ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಕೊಳತ್ತಮಜಲಿನಲ್ಲಿ ಕೋಮು ದ್ವೇಷಕ್ಕೆ ಬಲಿಯಾದ ಅಮಾಯಕ ಮುಸ್ಲಿಂ ಯುವಕ ರಹೀಂ ಕುಟುಂಬಕ್ಕೆ ಸಚಿವ ಝಮೀರ್ ಅಹ್ಮದ್ ಖಾನ್ ವೈಯಕ್ತಿಕವಾಗಿ 50 ಲಕ್ಷ ರೂಪಾಯಿ ಸಹಾಯಧನ ನೀಡಿದ್ದಾರೆ.
ಬೆಂಗಳೂರಿನಲ್ಲಿರುವ ಸ್ಪೀಕರ್ ಯು.ಟಿ ಖಾದರ್ ಅವರ ನಿವಾಸದಲ್ಲಿ ರಹೀಂ ಕುಟುಂಬಕ್ಕೆ ಸಹಾಯಧನ ಹಸ್ತಾಂತರಿಸಲಾಯಿತು. 50 ಲಕ್ಷ ರೂಪಾಯಿ ಹಣದಲ್ಲಿ ರಹೀಂ ಅವರ ಪತ್ನಿ, ಮಕ್ಕಳು ಮತ್ತು ತಂದೆ ತಾಯಿಗೆ ಹಂಚಿಕೆ ಮಾಡಿ ವಿತರಿಸಲಾಗಿದೆ ಎಂದು ತಿಳಿದುಬಂದಿದೆ.
ರಹೀಂ ಅವರ ಮಗಳಿಗೆ 25 ಲಕ್ಷ, ಮಗನಿಗೆ 15 ಲಕ್ಷ, ಪತ್ನಿಗೆ 5 ಲಕ್ಷ ಹಾಗೂ ರಹೀಂ ತಂದೆ ತಾಯಿಗೆ 5 ಲಕ್ಷ ನೀಡಿರುವುದಾಗಿ ತಿಳಿದು ಬಂದಿದೆ.
ಇತ್ತೀಚೆಗೆ ರಹೀಂ ಅವರ ಮನೆಗೆ ಭೇಟಿ ನೀಡಿದ್ದ ಕರ್ನಾಟಕ ವಕ್ಫ್ ಕೌನ್ಸಿಲ್ ಉಪಾಧ್ಯಕ್ಷ ಮೌಲಾನಾ ಶಾಫಿ ಸಅದಿ ಅವರು, ಸಚಿವ ಝಮೀರ್ ಅಹ್ಮದ್ ಅವರು ವೈಯಕ್ತಿಕವಾಗಿ 50 ಲಕ್ಷ ರೂ ಸಹಾಯಧನ ನೀಡಲಿದ್ದಾರೆಂದು ಕುಟುಂಬಕ್ಕೆ ತಿಳಿಸಿದ್ದರು. ಅದರಂತೆ ಇಂದು ಬೆಂಗಳೂರಿನಲ್ಲಿ ಸ್ಪೀಕರ್ ಯು.ಟಿ. ಖಾದರ್ ಅವರ ಸರ್ಕಾರಿ ನಿವಾಸದಲ್ಲಿ ಮಂಗಳೂರು ಖಾಝಿ ತ್ವಾಕ ಮುಸ್ಲಿಯಾರ್, ಉಡುಪಿ ಸಂಯುಕ್ತ ಖಾಝಿ ಮಾಣಿ ಉಸ್ತಾದ್ ಅವರನ್ನೊಳಗೊಂಡ ನಿಯೋಗದ ಸಮ್ಮುಖದಲ್ಲಿ ಸಚಿವ ಝಮೀರ್ ಖಾನ್ ಅವರು 50 ಲಕ್ಷ ರೂ. ಸಹಾಯಧನವನ್ನು ಹಸ್ತಾಂತರಿಸಿದರು. ರಹೀಂ ಕುಟುಂಬಕ್ಕೆ ಕೊಟ್ಟ ಮಾತನ್ನು ಉಳಿಸಿಕೊಂಡ ಸಚಿವ ಝಮೀರ್ ಅಹಮದ್ ಖಾನ್ ಅವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.
ರಹೀಂ ಹತ್ಯೆ ವೇಳೆ ದುಷ್ಕರ್ಮಿಗಳ ದಾಳಿಯಿಂದ ಗಂಭೀರ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ಖಲಂದರ್ ಶಾಫಿ ಅವರಿಗೂ ಸಚಿವ ಝಮೀರ್ ಖಾನ್ 5 ಲಕ್ಷ ರೂ. ಸಹಾಯಧನ ನೀಡಿದ್ದಾರೆ ಎಂದು ತಿಳಿದುಬಂದಿದೆ.