ವಿಜಯಪುರ: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಅವಮಾನ ಮಾಡಿರುವುದನ್ನು ಖಂಡಿಸಿ ಅಹಿಂದ, ದಲಿತ, ಪ್ರಗತಿ ಪರ ಸಂಘಟನೆಗಳ ಒಕ್ಕೂಟದಿಂದ ಸೋಮವಾರ ಕರೆ ನೀಡಿರುವ ವಿಜಯಪುರ ಬಂದ್ ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಬಂದ್ ಹಿನ್ನೆಲೆಯಲ್ಲಿ ವಿಜಯಪುರ ನಗರ ವ್ಯಾಪ್ತಿಯ ಶಾಲಾ, ಕಾಲೇಜುಗಳಿಗೆ ರಜೆ ನೀಡಲಾಗಿದೆ.
ನಗರ ಸಾರಿಗೆ ಬಸ್ ಸಂಚಾರ ಸಂಪೂರ್ಣ ಸ್ಥಗಿತವಾಗಿದೆ. ಅಂಗಡಿ, ಮಳಿಗೆಗಳು, ಮಾಲ್‌ಗಳು ಬಾಗಿಲು ತೆರೆದಿಲ್ಲ.
ಜನರು ಅಗತ್ಯ ಕೆಲಸಕ್ಕಾಗಿ ಕಾರು, ಬೈಕು, ಆಟೋ ರಿಕ್ಷಾಗಳ ಮೊರೆ ಹೋದರೂ, ಜನ ಸಂಚಾರ ವಿರಳವಾಗಿದ್ದು, ಪ್ರಮುಖ ರಸ್ತೆಗಳು ಬಿಕೋ ಎನ್ನುತ್ತಿವೆ. ದೂರದ ನಗರ, ಪಟ್ಟಣಗಳಿಗೆ ತೆರಳುವ ಬಸ್ ಗಳ ಸಂಚಾರ ಎಂದಿನಂತೆ ಇದೆ.
ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದಾರೆ. ನಗರದ ಕೇಂದ್ರ ಬಸ್ ನಿಲ್ದಾಣ, ಮಹಾತ್ಮಗಾಂಧಿ ರಸ್ತೆ, ಶಿವಾಜಿ ಸರ್ಕಲ್, ಬಸವೇಶ್ವರ ಸರ್ಕಲ್, ಅಂಬೇಡ್ಕರ್ ಸರ್ಕಲ್ ಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ.
ಪ್ರತಿಭಟನಾ ಜಾಥಾ ಸಾಗುವ ಮಾರ್ಗಗಳಲ್ಲಿ ಸಂಚಾರವನ್ನು ನಿರ್ಬಂಧಿಸಲಾಗಿದೆ. ವಿಜಯಪುರ ಕೃಷಿ ಉತ್ಪನ್ನ ಮಾರುಕಟ್ಟೆ ಯಲ್ಲಿ ವ್ಯಾಪಾರ, ವಹಿವಾಟು ಸಂಪೂರ್ಣ ಸ್ಥಗಿತವಾಗಿದೆ.
ಔಷಧ ಅಂಗಡಿ, ಪೆಟ್ರೊಲ್ ಬಂಕ್, ದಿನಪತ್ರಿಕೆ, ಹೂವು, ಹಾಲಿನ ವ್ಯಾಪಾರಕ್ಕೆ ಬೆಳಿಗ್ಗೆ ಯಾವುದೇ ತೊಂದರೆ ಆಗದಂತೆ ಬಂದ್ ನಿಂದ ವಿನಾಯ್ತಿ ನೀಡಲಾಗಿತ್ತು.
ಸರ್ಕಾರಿ ಕಚೇರಿಗಳು, ರಾಷ್ಟ್ರೀಕೃತ ಬ್ಯಾಂಕುಗಳು, ಆಸ್ಪತ್ರೆಗಳು ಎಂದಿನಂತೆ ಬಾಗಿಲು ತೆರೆದಿವೆ. ಆದರೆ, ಸಿಬ್ಬಂದಿ, ಸಾರ್ವಜನಿಕರಿಲ್ಲದೇ ಬಿಕೋ ಎನ್ನುತ್ತಿವೆ.
ದೂರದ ಊರುಗಳಿಂದ ಪ್ರವಾಸಕ್ಕೆ ಬಂದಿರುವ ಪ್ರವಾಸಿಗರಿಗೆ ಹೋಟೆಲ್, ಖಾನಾವಳಿಗಳು ಬಂದ್ ಇರುವುದರಿಂದ ಊಟ, ಉಪಹಾರಕ್ಕೆ ತೊಂದರೆ ಆಗಿದೆ. ದೂರದ ಊರುಗಳಿಂದ ಬಸ್, ರೈಲು ಮೂಲಕ ನಗರಕ್ಕೆ ಬಂದವರಿಗೆ ಒಂದು ಕಡೆಯಿಂದ ಇನ್ನೊಂದು ಕಡೆಗೆ ತೆರಳಲು ಸಾರಿಗೆ ವ್ಯವಸ್ಥೆ ಇಲ್ಲದೇ ನಡೆದುಕೊಂಡೇ ತೆರಳಿದರು.
ವರದಿ : ಅಝೀಜ್ ಪಠಾಣ