ಚಿತ್ತಾಪುರ; ರಾಜ್ಯಾದ್ಯಂತ ನರೇಗಾ ಯೋಜನೆಯಡಿ ಹೊರಸಂಪನ್ಮೂಲದ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ 6 ತಿಂಗಳ ವೇತನ ಪಾವತಿ ಮಾಡಬೇಕು ಹಾಗೂ ಬಿಎಫ್ಟಿಗಳ ರಿನಿವಲ್ ಪದ್ಧತಿ ರದ್ದುಗೊಳಿಸಬೇಕೆಂಬ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ಮಹಾತ್ಮಾಗಾಂಧಿ ನರೇಗಾ ನೌಕರರ ಕ್ಷೇಮಾಭಿವೃದ್ಧಿ ಸಂಘ ತಾಲೂಕು ಶಾಖೆಯ ನೇತೃತ್ವದಲ್ಲಿ ಪಟ್ಟಣದ ತಾಲೂಕು ಪಂಚಾಯತ್ ಕಚೇರಿ ಎದುರುಗಡೆ ಪ್ರತಿಭಟನೆ ನಡೆಯಿತು.
ಈ ವೇಳೆ ಎಫ್‌ಎ ರವಿ ಗುತ್ತೇದಾರ ಸೂಲಹಳ್ಳಿ ಮಾತನಾಡಿ, ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ನಾವು ಜಿಲ್ಲಾ ಪಂಚಾಯತ್ ಮತ್ತು ತಾಲೂಕ ಪಂಚಾಯತ್ ಮಟ್ಟದಲ್ಲಿ ವಿವಿಧ ಸ್ಥರಗಳಲ್ಲಿ ಕಳೆದ ಹಲವಾರು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಾ, ಯೋಜನೆಯ ಸಮರ್ಪಕ ಅನುಷ್ಠಾನದಲ್ಲಿ ಭಾಗಿಯಾಗಿದ್ದೇವೆ.
ಕರ್ನಾಟಕ ರಾಜ್ಯದಾದ್ಯಂತ 3632 ನೌಕರರು ನರೇಗಾ ಯೋಜನೆಯಡಿ ವಿವಿಧ ಹುದ್ದೇಗಳಲ್ಲಿ ಹೊರಸಂಪನ್ಮೂಲದ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿದ್ದೇವೆ.
ಡಿ.ಇ.ಓ. ಅನುಷ್ಠಾನ ಇಲಾಖೆಯಡಿ ಡಿ.ಇ.ಓ.ಕಂ.ಕೋ ಆರ್ಡಿನೇಟರ್, ಜಿಕೆಎಂ, ಎಫ್‌ಎಂ ಮತ್ತು ಬಿಎಫ್ಟಿ ಹುದ್ದೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನಮಗೆ ಕಳೆದ ಜನವರಿ-2025 ಮಾಹೆಯಿಂದ ಇಲ್ಲಿಯವರೆಗೆ ವೇತನ ಪಾವತಿಯಾಗಿರುವುದಿಲ್ಲ. ಇದರಿಂದ ಎಲ್ಲಾ ನೌಕರರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುತ್ತಾರೆ ಎಂದು ಹೇಳಿದರು.
ಕಳೆದ 06 ತಿಂಗಳುಗಳಿಂದ ವೇತನ ಪಾವತಿ ಆಗದೇ ಇರುವುದರಿಂದ ಕುಟುಂಬ ನಿರ್ವಹಣೆ, ದಿನಸಿ ಖರೀದಿ, ಮಕ್ಕಳ ಶಾಲಾ ಪ್ರವೇಶಾತಿ, ಸಕಾಲದಲ್ಲಿ ವೇತನ ಪಾವತಿಯಾಗದೇ ಇರುವುದರಿಂದ ಸ್ನೇಹಿತರಲ್ಲಿ, ಸಂಬಂಧಿಕರಲ್ಲಿ ಸ್ವಾಭಿಮಾನ ಅಡವಿಟ್ಟು ಕೈಚಾಚುವ ಪರಿಸ್ಥಿತಿ ನಿರ್ಮಾಣವಾಗಿದೆ. ಖಾಸಗಿ ಲೇವಾದೇವಿದಾರರಿಂದ ಅನಿವಾರ್ಯವಾಗಿ ಸಾಲ ಮಾಡಿ ಕುಟುಂಬ ನಿರ್ವಹಿಸುವ ದಿನನಿತ್ಯದ ಆಗು-ಹೋಗುಗಳನ್ನು ನೋಡಿಕೊಳ್ಳುವ ಪರಿಸ್ಥಿತಿ ಉಂಟಾಗಿದೆ. ಈ ಪರಿಸ್ಥಿತಿಯು ನಮ್ಮ ನೌಕರ ವರ್ಗದವರನ್ನು ತೀವ್ರ ಮುಜುಗರಕ್ಕೆ ತಳ್ಳುತ್ತಿದೆ. ಪ್ರತಿಯೊಬ್ಬ ನರೇಗಾ ನೌಕರರು ಒಂದಲ್ಲಾ ಒಂದು ರೀತಿಯಲ್ಲಿ ಸಂಕಷ್ಟಕ್ಕೆ ಸಿಲುಕಿ ಬಳಲುತ್ತಿದ್ದಾರೆ. ಬರುವ ತಿಂಗಳಲ್ಲಿ ವೇತನ ಪಾವತಿಯಾಗದೇ ಇದ್ದಲ್ಲಿ ನೌಕರರ ಆರ್ಥಿಕ ಪರಿಸ್ಥಿತಿ, ಮನೋಬಲ, ಆತ್ಮಸ್ಥೆರ್ಯ ಮತ್ತಷ್ಟು ಕುಸಿಯಲಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಬಾಕಿ ವೇತನ ಪಾವತಿ ವಿಚಾರವಾಗಿ ಮೇಲಾಧಿಕಾರಿಗಳು ಕೇಂದ್ರ ಸರ್ಕಾರದಿಂದ ಅನುದಾನ ಬಂದಿಲ್ಲ ಎಂದು ಇಲ್ಲಿಯವರೆಗೂ ಮಾಹಿತಿ ನೀಡುತ್ತಿದ್ದರು. ಪ್ರಸ್ತುತ ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಅನುದಾನ ಬಿಡುಗಡೆಗೊಂಡಿದ್ದು, ರಾಜ್ಯದಿಂದ ಜೀ ಕೇಂದ್ರಕ್ಕೆ ಅನುದಾನ ಬಿಡುಗಡೆಯಾಗಿದೆ ಎಂಬ ಮಾಹಿತಿ ನೀಡಿರುತ್ತಾರೆ. ಆದರೆ ಹೊಸ ತಂತ್ರಾಂಶದಲ್ಲಿ ವೇತನ ಪಾವತಿ ಮಾಡಲು ತಾಂತ್ರಿಕ ಸಮಸ್ಯೆ ಬಗೆಹರೆಯದೇ ಇರುವುದರಿಂದ ವೇತನ ಪಾವತಿಯು ವಿಳಂಬವಾಗುತ್ತಿದೆ. ಕೂಡಲೇ ನರೇಗಾ ನೌಕರರ ಬಾಕಿ ವೇತನವನ್ನು ಪಾವತಿ ಮಾಡಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಇನ್ನೂ ಎರಡು ದಿನಗಳಲ್ಲಿ ವೇತನ ಪಾವತಿಯಾಗದಿದ್ದರೆ ನಮ್ಮೆಲ್ಲ ಕೆಲಸ-ಕಾರ್ಯಗಳನ್ನು ನಿಲ್ಲಿಸಿ ವೇತನ ಪಾವತಿಯಾಗುವವರೆಗೂ ಅಸಹಕಾರ ಚಳುವಳಿ ಮಾಡಲಾಗುವುದು ಎಂದು ಎಚ್ಚರಿಸಿದರು.
ನರೇಗಾ ನೌಕರರಾದ ಗೋಪಾಲ ಚವ್ಹಾಣ, ವಿಶ್ವನಾಥ ಕಲಸಕರ್, ಶೇಖ್ ಅಶ್ಫಾಕ್, ವೀರೇಂದ್ರ ಬಿರಾದಾರ, ಶಿವರಾಜ್, ವಾಸೀಮ್, ಗಣೇಶ್, ಸಿದ್ದಣ್ಣ, ರೇವಣಸಿದ್ದ, ಮಲ್ಲಮ್ಮ, ಶ್ರೀದೇವಿ, ಸುಮಿತ್ರಾ, ಮೋಟಮ್ಮ, ಗಿಡ್ಡಮ್ಮ ಸೇರಿದಂತೆ ಇತರರು ಇದ್ದರು.