ಔರಾದ್ : ತಾಲೂಕಿನಲ್ಲಿ ಬರುವ ಪ್ರತಿಯೊಂದು ಹಳ್ಳಿಗಳಿಗೆ ಸಮಸ್ಯೆಗಳನ್ನು ತಿಳಿದುಕೊಳ್ಳುವುದಲ್ಲದೇ ಜನರ ಸಮಸ್ಯೆಗಳಿಗೆ ಪ್ರಾಮಾಣಿಕವಾಗಿ ಸ್ಪಂದಿಸುತ್ತೇನೆ, ಗ್ರಾಮಗಳಲ್ಲಿನ ರಸ್ತೆ, ನೀರಿನ ತೊಂದರೆ ಗಳನ್ನು ನಿವಾರಿಸುವ ಪ್ರಯತ್ನ ಮಾಡುತ್ತೇನೆ ಎಂದು ಸಂಸದ ಸಾಗರ ಖಂಡ್ರೆ ತಿಳಿಸಿದರು.
ಅವರು ತಾಲೂಕಿನ ಸಂತಪೂರ ಗ್ರಾಮದಲ್ಲಿ ಶುಕ್ರವಾರ ಸಾರ್ವಜನಿಕರ ಅಹವಾಲು ಸ್ವೀಕರಿಸಿ ಮಾತನಾಡಿದರು. ಸಾರ್ವಜನಿಕರು ಮುಂದಿಟ್ಟ ಬೇಡಿಕೆ ಪಟ್ಟಿಯಲ್ಲಿ ಸಂಬಂಧಪಟ್ಟ ಇಲಾಖೆಯ ಅಧಿಕ ವ್ಯಾಪ್ತಿಯಲ್ಲಿ ಬರುವ ಬಹುತೇಕ ಸಮಸ್ಯೆಗಳನ್ನು ಅಧಿಕಾರಿಗಳಿಗೆ ತಿಳಿಸುವ ಮೂಲಕ ಬಗೆಹರಿಸಲಾಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಜನರ ಸಮಸ್ಯೆ ನಿವಾರಿಸಿಸುವ ಕ್ರಮ ಶೀಘ್ರದಲ್ಲೆ ಕೈಗೆತ್ತಿಕೊಳ್ಳುವುದಾಗಿ ಹೇಳಿದರು.
ಪಕ್ಷದಲ್ಲಿ ಪ್ರಮಾಣಿಕವಾಗಿ ಶ್ರಮಿಸಿದ ಪ್ರತಿಯೊಬ್ಬ ಕಾರ್ಯಕರ್ತರ ಋಣ ತೀರಿಸುವಂತೆ ಕ್ಷೇತ್ರದಲ್ಲಿ ಕೆಲಸ ಮಾಡಲಾಗುತ್ತದೆ. ನಿಮ್ಮ ವಿಶ್ವಾಸಾರ್ಹ ಕೆಲಸ ಮಾಡುವುದು ನನ್ನ ಜವಾಬ್ದಾರಿಯಾಗಿದೆ. ಈ ನಿಟ್ಟಿನಲ್ಲಿ ಕೆಲಸ ಮಾಡಲು ಪ್ರಾಮಾಣಿಕವಾಗಿ ಪ್ರಯತ್ನ ಮಾಡುತ್ತೇನೆ ಎಂದರು.
ಔರಾದ್ ಕೃಷಿ ಇಲಾಖೆಯ ಅಧಿಕಾರಿ ಚಂದ್ರಕಾಂತ ಉಡಬಾಳೆ ಅವರಿಗೆ ವಿನಾಕಾರಣ ವರ್ಗಾವಣೆ ಮಾಡಲಾಗಿದೆ. ಕುಡಲೇ ಅವರನ್ನು ಔರಾದಗೆ ವರ್ಗಾವಣೆ ಮಾಡಬೇಕು ಎಂದು ಒತ್ತಾಯಿಸಿದ ಸಾರ್ವಜನಿಕರು, ಚಂದ್ರಕಾಂತ ಉಡಬಾಳೆ ಅವರ ಸಹೋದರು ಕಾಂಗ್ರೆಸ್ ಕಾರ್ಯಕರ್ತರಾದ ಹಿನ್ನಲೆ ಶಾಸಕ ಪ್ರಭು ಚವ್ಹಾಣ ವರ್ಗಾವಣೆ ಮಾಡಿಸಿದ್ದಾರೆ ಎಂದು ಆರೋಪಿಸಿದ್ದರು. ಇದಕ್ಕೆ ಉತ್ತರಿಸಿದ ಸಂಸದ ಖಂಡ್ರೆ ಅವರು ಇದರ ಬಗ್ಗೆ ವಿಚಾರಿಸಿ ಸ್ಪಂದಿಸುವದಾಗಿ ಭರವಸೆ ನೀಡಿದರು.
ಕಂದಗೂಳ ಗ್ರಾಮದಲ್ಲಿ ಡಾ. ಬಿಆರ್ ಅಂಬೇಡ್ಕರ್ ಅವರ ಭವನ ನಿರ್ಮಾಣ ಮಾಡುವಂತೆ ದಸಂದ ಜಿಲ್ಲಾ ಸಂಚಾಲಕ ಧನರಾಜ ಮುಸ್ತಾಪೂರ, ದಸಂಸ ಜಿಲ್ಲಾಧ್ಯಕ್ಷ ಸತೀಶ ವಗ್ಗೆ ಸಂಸದ ಖಂಡ್ರೆ ಅವರಿಗೆ ಮನವಿಪತ್ರ ಸಲ್ಲಿಸಿದರು. ಶೀಘ್ರದಲ್ಲಿ ಸ್ಪಂದಿಸುವ ಕೆಲಸ ಮಾಡುವದಾಗಿ ಭರವಸೆ ನೀಡಿದರು. ಸಂತಪೂರ ಬಸವೇಶ್ವರ ವೃತ್ತದ ಬಳಿಯಲ್ಲಿ ನಿತ್ಯ ಸಾವಿರಾರು ಜನ ಪ್ರಯಾಣ ಮಾಡುತ್ತಾರೆ. ಇಲ್ಲಿ ಮಹಿಳಾ ಪ್ರಯಾಣಿಕರಿಗೆ ಸಾರ್ವಜನಿಕ ಶೌಚಾಲಯದ ವ್ಯವಸ್ಥೆ ಮಾಡುವಂತೆ ಗ್ರಾಮದ ಧನರಾಜ ಮನವಿ ಮಾಡಿದರು.
ಬ್ಲಾಕ್ ಕಾಂಗ್ರೆಸ್ ರಾಜಕುಮಾರ ಹಲಬರ್ಗೆ, ಗ್ಯಾರಂಟಿ ಯೋಜನೆ ತಾಲೂಕು ಅಧ್ಯಕ್ಷ ಚನ್ನಪ್ಪ ಉಪ್ಪೆ, ಡಾ. ಭೀಮಸೇನರಾವ ಶಿಂಧೆ, ಪಪಂ ಮಾಜಿ ಅಧ್ಯಕ್ಷ ಸುನಿಲಕುಮಾರ ದೇಶಮುಖ, ಸುಧಾಕಾರ ಕೊಳ್ಳುರ್, ಧನರಾಜ ಮುಸ್ತಾಪೂರ, ಸಾಯಿನಾಥ ಘೋಡಕೆ, ಧನರಾಜ ಬಿರಾದಾರ್ , ಸತೀಶ ವಗ್ಗೆ, ತುಕಾರಾಮ ಹಸನ್ಮುಖಿ ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಜನರು ಪಾಲ್ಗೊಂಡರು.
ಬಾಜಾ ಭಜಂತ್ರಿಯೊಂದಿಗೆ ಸ್ವಾಗತ
ಸಂತಪೂರ ಗ್ರಾಮಕ್ಕೆ ಆಗಮಿಸುತ್ತಿದಂತೆ ಸಾರ್ವಜನಿಕರು ಬಾಜಾ ಭಜಂತ್ರಿಯೊಂದಿಗೆ ಅದ್ಧೂರಿಯಾಗಿ ಸ್ವಾಗತಿಸಿದರು. ಪಟಾಕಿ ಸಿಡಿಸಿ ಸಂಭ್ರಮಿಸಿದರು.
100 ಅಹವಾಲು ಸ್ವೀಕಾರ
ಸಾರ್ವಜನಿಕರ ಅಹವಾಲು ಸ್ವೀಕಾರ ಕಾರ್ಯಕ್ರಮದಲ್ಲಿ ಜನರು 100 ಅಧಿಕ ಸಮಸ್ಯೆಗಳಿಗೆ ಮನವಿಪತ್ರ ಸಲ್ಲಿಸಿದ್ದಾರೆ. ಮನವಿ ಸ್ವೀಕರಿಸಿದ ಸಂಸದ ಸಾಗರ ಖಂಡ್ರೆ ಅವರು ನಿಮ್ಮ ಸಮಸ್ಯೆಯನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ವರ್ಗಾವಣೆ ಮಾಡುವ ಮೂಲಕ ಬಗೆಹರಿಸಲು ಪ್ರಮಾಣಿಕ ಪ್ರಯತ್ನ ಮಾಡುತ್ತೇನೆ. ಅದಾಗ್ಯೂ ಸಮಸ್ಯೆ ಬಗೆಹರಿಯದೇ ಹೋದಲ್ಲಿ ಗಮನಕ್ಕೆ ತರುವಂತೆ ತಿಳಿಸಿದರು.
ವರದಿ : ರಾಚಯ್ಯ ಸ್ವಾಮಿ