ಬೆಂಗಳೂರು : ನಲ್ಲಿ ಪುಡಿ ರೌಡಿಗಳ ಅಟ್ಟಹಾಸ ನಡುರಸ್ತೆಯಲ್ಲೇ ಯುವಕರ ಮಾರಾಮಾರಿ, ಮಾರಕಾಸ್ತ್ರ ಹಿಡಿದು ಗುಂಪುಗಳ ಮೇಲೆ ಹಲ್ಲೆ, ಆರ್.ಟಿ ನಗರದಲ್ಲಿ ನಡೆದಂತಹ ಘಟನೆ ಎಂಬ ಶಿರ್ಷಿಕೆಯಡಿಯಲ್ಲಿ ಭಿತ್ತರಿಸಲಾಗಿರುತ್ತದೆ. ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ಹಿರಿಯ ಪೊಲೀಸ್ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ, ಸ್ಥಳ ಪರಿಶೀಲನೆ ಮಾಡಿ, ಪೊಲೀಸ್ ಇನ್ಸ್ಪೆಕ್ಟರ್ ಆರ್.ಟಿ.ನಗರ ಪೊಲೀಸ್ ಠಾಣೆ ರವರಿಗೆ ಸೂಕ್ತ ಮಾರ್ಗದರ್ಶನ ಮಾಡಿದ್ದು, ಈ ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಈ ಪ್ರಕರಣದಲ್ಲಿ ತನಿಖೆ ಕೈಗೊಂಡ ಆರ್.ಟಿ.ನಗರ ಪೊಲೀಸರ ತನಿಖಾ ಕಾಲದಲ್ಲಿ ತಿಳಿದು ಬಂದ ಮಾಹಿತಿ ಏನೆಂದರೆ ದಿನಾಂಕ: 19-07-2025 ರಂದು ಆರ್.ಟಿ ನಗರದ 1ನೇ ಬ್ಲಾಕ್, 18ನೇ ಕ್ರಾಸ್ ರಸ್ತೆಯಲ್ಲಿ ರಾತ್ರಿ ಸುಮಾರು 9-30 ಗಂಟೆ ಸಮಯದಲ್ಲಿ ಹೈಸ್ಕೂಲ್ ಓದುತ್ತಿದ್ದ ಸುಮಾರು 10-15 ಜನ ಬಾಲಕರು ತನ್ನ ಸ್ನೇಹಿತನ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳಲು ಕೇಕ್ ಕತ್ತರಿಸುವಾಗ ಅವರಲ್ಲೊಬ್ಬ ತಲೆಗೆ ಮೊಟ್ಟೆ ಹೊಡೆದ ವಿಚಾರಕ್ಕೆ ಪರಸ್ಪರ ಗಲಾಟೆಯನ್ನು ಮಾಡಿಕೊಂಡಿರುತ್ತಾರೆ. ಎಲ್ಲರೂ ಶಾಲಾ ಬಾಲಕರಾಗಿದ್ದು, ಗಲಾಟೆಯಲ್ಲಿ ಯಾವುದೇ ರೀತಿಯ ಮಾರಕಾಸ್ತ್ರಗಳನ್ನು ಬಳಕೆ ಮಾಡಿರುವುದಿಲ್ಲ, ಯಾವುದೇ ಪುಡಿ ರೌಡಿಗಳ ಮಾರಾಮಾರಿಯಾಗಿರುವುದಿಲ್ಲವೆಂದು ತನಿಖೆಯಿಂದ ತಿಳಿದು ಬಂದಿರುತ್ತದೆ. ಈ ಘಟನೆಗೆ ಸಂಬಂಧಿಸಿದಂತೆ ಸದರಿಯವರುಗಳ ವಿರುದ್ಧ ಕಾನೂನು ಕ್ರಮ ಜರುಗಿಸಲಾಗಿದೆ.
ವರದಿ : ಮುಬಾರಕ್