ಚಿತ್ತಾಪುರ; ತಾಲೂಕಿನ ರಾಮತೀರ್ಥ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 79ನೇಯ ಸ್ವಾತಂತ್ರ್ಯ ದಿನೋತ್ಸವ ಅಂಗವಾಗಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು.
ನಂತರ ಚಲನಚಿತ್ರ ನಿರ್ದೇಶಕ ಅಯ್ಯಪ್ಪ ರಾಮತೀರ್ಥ ಅವರು ಮಾತನಾಡಿ, ಮಹಾತ್ಮ ಗಾಂಧೀಜಿ, ಸುಭಾಷ್ ಚಂದ್ರ ಭೋಸ್, ಸರ್ದಾರ್ ವಲ್ಲಭಬಾಯ್ ಪಟೇಲ್, ಭಗತ್ ಸಿಂಗ್ ಸೇರಿದಂತೆ ಸಾವಿರಾರು ಮಂದಿ ಮಹಾತ್ಮರ, ಲಕ್ಷಾಂತರ ಮಂದಿ ಹೋರಾಟಗಾರರ ತ್ಯಾಗ, ಬಲಿದಾನದ ಮುಖಾಂತರ ಸ್ವಾತಂತ್ರ್ಯ ದೊರಕಿದ್ದು, ಇದನ್ನು ನಾವೆಲ್ಲರೂ ಅರ್ಥ ಮಾಡಿಕೊಳ್ಳಬೇಕಿದೆ ಎಂದರು.
ವಿದ್ಯಾರ್ಥಿ ದೆಸೆಯಿಂದಲೇ ದೇಶಪ್ರೇಮ ಮೈಗೂಡಿಸಿಕೊಳ್ಳಬೇಕು. ದೇಶದ ಸಮಗ್ರ ಇತಿಹಾಸವನ್ನು ಅರಿಯಬೇಕು. ರಾಷ್ಟ್ರದ ಅಭಿವೃದ್ಧಿಗೆ ಪೂರಕವಾದ ನಿಮಗಿಷ್ಟವಾದ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡು, ಅದರಲ್ಲಿ ಉನ್ನತವಾದ ಸಾಧನೆಯನ್ನು ಮಾಡಿ ದೇಶದ ಕೀರ್ತಿಯನ್ನು ಬಾನೆತ್ತರಕ್ಕೆ ಹೆಚ್ಚಿಸುವ ಕಾರ್ಯ ಮಾಡಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ನೂರಾರು ವರ್ಷಗಳ ಕಾಲ ನಿರಂತರ ಹೋರಾಟದಿಂದ ಗಳಿಸಿದ ಸ್ವಾತಂತ್ರ್ಯವನ್ನು ಕೇವಲ ಒಂದು ದಿನ ಮಾತ್ರ ಆಚರಣೆ ಮಾಡಿ ಮನೆ ಸೇರಿಕೊಂಡರೆ ಸ್ವಾತಂತ್ರ್ಯ ಎಂಬ ಪದಕ್ಕೆ ಅವಮಾನ ಮಾಡಿದಂತೆ, ಮನೆಯೊಳಗೆ ವಾಸ ಮಾಡುವುದಿರಲಿ, ಬಾಯಿ ಬಿಟ್ಟು ಮಾತನಾಡುವುದಕ್ಕೂ ಹೆದರುವಂತ, ಊಟ ಮಾಡಲು ಬಟ್ಟೆ ತೊಡಲು ಹಿಂದು ಮುಂದು ನೋಡುವಂತಹ ಗುಲಾಮಗಿರಿಯಿಂದ ಇಂದು ನಮ್ಮ ಇಷ್ಟ ಬಂದ ರೀತಿಯಲ್ಲಿ ಬದುಕುವುದರ ಜತೆಗೆ ಸಂಪೂರ್ಣ ವಾಕ್ ಸ್ವಾತಂತ್ರ್ಯ ಪಡೆದು ಬದುಕುತ್ತಿದ್ದೇವೆ ಎಂದಾದರೆ ಅದರ ಹಿಂದಿರುವ ಹೋರಾಟದ ಕಹಿ ಸತ್ಯವನ್ನು ನಾವ್ಯಾರು ಮರೆಯಬಾರದು ಎಂದರು.
ಮುಖ್ಯಗುರು ಸುರೇಶ್ ಓಂಕಾರ್ ಮಾತನಾಡಿ, ನಮ್ಮ ದೇಶದ ಅನೇಕ ಮಹನೀಯರ ತ್ಯಾಗ ಮತ್ತು ಬಲಿದಾನಗಳ ಸಂಕೇತವೇ ನಮ್ಮ ಈ ಸ್ವಾತಂತ್ರ್ಯವಾಗಿದೆ. ಇಂದು ಈ ದೇಶದಲ್ಲಿರುವ ಅನೇಕ ಸಾಮಾಜಿಕ ಜ್ವಲಂತ ಸಮಸ್ಯೆಗಳನ್ನು ನಿವಾರಿಸಿ ದೇಶದ ಆಂತರಿಕ ಭದ್ರತೆಗೆ ದಕ್ಕೆ ಬರದ ಹಾಗೆ ನಾವು ಬದುಕಿ ಇನ್ನೊಬ್ಬರನ್ನು ಬದುಕಿಸುವ ಸ್ವತಂತ್ರವನ್ನು ಪ್ರತಿಯೊಬ್ಬರಿಗೂ ಸಿಗುವಂತೆ ಮಾಡಬೇಕು. ಹಾಗೂ ಇಂದಿನ ಮಕ್ಕಳೇ ಮುಂದಿನ ಭವ್ಯ ಭಾರತ ನಾಗರಿಕರು ಮಕ್ಕಳಲ್ಲಿ ಉತ್ತಮ ಹವ್ಯಾಸಗಳನ್ನು ಬೆಳಸಿ ಉತ್ತಮ ಶಿಕ್ಷಣದ ವಾತಾವರಣವನ್ನು ರೂಪಿಸಲು ಇಂದು ನಾವು ಪ್ರತಿಯೊಬ್ಬರೂ ಪ್ರಾಮಾಣಿಕವಾಗಿ ಶ್ರಮಿಸಬೇಕಾಗಿದೆ ಎಂದು ಹೇಳಿದರು.
ಅಯ್ಯಪ್ಪ ರಾಮತೀರ್ಥ ಅವರು ಕೂಡ ಇದೇ ಶಾಲೆಯಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ಮಾಡಿದ ಹಳೆಯ ವಿದ್ಯಾರ್ಥಿಯಾಗಿದ್ದರಿಂದ ಅವರು ಹೃದಯವಂತಿಕೆಯನ್ನು ಮೆರೆದು 25 ಸಾವಿರ ರೂ.ಯನ್ನು ಶಾಲೆಯ ಅಭಿವೃದ್ಧಿಗೆ ದೇಣಿಗೆ ನೀಡಿದ್ದು ನಮಗೆ ಸಂತೋಷವೆನಿಸಿದೆ ಎಂದು ಹೇಳಿದರು.
ಮುಖಂಡರಾದ ಶಂಕರ್ ವಾಲಿಕಾರ್, ಸಂಜು ರಾಠೋಡ, ವೈದ್ಯ ಸಂಜೀವ ರೆಡ್ಡಿ, ರೈತ ಮುಖಂಡರಾದ ಲಕ್ಷ್ಮಣರೆಡ್ಡಿ, ಶರಣು ಪೂಜಾರಿ, ನಿಂಗಪ್ಪ, ಗೂಳಿ ಪೂರ್ನ್, ಮಲ್ಲಿಕಾರ್ಜುನ್ ಮಾಸ್ಟರ್, ರಾಜು ಚವ್ಹಾಣ, ಸೇರಿದಂತೆ ಹಳೆಯ ವಿದ್ಯಾರ್ಥಿಗಳು, ಶಾಲಾ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಹಾಗೂ ಗ್ರಾಮದ ಹಿರಿಯ ಮುಖಂಡರು ಇದ್ದರು.
