ವಿಜಯಪುರದಲ್ಲಿ ಖೋಟಾ ನೋಟು ಜಾಲ ಪತ್ತೆ ||ನಾಲ್ವರ ಬಂಧನ

 

500 ಮುಖಬೆಲೆಯ 245 ನೋಟುಗಳನ್ನು ವಶಪಡಿಸಿಕೊಂಡ ಪೊಲೀಸರು

ವಿಜಯಪುರ: ನಗರದಲ್ಲಿ ಖೋಟಾ ನೋಟು ಚಲಾವಣೆ ಮಾಡುತ್ತಿದ್ದ ನಾಲ್ವರು ಆರೋಪಿಗಳನ್ನು ಬಂಧಿಸಿ ಅವರಿಂದ 500 ಮುಖ ಬೆಲೆಯ ಒಟ್ಟು ₹1.22,500 ಮೊತ್ತದ 245 ಖೋಟಾ ನೋಟುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ತಿಳಿಸಿದ್ದಾರೆ.

ಡಿಸೆಂಬರ್ 28ರಂದು ನಗರದ ವಾಟರ್ ಟ್ಯಾಂಕ್ ಹತ್ತಿರದ ಹಾಲಿನ ಅಂಗಡಿಯೊಂದರಲ್ಲಿ ₹500 ಮುಖ ಬೆಲೆಯ ಖೋಟಾ ನೋಟು ಕೊಡುತ್ತಿರುವ ಬಗ್ಗೆ ಗಾಂಧಿಚೌಕ ಪಿಎಸ್‌ಐ ರಾಜು ಮಮದಾಪೂರ ಅವರಿಗೆ ಬಂದ ಮಾಹಿತಿ ಆಧಾರದ ಮೇಲೆ ದಾಳಿ ನಡೆಸಿ, ವಜ್ರ ಹನುಮಾನ ನಗರದ ನಿವಾಸಿಯಾದ ಕೆಎಸ್‌ಆರ್‌ಟಿಸಿ ಮೆಕ್ಯಾನಿಕ್ ರಿಯಾಜ್ ಕಾಶಿಮಸಾಬ ವಾಲಿಕಾರ (44) ಎಂಬಾತನ್ನು ಬಂಧಿಸಿ, ಆತನ ಬಳಿ ಇದ್ದ ₹500 ಮುಖ ಬೆಲೆಯ 5 ಖೋಟಾ ನೋಟುಗಳನ್ನು ವಶಕ್ಕೆ ಪಡೆದುಕೊಳ್ಳಲಾಯಿತು ಎಂದು ತಿಳಿಸಿದ್ದಾರೆ.

ಪ್ರಕರಣದ ಹೆಚ್ಚಿನ ತನಿಖೆಗಾಗಿ ನೇಮಿಸಲಾದ ಗಾಂಧಿಚೌಕ ಪೊಲೀಸ್‌ ಇನ್‌ಸ್ಪೆಕ್ಟರ್ ಪ್ರದೀಪ ತಳಕೇರಿ ನೇತೃತ್ವದ ತನಿಖಾ ತಂಡವು ಲಿಂಗಸೂರಿನ ದುರಗಪ್ಪ ರಾಮರಟ್ಟಿ (44) ಬಳಿ ₹ 500 ಮುಖ ಬೆಲೆಯ 20 ಖೋಟಾ ನೋಟುಗಳು, ಮಹಾಲಿಂಗಪೂರದ ಕಿರಾಣ ಹರಿಜನ (25) ಬಳಿ ₹ 500 ಮುಖ ಬೆಲೆಯ 100 ಖೋಟಾ ನೋಟುಗಳು ಹಾಗೂ ಕೊಲ್ಹಾರ ತಾಲ್ಲೂಕಿನ ಹೊಳೆಹಂಗರಗಿ ಗ್ರಾಮದ ರಮೇಶ ಸವಳತೋಟ(44) ಬಳಿ ₹500 ಮುಖ ಬೆಲೆಯ 120 ಖೋಟಾ ನೋಟುಗಳನ್ನು ವಶಪಡಿಸಿಕೊಂಡು,ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.ಪ್ರಕರಣವು ತನಿಖಾ ಹಂತದಲ್ಲಿ ಇದೆ ಎಂದು ತಿಳಿಸಿದ್ದಾರೆ.

ಪ್ರಕರಣದ ತನಿಖಾ ತಂಡದಲ್ಲಿ ಗಾಂಧಿಚೌಕ ಪೊಲೀಸ್ ಇನ್‌ಸ್ಪೆಕ್ಟ‌ರ್ ಪ್ರದೀಪ ತಳಕೇರಿ, ಪಿಎಸ್‌ಐ ರಾಜು ಮಮದಾಪುರ, ಪಿಎಸ್‌ಐ ಸುಷ್ಮಾ ನಂದಿಗೋಣ, ಸಿಬ್ಬಂದಿಗಳಾದ ಅನೀಲ ದೊಡಮನಿ, ರಾಜು ನಾಯಕ, ಎಸ್ ಪಿ ಗದ್ಯಾಳ, ಜಿ.ಎಚ್. ಮುಲ್ಲಾ, ಕೆ. ಜೆ. ರಾಠೋಡ, ವಿ.ಎಚ್. ಕಡ್ಡಿಬಾಳು, ಆರ್.ಎಸ್. ಗೋದೆ, ಬಸವರಾಜ ದಿನ್ನಿ, ಎಚ್‌.ಎಚ್ ಜಮಾದಾರ ಹಾಗೂ ಗುಂಡು ಗಿರಣಿವಡ್ಡರ, ಸುನೀಲ್ ಗವಳಿ ಪಾಲ್ಗೊಂಡಿದ್ದರು ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

ವರದಿ : ದೌಲಪ್ಪ ಮನಗೋಳಿ

error: Content is protected !!