂ ಪ್ರಸ್ತುತಪಡಿಸಿದರು. ಕಾಯಕ್ರಮದಲ್ಲಿ ಸುಜಾತಾ, ಶ್ರೀನಾಥ್, ಸದಾನಂದ ವಾಮಾ, ಗೌರೀಶ್ ಬರೋಟಿ, ಹರೀಶ್ ಹೆಬ್ಬಾರ, ಪ್ರಶಾಂತ್ ರೇವಣ್ಣ, ಹೊಸೂರು ವೆಂಕಟಪ್ಪ, ಪ್ರಥಮ್, ವಿನುತಾ, ಖುಷಿ, ವಿಕಾಸ್, ಶೃತಿ, ಅನ್ಯಶ್ರೀ, ಪೂಜಾ, ವಿಕಾಸ್ ಹಾಗೂ ಹಲವಾರು ಕನ್ನಡಿಗರು ಪಾಲ್ಗೊಂಡಿದ್ದರು…