ಔರಾದ್ : ಕಳೆದ ಎರಡು ವರ್ಷದಿಂದ ಕಲಬುರಗಿ ವಿಶ್ವವಿದ್ಯಾಲಯದಿಂದ ಅಂಕಪಟ್ಟಿ ಬರದೇ ಭವಿಷ್ಯ ಅತಂತ್ರವಾಗಿದೆ ಎಂದು ಆರೋಪಿಸಿ ಪಟ್ಟಣದ ಸರಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದ ಎದುರು ಎಬಿವಿಪಿ ಕಾರ್ಯಕರ್ತರು, ವಿದ್ಯಾರ್ಥಿಗಳು ಶುಕ್ರವಾರ ಪ್ರತಿಭಟನೆ ನಡೆಸಿದರು. ಅಂಕ ಪಟ್ಟಿ ವಿಳಂಬ ಕುರಿತು ಗುಲಬರ್ಗಾ ವಿವಿ ಪರೀಕ್ಷಾ ವಿಭಾಗವನ್ನು ಸಂಪರ್ಕಿಸಿದರೆ ನಿಮ್ಮ ಕಾಲೇಜಿನವರು ಅಂಕಪಟ್ಟಿ ಶುಲ್ಕ ತುಂಬದ ಕಾರಣ ಸಮಸ್ಯೆಯಾಗಿದೆ ಎಂದು ಹೇಳುತ್ತಿದ್ದಾರೆ. ಈ ವಿಷಯ ಪ್ರಾಂಶುಪಾಲರನ್ನು ಕೇಳಿದರೆ ನಾನು ಹೊಸಬ ನನಗೇನು ಗೊತ್ತಿಲ್ಲ ಎಂದು ಹೇಳುತ್ತಿದ್ದಾರೆ. ಇವರೆಲ್ಲ ಸೇರಿ ವಿದ್ಯಾರ್ಥಿಗಳ ಭವಿಷ್ಯದ ಜತೆ ಚಲ್ಲಾಟ ಆಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
2023-24ನೇ ಸಾಲಿನಲ್ಲಿ ಬಿಎ, ಬಿಎಸ್ಸಿ 5ನೇ ಹಾಗೂ 6ನೇ ಸೆಮಿಸ್ಟರ್ ಪರಿಕ್ಷೆ ಬರೆದ ವಿದ್ಯಾರ್ಥಿಗಳ ಅಂಕಪಟ್ಟಿ ಇಂದಿಗೂ ಬಂದಿಲ್ಲ. ಕೇಳಿದರೆ ಕಾಲೇಜಿನವರು ವಿಶ್ವವಿದ್ಯಾಲಯ ಮೇಲೆ, ವಿಶ್ವವಿದ್ಯಾಲಯದವರು ಕಾಲೇಜಿನ ಮೇಲೆ ತಪ್ಪು ಹೊರಿಸಿ ಜಾರಿಕೊಳ್ಳುತ್ತಿದ್ದಾರೆ. ಇದರಿಂದ ಪರೀಕ್ಷೆ ಬರೆದು ಮುಂದಿನ ಪ್ರವೇಶಕ್ಕಾಗಿ ಕಾದು ಕುಳಿತ 400-450ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತಿದೆ ಎಂದು ದೂರಿದರು.
ಈ ಕುರಿತು ಪ್ರಾಂಶುಪಾಲ ಅಂಬಿಕಾದೇವಿ ಕೊತಮೀರೆ ಅವರಿಗೆ ಮನವಿಪತ್ರ ಸಲ್ಲಿಸಿದರು. ಎಬಿವಿಪಿ ಜಿಲ್ಲಾ ಸಂಚಾಲಕ ಶಶಿಕಾಂತ ರ್ಯಾಕಲೆ, ಸಂಗಮೇಶ ದ್ಯಾಡೆ, ಶಿವಶಂಕರ ಸ್ವಾಮಿ, ಸುರೇಶ ಮರ್ತುಳೆ, ದೇವಾನಂದ ಸೂರ್ಯವಂಶಿ, ಕಾಂತು, ಅನಿಲ ಮೇತ್ರೆ ಸೇರಿದಂತೆ ಕಾಲೇಜಿನ ವಿದ್ಯಾರ್ಥಿಗಳು ಪಾಲ್ಗೊಂಡರು.
ವರದಿ : ರಾಚಯ್ಯ ಸ್ವಾಮಿ