ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಆವಾಸ್ ಯೋಜನೆ(ಗ್ರಾಮೀಣ) ಅಡಿಯಲ್ಲಿ ಔರಾದ(ಬಿ) ಹಾಗೂ ಕಮಲನಗರ ತಾಲ್ಲೂಕುಗಳು ಸೇರಿ ಔರಾದ(ಬಿ) ವಿಧಾನಸಭಾ ಕ್ಷೇತ್ರಕ್ಕೆ 11217 ಮನೆಗಳು ಬಂದಿವೆ ಎಂದು ಮಾಜಿ ಸಚಿವರು ಹಾಗೂ ಶಾಸಕರಾದ ಪ್ರಭು.ಬಿ ಚವ್ಹಾಣ ಅವರು ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಔರಾದ(ಬಿ) ಹಾಗೂ ಕಮಲನಗರ ತಾಲ್ಲೂಕುಗಳಲ್ಲಿ ಹೆಚ್ಚು ವಸತಿ ರಹಿತ ಜನರಿದ್ದಾರೆ. ಎಲ್ಲರಿಗೂ ಪಕ್ಕಾ ಮನೆಗಳಿರಬೇಕೆಂಬ ಉದ್ದೇಶದೊಂದಿಗೆ ಕ್ಷೇತ್ರಕ್ಕೆ ಹೆಚ್ಚು ಮನೆಗಳನ್ನು ನೀಡುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದೆ. ಅದರಂತೆ ಮನೆಗಳ ಗುರಿಯನ್ನು ಹೆಚ್ಚಿಸಲಾಗಿದೆ. ಔರಾದ(ಬಿ) ತಾಲ್ಲೂಕಿಗೆ 6776 ಹಾಗೂ ಕಮಲನಗರ ತಾಲ್ಲೂಕಿಗೆ 4441 ಮನೆಗಳು ಸೇರಿ ಒಟ್ಟು 11217 ಮನೆಗಳನ್ನು ನೀಡಿದ್ದರಿಂದ ಪ್ರಧಾನಿ ನರೇಂದ್ರ ಮೋದಿಯವರಿಗೆ ಕ್ಷೇತ್ರದ ಮಹಾಜನತೆಯ ಪರವಾಗಿ ಧನ್ಯವಾದಗಳನ್ನು ಸಲ್ಲಿಸಿದ್ದಾರೆ.
ಈ ಯೋಜನೆಯಡಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ 1.75 ಲಕ್ಷ ಹಾಗೂ ಇತರೆ ಫಲಾನುಭವಿಗಳಿಗೆ 1.20 ಲಕ್ಷ ಸಹಾಯಧನ ನೀಡಲಾಗುತ್ತದೆ. ಒಟ್ಟು 3 ಕಂತುಗಳಲ್ಲಿ ಹಣ ಬಿಡುಗಡೆಯಾಗುತ್ತದೆ. ಮನೆ ಮಂಜೂರಾದ ನಂತರ ಜಿಪಿಎಸ್ ಕಳುಹಿಸಿದ ಬಳಿಕ ಕೂಡಲೇ ಮೊದಲ ಕಂತಿನ ಹಣ ಬಿಡುಗಡೆಯಾಗುತ್ತದೆ. ಮನೆ ನಿರ್ಮಾಣದ ಹಂತಗಳನ್ನು ಆಧರಿಸಿ ನಂತರದ ಕಂತುಗಳನ್ನು ಬಿಡುಗಡೆ ಮಾಡಲಾಗುತ್ತದೆ.
ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಕ್ಷೇತ್ರದೆಲ್ಲೆಡೆ ಗ್ರಾಮ ಸಂಚಾರ ನಡೆಸಿದ್ದೇನೆ. ಈ ವೇಳೆ ಗ್ರಾಮಗಳಲ್ಲಿ ವಸತಿ ಯೋಜನೆಗಳ ಬಗ್ಗೆ ಜನರಿಂದ ಸಾಕಷ್ಟು ದೂರುಗಳು ಬಂದಿವೆ. ಹಣಕ್ಕಾಗಿ ಬೇಡಿಕೆ ಸಲ್ಲಿಸುವುದು, ಅನರ್ಹರಿಗೆ ಮನೆ ಮಂಜೂರು ಮಾಡುವುದು ಸೇರಿದಂತೆ ಸಾಕಷ್ಟು ಲೋಪಗಳಾಗಿರುವ ಬಗ್ಗೆ ಜನತೆ ತಿಳಿಸಿದ್ದಾರೆ. ಪ್ರತಿ ವರ್ಷ ಮನೆಗಳನ್ನು ಕೊಡುತ್ತಿದ್ದೀರಿ. ಆದರೆ 15-20 ವರ್ಷಗಳಿಂದ ಗುಡಿಸಲಲ್ಲೇ ವಾಸಿಸುತ್ತಿದ್ದೇವೆ ಇನ್ನೂ ಮನೆ ಸಿಕ್ಕಿಲ್ಲ. ಸೌಲಭ್ಯ ಪಡೆದವರಿಗೆ ಪುನಃ ಮನೆ ನೀಡಲಾಗಿದೆ ಎಂದು ಕೆಲವು ಮಹಿಳೆಯರು ಸಮಸ್ಯೆ ಹೇಳಿಕೊಂಡಿದ್ದಾರೆ. ಈ ಯೋಜನೆಗಾಗಿ ದಲ್ಲಾಳಿಗಳು ಹುಟ್ಟಿಕೊಂಡಿದ್ದು ಒಂದು ಮನೆಗೆ 30 ರಿಂದ 40 ಸಾವಿರಕ್ಕೆ ಬೇಡಿಕೆ ಇಡಲಾಗುತ್ತಿದೆ ಎನ್ನುವ ಗಂಭೀರ ಸ್ವರೂಪದ ಆರೋಪ ಗ್ರಾಮ ಸಂಚಾರದ ಸಂದರ್ಭದಲ್ಲಿ ಕೇಳಿಬಂದಿದೆ. ಇಂಥವುಗಳು ಮರುಕಳಿಸದಂತೆ ನೋಡಿಕೊಳ್ಳಬೇಕೆಂದು ಎಚ್ಚರಿಸಿದ್ದಾರೆ.
ಗ್ರಾಮೀಣ ಭಾಗದಲ್ಲಿ ವಾಸಿಸುವ ಸಾಕಷ್ಟು ಬಡವರು ಸ್ವಂತ ಮನೆಯಿಲ್ಲದೇ ನಾನಾ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಾರೆ. ಅಂಥವರಿಗೆ ಪಕ್ಕಾ ಮನೆಗಳನ್ನು ಒದಗಿಸಿ ನೆಮ್ಮದಿಯ ಜೀವನ ನಡೆಸಲು ಅವಕಾಶ ಮಾಡಿಕೊಡಬೇಕೆಂಬುದು ಪ್ರಧಾನಿ ನರೇಂದ್ರ ಮೋದಿಯವರ ಕನಸಾಗಿದೆ. ಅದರಂತೆ ಪ್ರಧಾನ ಮಂತ್ರಿ ಆವಾಸ್ ಯೋಜನೆಯನ್ನು ರಾಜ್ಯ ಸರ್ಕಾರದ ಸಹಯೋಗದೊಂದಿಗೆ ಅನುಷ್ಠಾನಗೊಳಿಸಲಾಗುತ್ತಿದೆ.
ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿಗಳು ಗ್ರಾಮಗಳಲ್ಲಿ ಸಂಚರಿಸಿ ಗುಡಿಸಲಿನಲ್ಲಿ ವಾಸಿಸುತ್ತಿರುವ ಮತ್ತು ಒಮ್ಮೆಯೂ ಯೋಜನೆಯ ಸೌಲಭ್ಯ ಪಡೆಯದ ಬಡವರಿಗೆ ಆದ್ಯತೆ ನೀಡಬೇಕು. ಮನೆಗಳು ಅರ್ಹ ಫಲಾನುಭವಿಗಳಿಗೆ ತಲುಪಿಸಬೇಕು. ಈ ಬಗ್ಗೆ ತಾಲ್ಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳು ಮುತುವರ್ಜಿ ವಹಿಸಬೇಕು. ಎಲ್ಲಿಯೂ ಲೋಪಗಳು ಜರುಗದಂತೆ ನೋಡಿಕೊಳ್ಳಬೇಕೆಂದು ಸೂಚಿಸಿದ್ದು, ಎಲ್ಲಿಯಾದರೂ ಅವ್ಯವಹಾರಗಳು ನಡೆಯುವುದು ಕಂಡುಬಂದಲ್ಲಿ ಯಾವುದೇ ಕಾರಣಕ್ಕೂ ಸುಮ್ಮನಿರುವುದಿಲ್ಲ ಎಂದು ಎಚ್ಚರಿಸಿದ್ದಾರೆ.
ಸಾರ್ವಜನಿಕರು ಕೂಡ ಜಾಗೃತಿ ವಹಿಸಬೇಕು. ವಸತಿ ಯೋಜನೆಗೆ ಯಾರಿಗೂ ಹಣ ಕೊಡುವ ಅವಶ್ಯಕತೆಯಿಲ್ಲ. ಎಲ್ಲಿಯಾದರೂ ಹಣಕ್ಕೆ ಬೇಡಿಕೆಯಿಡುವುದು ಕಂಡುಬಂದಲ್ಲಿ ನೇರವಾಗಿ ನನ್ನ ಗಮನಕ್ಕೆ ತರಬೇಕು. ಯೋಜನೆ ಸಮರ್ಪಕವಾಗಿ ಜಾರಿಗೊಳ್ಳುವಂತೆ ನೋಡಿಕೊಳ್ಳಬೇಕೆಂದು ಶಾಸಕರು ಕೋರಿದ್ದಾರೆ.
ವರದಿ ರಾಚಯ್ಯ ಸ್ವಾಮಿ