ಹುಕ್ಕೇರಿ: ಹುಕ್ಕೇರಿ ತಾಲ್ಲೂಕು ವೃತ್ತಿ ನಿರತ ಛಾಯಾಗ್ರಾಹಕರ ಸಂಘದ ಆಶ್ರಯದಲ್ಲಿ 186ನೇ ವಿಶ್ವ ಛಾಯಾಗ್ರಹಣ ದಿನಾಚರಣೆ ಹಾಗೂ ಕಾರ್ಮಿಕ ಕಾರ್ಡ್ ವಿತರಣೆ ಸಮಾರಂಭವನ್ನು ರವದಿ ಫಾರ್ಮ್ ಹೌಸ್‌ನಲ್ಲಿ ಸಂಭ್ರಮದಿಂದ ಆಚರಿಸಲಾಯಿತು.
ಕಾರ್ಯಕ್ರಮವು ಸಸಿಗೆ ನೀರು ಹಾಕುವ ಮೂಲಕ ಪ್ರಾರಂಭಗೊಂಡಿದ್ದು, ಸಂಘದ ಅಧ್ಯಕ್ಷ ಅಪ್ಪು ಹುಕ್ಕೇರಿ ಅವರು ಅಧ್ಯಕ್ಷತೆ ವಹಿಸಿದರು. ಸಮಾರಂಭವನ್ನು ಕಾರ್ಮಿಕ ಇಲಾಖೆಯ ಅಧಿಕಾರಿಯಾದ ಮಲ್ಲಿಕಾರ್ಜುನ್ ಜೋಗುರ್ ಉದ್ಘಾಟಿಸಿ, “ಕಾರ್ಮಿಕ ಇಲಾಖೆಯಿಂದ ಸಿಗುವ ಎಲ್ಲಾ ಸೌಲಭ್ಯಗಳನ್ನು ಛಾಯಾಗ್ರಾಹಕರಿಗೆ ಒದಗಿಸಲು ನಾವು ಬದ್ಧರಾಗಿದ್ದೇವೆ,” ಎಂದು ಭರವಸೆ ನೀಡಿದರು.
ತರಬೇತಿದಾರ ಅಮೃತ್ ಚರಂತಿಮಠ ಮಾತನಾಡಿ, “ಇಂದಿನ ಟೆಕ್ನಾಲಜಿಯ ಯುಗದಲ್ಲಿ ಫೋಟೋಗ್ರಫಿ ಬಗ್ಗೆ ಸಮಗ್ರ ಜ್ಞಾನ ಹೊಂದುವುದು ಬಹಳ ಅವಶ್ಯಕ. ಆರೋಗ್ಯದ ಜೊತೆಗೇ ವಿದ್ಯೆಯನ್ನು ಹೆಚ್ಚಿಸಿಕೊಳ್ಳಿ. ಕ್ಯಾಮೆರಾ ಸೆಟ್ಟಿಂಗ್, ಆಲ್ಬಮ್ ಡಿಸೈನ್ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ಪರಿಣತಿ ಬೆಳೆಸಿಕೊಳ್ಳುವುದು ಪ್ರತಿ ಛಾಯಾಗ್ರಾಹಕರ ಜವಾಬ್ದಾರಿ,” ಎಂದು ಸಲಹೆ ನೀಡಿದರು.
ಕಾರ್ಯಕ್ರಮದ ವೇಳೆ ಹಲವಾರು ಸಾಧಕರಿಗೆ ಹಾಗೂ ಸಂಘದ ಬೆಳವಣಿಗೆಯಲ್ಲಿ ಬೆಂಬಲ ನೀಡಿದ ಛಾಯಾಗ್ರಾಹಕರಿಗೆ ಸನ್ಮಾನ ಮಾಡಲಾಯಿತು. ಇದೇ ಸಂದರ್ಭದಲ್ಲಿ ಹುಕ್ಕೇರಿ ತಾಲ್ಲೂಕಿನ ಛಾಯಾಗ್ರಾಹಕರಿಗೆ ಪ್ರಪ್ರಥಮ ಬಾರಿಗೆ ಕಾರ್ಮಿಕ ಕಾರ್ಡ್ ವಿತರಣೆ ನಡೆಯಿತು.
ಅಧ್ಯಕ್ಷ ಅಪ್ಪು ಹುಕ್ಕೇರಿ ಮಾತನಾಡಿ, “ಸಂಘದ ಬೆಳವಣಿಗೆಯಲ್ಲಿ ಪಾತ್ರವಹಿಸಿದ ಎಲ್ಲ ಛಾಯಾಗ್ರಾಹಕರಿಗೂ ಹೃತ್ಪೂರ್ವಕ ಅಭಿನಂದನೆಗಳು. ಇದೇ ರೀತಿ ನಿಮ್ಮ ಸಹಕಾರ ಮುಂದುವರಿಯಲಿ,” ಎಂದು ಕೃತಜ್ಞತೆ ಸಲ್ಲಿಸಿದರು.
ಕಾರ್ಯಕ್ರಮದ ಕೊನೆಯಲ್ಲಿ ಪ್ರಶಾಂತ ನಾಗನೂರಿ ವಂದನಾರ್ಪಣೆ ಸಲ್ಲಿಸಿದರು. ಈ ಸಂದರ್ಭದಲ್ಲಿ ತಾಲ್ಲೂಕಿನ ಎಲ್ಲಾ ವೃತ್ತಿ ಛಾಯಾಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು.