ಬಾಗಲಕೋಟೆ: ತಾಲ್ಲೂಕಿನ ಹೊನ್ನಾಕಟ್ಟಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಲ್ಲಾ ತರಗತಿಗಳ ಮಕ್ಕಳಿಗೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಅಧ್ಯಕ್ಷರು ಮತ್ತು ಅಂತಾರಾಷ್ಟ್ರೀಯ ಪ್ಯಾರಾ ಕಬ್ಬಡ್ಡಿ ಭಾರತ ತಂಡದ ಮಾಜಿ ನಾಯಕರಾದ ಶ್ರೀ ಶೇಖರ್ ಕಾಖಂಡಕಿಯವರು, ಹಾಗೂ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತರಾದ ಅಶೋಕ ಮುಳವಾಡ ಅವರು, ಯುವ ಪತ್ರಕರ್ತರಾದ ಕು. ಹನಮಂತ ಐಹೊಳೆಯವರ ನೇತೃತ್ವದಲ್ಲಿ , ಶಾಲಾ ಗುರುವೃಂದದ ಸಮ್ಮುಖದಲ್ಲಿ ಉಚಿತ ನೋಟ್ ಬುಕ್ ವಿತರಣೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಮಾತನಾಡಿದ ಶೇಖರ್ ಕಾಖಂಡಕಿಯವರು ಬಡವರ ಮಕ್ಕಳು ಸರ್ಕಾರಿ ಶಾಲೆಯಲ್ಲಿ ಹೆಚ್ಚಾಗಿ ಓದುತ್ತಿರುವುದರಿಂದ ಅವರ ಸರ್ವತೋಮುಖ ಶ್ರೇಯೋಭಿವೃದ್ಧಿಗೆ ಸೌಲಭ್ಯಗಳನ್ನು ಸರ್ಕಾರಗಳು ಒದಗಿಸಬೇಕು. ಮಕ್ಕಳು ಕೂಡ ಆ ನಿಟ್ಟಿನಲ್ಲಿ ಅಭ್ಯಾಸ ಮಾಡಿ ಊರಿಗೆ, ಮನೆಗೆ ಕೀರ್ತಿ ತಂದು ಹೆಮ್ಮೆ ಪಡುವಂತೆ ಬದುಕಬೇಕು ಎಂದು ಹೇಳಿದರು. ಯುವ ಪತ್ರಕರ್ತರಾದ ಕು. ಹನಮಂತ ಐಹೊಳೆ ಮಾತನಾಡುತ್ತಾ, ನಮ್ಮ ಶಾಲಾ ಮಕ್ಕಳಿಗೆ ವಿಶೇಷ ರೀತಿಯ ಸೌಲಭ್ಯಕ್ಕಾಗಿ ಗುರುಗಳ ಮಾರ್ಗದರ್ಶನದಲ್ಲಿ ಏನಾದರೂ ಮಾಡಬೇಕೆಂಬ ಹಂಬಲವಿದೆ. ಆ ನಿಟ್ಟಿನಲ್ಲಿ ಮುಖ್ಯ ಗುರುಗಳು ಸಮ್ಮತಿಸಿದರೆ ಅಧಿಕಾರಿಗಳ ಜೊತೆ ಮಾತನಾಡುತ್ತೇವೆ. ಶಾಲಾ ಮಕ್ಕಳ ಉತ್ತಮ ಗುಣಮಟ್ಟದ ಅಭ್ಯಾಸದ ಅವಶ್ಯಕಗಳ ತರುವಿಕೆಗಾಗಿ ಪ್ರಯತ್ನಿಸುತ್ತೇವೆ. ಶಿಕ್ಷಣ ಪ್ರೇಮಿಗಳನ್ನು ಸಂಪರ್ಕಿಸಿ ಸಲಹೆಗಳನ್ನು ಪಡೆದು ನಮ್ಮ ಶಾಲೆಯನ್ನು ಮಾದರಿ ಶಾಲೆಯನ್ನಾಗಿ ಮಾಡೋಣ ಎಂದರು. ಮುಖ್ಯ ಗುರುಗಳಾದ ಕೆ.ಎ. ಮಬ್ರುಮಕರ ಅವರು ಮಾತನಾಡಿ, ಉತ್ತಮ ಶೈಕ್ಷಣಿಕ ವ್ಯವಸ್ಥೆ ನಮ್ಮಲ್ಲಿದ್ದು, ಮಕ್ಕಳ ಕಲಿಕಾ ಗುಣಮಟ್ಟವನ್ನು ಹೆಚ್ಚಿಸಲು ವಿಶೇಷ ಯೋಜನೆಗಳನ್ನು ರೂಪಿಸಿಕೊಂಡಿದ್ದೇವೆ. ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಸಹಕಾರಿಯಾಗುವಂತೆ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳನ್ನು ನಡೆಸುತ್ತಿದ್ದೇವೆ. ಉತ್ತಮ ಸಂಸ್ಕಾರ ರೂಪಿಸಲು ಐತಿಹಾಸಿಕ ಚರಿತ್ರೆಗಳ ಜೊತೆಗೆ ರಾಮಾಯಣ, ಮಹಾಭಾರತದಂತಹ ಪೌರಾಣಿಕ ಕಥೆಗಳನ್ನು ಮಕ್ಕಳಿಗೆ ಹೇಳುತ್ತೇವೆ. ವೈಜ್ಞಾನಿಕ ದೃಷ್ಟಿಕೋನ ಬಿತ್ತಲು ಕೆಲವು ಪ್ರಾಯೋಗಿಕ ತರಗತಿಗಳನ್ನು ನಡೆಸುತ್ತಿದ್ದೇವೆ. ಅಷ್ಟು ಮಾತ್ರವಲ್ಲದೇ ಮಕ್ಕಳಲ್ಲಿ ಸ್ಪರ್ಧಾತ್ಮಕ ಮನೋಭಾವ ಬೆಳೆಸುವ ದೃಷ್ಟಿಯಿಂದ ಪ್ರತಿಭಾ ಕಾರಂಜಿಯಂತಹ ವೇದಿಕೆಗಳಿಗೆ ಮಕ್ಕಳನ್ನು ಸಿದ್ಧ ಪಡಿಸಲು ನಮ್ಮ ಶಾಲಾ ಶಿಕ್ಷಕ ಹಾಗೂ ಶಿಕ್ಷಕೇತರ ಸಿಬ್ಬಂದಿಗಳು ಕಾಯಾ, ವಾಚಾ, ಮನಸಾ ಪಾರದರ್ಶಕವಾಗಿ, ಪ್ರಾಮಾಣಿಕತೆಯಿಂದ ದುಡಿಯುತ್ತಿದ್ದಾರೆ ಎಂದರು. ಈ ಸಂದರ್ಭದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಅಧ್ಯಕ್ಷರು ಹಾಗೂ ಅಂತಾರಾಷ್ಟ್ರೀಯ ಪ್ಯಾರಾ ಕಬ್ಬಡ್ಡಿ ಆಟಗಾರರಾದ ಶೇಖರ್ ಕಾಖಂಡಕಿ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತರಾದ ಅಶೋಕ ಮುಳವಾಡ, ಯುವ ಪತ್ರಕರ್ತರಾದ ಕು. ಹನಮಂತ ಐಹೊಳೆ, ಅನ್ವರ್ ಅಲಿ ಕೊಣ್ಣೂರ ಸೇರಿದಂತೆ ಮುಖ್ಯ ಗುರುಗಳಾದ ಕೆ.ಎ. ಮಬ್ರುಮಕರ ಇತರೆ ಶಿಕ್ಷಕರು ಹಾಗೂ ಶಿಕ್ಷಕೇತರ ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ವರದಿ: ಖಾಜಾಮೈನುದ್ದಿನ ತಹಶೀಲ್ದಾರ್