ಕಾಂಗ್ರೆಸ್ ಜತೆ ಮೈತ್ರಿ ವಿಚಾರ: ಅರವಿಂದ್ ಕೇಜ್ರಿವಾಲ್ ಪ್ರತಿಕ್ರಿಯೆ

 

ನವದೆಹಲಿ: ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನೊಂದಿಗೆ ಆಡಳಿತಾರೂಢ ಆಮ್ ಆದ್ಮಿ ಪಕ್ಷ ಮೈತ್ರಿ ಮಾಡಿಕೊಳ್ಳುವ ವಿಚಾರಕ್ಕೆ ಸಂಬಂಧಿಸಿ ಆಪ್ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಪ್ರತಿಕ್ರಿಯೆ ನೀಡಿದ್ದು, ನಾವು ಮೈತ್ರಿ ಮಾಡಿಕೊಳ್ಳುವುದಿಲ್ಲ, ಏಕಾಂಗಿಯಾಗಿ ಚುನಾವಣೆ ಎದುರಿಸುತ್ತವೆ ಎಂದು ಮಂಗಳವಾರ(ಡಿ10) ಹೇಳಿಕೆ ನೀಡಿದ್ದಾರೆ.

 

ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಕೇಜ್ರಿವಾಲ್ ‘ ನಾವು ನಮ್ಮ ಸ್ವಂತ ಬಲದ ಮೇಲೆ ಚುನಾವಣೆ ಎದುರಿಸುತ್ತೇವೆ. ಯಾವುದೇ ಮೈತ್ರಿ ಇಲ್ಲ’ ಎಂದು ಘೋಷಿಸಿದ್ದಾರೆ.

 

ದೆಹಲಿ ಚುನಾವಣೆಗೆ ಕಾಂಗ್ರೆಸ್‌ನೊಂದಿಗೆ ಸೀಟು ಹಂಚಿಕೆ ಒಪ್ಪಂದದ ಮಾತುಕತೆಯ ಅಂತಿಮ ಹಂತದಲ್ಲಿ ಎಎಪಿ ಇದೆ ಹೇಳಲಾದ ಬೆನ್ನಲ್ಲೇ ಕೇಜ್ರಿವಾಲ್ ಈ ಸಂದೇಶ ರವಾನಿಸಿದ್ದಾರೆ.

2015 ರಿಂದ ಅಧಿಕಾರದಲ್ಲಿರುವ ಆಪ್ ಈ ಬಾರಿ ಮೂರನೇ ಬಾರಿ ಅಧಿಕಾರದ ಚುಕ್ಕಾಣಿ ಹಿಡಿಯಲು ಸಿದ್ಧತೆಗಳನ್ನು ಮಾಡಿದ್ದು ಈಗಾಗಲೇ ಕೆಲವು ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನೂ ಘೋಷಿಸಿದೆ.ಇದುವರೆಗೆ 70 ಸ್ಥಾನಗಳ ಪೈಕಿ 31 ಅಭ್ಯರ್ಥಿಗಳನ್ನು ಘೋಷಿಸಿ ಜನಸಂಪರ್ಕ ಸಾಧಿಸುವ ಟಾಸ್ಕ್ ನೀಡಿದೆ.

 

ಲೋಕಸಭಾ ಚುನಾವಣೆಯಲ್ಲಿ ಇಂಡಿಯಾ ಮೈತ್ರಿಕೋಟದಡಿ ದೆಹಲಿಯ 7 ಸ್ಥಾನಗಳ ಪೈಕಿ 4 ರಲ್ಲಿ ಆಪ್ ಮತ್ತು 3 ರಲ್ಲಿ ಕಾಂಗ್ರೆಸ್ ಮೈತ್ರಿ ಮಾಡಿಕೊಂಡು ಸ್ಪರ್ಧೆ ಮಾಡಿದ್ದವು. ಮೈತ್ರಿಯಾದರೂ 7 ಸ್ಥಾನಗಳನ್ನೂ ಬಿಜೆಪಿ ಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ಕಳೆದ ಎರಡೂ ಸಾರ್ವತ್ರಿಕ ಚುನಾವಣೆಗಳಲ್ಲಿ ಕಾಂಗ್ರೆಸ್ ಒಂದೂ ಸ್ಥಾನವನ್ನು ಗೆಲ್ಲಲು ಸಾಧ್ಯವಾಗಿಲ್ಲ.

error: Content is protected !!