ಶ್ರೀ ವೀರಭದ್ರೇಶ್ವರ ದೇವಸ್ಥಾನದ ಆಸ್ತಿ ಸಂಪೂರ್ಣ ಅಳತೆ ಮಾಡುವಂತೆ ದೇವಸ್ಥಾನ ಕಮಿಟಿ ಅಧ್ಯಕ್ಷ ವೀರಣ್ಣ ಪಾಟೀಲ್ ಆಗ್ರಹ

ಹುಮನಾಬಾದ : ಮುಜರಾಯಿ ಇಲಾಖೆಗೆ ಒಳಪಡುವ ಹುಮನಾಬಾದ ಪಟ್ಟಣದ ಶ್ರೀ ವೀರಭದ್ರೇಶ್ವರ ದೇವಸ್ಥಾನದ ಆಸ್ತಿಯ ಅಳತೆ ಮಾಡುವಂತೆ ಬೀದರ ಜಿಲ್ಲಾಧಿಕಾರಿಗಳಾದ ಶಿಲ್ಪಾ ಶರ್ಮಾ ಅವರ ಆದೇಶ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಈಶ್ವರ ಖಂಡ್ರೆ ಅಧ್ಯಕ್ಷತೆಯಲ್ಲಿ ನಡೆದ ಕೆ.ಡಿ.ಪಿ ಸಭೆಯಲ್ಲಿಯು ಈ ವಿಷಯ ಪ್ರಸ್ತಾಪವಾಗಿ ಸುಮಾರು 6 ತಿಂಗಳು ಕಳೆಯುತ್ತಿದ್ದರು ಸಹ ದೇವಸ್ಥಾನದ ಆಸ್ತಿ ಅಳತೆ ಪೂರ್ಣಗೊಳ್ಳದೆ ನೆನಗುದಿಗೆ ಬಿದ್ದಿರುವುದು ನೋಡಿದರೆ ಜಿಲ್ಲಾಧಿಕಾರಿಗಳ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಆದೇಶಕ್ಕೆ ಬೆಲೆ ಇಲ್ಲವೇ ಎನ್ನುವ ಪ್ರಶ್ನೆ ಭಕ್ತರಿಗೆ ಕಾಡುತ್ತಿದೆ.

2024 ಆಗಸ್ಟ್ 13ರಂದು ದೇವಸ್ಥಾನದ ಸಮಿತಿಯಿಂದ ಹುಮನಾಬಾದ ವ್ಯಾಪ್ತಿಯಲ್ಲಿನ ಮುಜರಾಯಿ ಇಲಾಖೆಗೆ ಒಳಪಡುವ ಹುಮನಾಬಾದ ಪಟ್ಟಣದ ಶ್ರೀ ವೀರಭದ್ರೇಶ್ವರ ದೇವಸ್ಥಾನದ (ಗ್ರಾಮ ಠಾಣಾದಲ್ಲಿರುವ) ಗಡಿ ಗುರುತು ಮಾಡಲು ಭೂಮಾಪಕರು ಹಾಗೂ ಸಿಬ್ಬಂದಿಗಳನ್ನು ನಿಯೋಜಿಸಿ ಜಂಟಿಯಾಗಿ ಗಡಿ ಗುರುತಿಸಿಕೊಡುವಂತೆ ಕೋರಲಾಗಿತ್ತು.

ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳಾದ ಶಿಲ್ಪಾ ಶರ್ಮಾ ಅವರು 2024 ನವೆಂಬರ 28ರಂದು ಅಧಿಕೃತ ಜ್ಞಾಪನಾ ಪತ್ರದ ಮೂಲಕ ದೇವಸ್ಥಾನದ ಗಡಿ ಗುರುತು ಮಾಡಲು ಜಂಟಿ ಅಧಿಕಾರಿಗಳ ತಂಡ ರಚಿಸಿದ್ದು, ಅಧ್ಯಕ್ಷರಾಗಿ ಬಸವಕಲ್ಯಾಣ ಸಹಾಯಕ ಆಯುಕ್ತರು, ಸದಸ್ಯ ಕಾರ್ಯದರ್ಶಿಯಾಗಿ ಉಪ ನಿರ್ದೇಶಕರು ಭೂದಾಖಲೆಗಳ ಇಲಾಖೆ ಬೀದರ, ಸದಸ್ಯರಾಗಿ ಯೋಜನಾ ನಿರ್ದೇಶಕರು ಜಿಲ್ಲಾ ನಗರಾಭಿವೃದ್ಧಿ ಕೋಶ ಬೀದರ, ತಹಶೀಲ್ದಾರ್ ಹುಮನಾಬಾದ, ಸಹಾಯಕ ನಿರ್ದೇಶಕರು ಭೂ ದಾಖಲೆಗಳ ಇಲಾಖೆ ಹುಮನಾಬಾದ, ಮುಖ್ಯಾಧಿಕಾರಿ ಪುರಸಭೆ ಹುಮನಾಬಾದ ಅವರನ್ನು ಜಂಟಿ ಸಮಿತಿಯ ಸದಸ್ಯರಾಗಿ ಮಾಡಿ, ಅಧಿಕಾರಿಗಳನ್ನು ಜಂಟಿಯಾಗಿ ಗಡಿ ಗುರುತು ಮಾಡುವ ಕುರಿತಂತೆ ಸ್ಥಳ ತನಿಖೆ ಮಾಡಿ ಅಳತೆ ಕಾರ್ಯನಿರ್ವಹಿಸಿ ಸಂಪೂರ್ಣ ದಾಖಲೆಯೊಂದಿಗೆ ವರದಿಯನ್ನು 7 ದಿವಸದೊಳಗಾಗಿ ಸಲ್ಲಿಸುವಂತೆ ಆದೇಶಿಸಲಾಗಿತ್ತು.

ಇದಲ್ಲದೆ ಶ್ರೀ ವೀರಭದ್ರೇಶರ ದೇವಸ್ಥಾನದ ಆಸ್ತಿ ಅಳತೆ ಹಾಗೂ ದೇವಸ್ಥಾನದ ಎದುರಿಗೆ ಕಂಪೌಂಡ ವಾಲ್ ನಿರ್ಮಿಸುವ ಕುರಿತು ಪುರಸಭೆ ಸಾಮಾನ್ಯ ಸಭೆಯಲ್ಲಿ ಚರ್ಚೆ ಕೂಡ ನಡೆದಿತ್ತು. ಪುರಸಭೆ ಅಧ್ಯಕ್ಷರು, ಈ ಉಪಾಧ್ಯಕ್ಷರು ಹಾಗೂ ವಿಧಾನ ಪರಿಷತ್ ಸದಸ್ಯರಾದ ಭೀಮರಾವ ಪಾಟೀಲ್ ರವರು ಸೇರಿದಂತೆ ಸದಸ್ಯರು ದೇವಸ್ಥಾನದ ಎದುರಿನ ಆಸ್ತಿಗೆ ಸುತ್ತುಗೊಡೆ ನಿರ್ಮಾಣಕ್ಕೆ ಪರವಾನಗಿ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಬೀದರನಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಈಶ್ವರ ಖಂಡ್ರೆ ರವರ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾ ಕೆ.ಡಿ.ಪಿ ಸಭೆಯಲ್ಲಿಯು ವಿಧಾನ ಪರಿಷತ್ ಸದಸ್ಯರಾದ ಡಾ.ಚಂದ್ರಶೇಖರ ಪಾಟೀಲ್, ಭೀಮರಾವ ಬಿ.ಪಾಟೀಲ್‌ ಈ ವಿಷಯದ ಬಗ್ಗೆ ಪ್ರಸ್ತಾಪ ಮಾಡಿ ಚರ್ಚಿಸಿ ಒತ್ತಾಯಿಸಿದ್ದಾರೆ. ಆದರೂ ಸಹ ನೇಪಕ್ಕೆ ಮಾತ್ರ ಸರ್ವೆ ಮಾಡಿ ಪೂರ್ಣ ಪ್ರಮಾಣದ ಸರ್ವೆ ಮಾಡದೆ ಹಾಗೆ ಕೈಬಿಟ್ಟಿರುತ್ತಾರೆ.

ಇದನ್ನು ನೋಡಿದರೆ ಜಿಲ್ಲಾಧಿಕಾರಿ ಆದೇಶಕ್ಕೂ ಹಾಗೂ ಜಿಲ್ಲಾ ಕೆ.ಡಿ.ಪಿ ಸಭೆಗೂ ಅಧಿಕಾರಿಗಳು ಕಿಮ್ಮತು ಕೊಡುತ್ತಿಲ್ಲ ಆದಕಾರಣ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಧಿಕಾರಿಗಳು ತಕ್ಷಣವೇ ಈ ಬಗ್ಗೆ ಗಮನ ಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಇಲ್ಲದಿದ್ದಲ್ಲಿ ಭಕ್ತರ ಸಮೂಹ ಉಗ್ರ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ ಎಂದು ಶ್ರೀ ವೀರಭದ್ರೇಶ್ವರ ದೇವಸ್ಥಾನ ಕಮಿಟಿ ಅಧ್ಯಕ್ಷ ವೀರಣ್ಣ ಎಚ್ ಪಾಟೀಲ್ ಎಚ್ಚರಿಕೆ ನೀಡಿದ್ದಾರೆ.

error: Content is protected !!