ಔರಾದ: ತಾಲ್ಲೂಕಿನ ಎಲ್ಲೆಡೆ ಸತತವಾಗಿ ಸುರಿಯುತ್ತಿರುವ ಧಾರಕಾರ ಮಳೆಯಿಂದ ಕಟಾವಿಗೆ ಬಂದಿರುವ ಸೋಯಾಬಿನ್ ಬೆಳೆ ಹೊಲದಲ್ಲಿಯೇ ಮೊಳಕೆಯೊಡೆಯುತ್ತಿವೆ.
ಪ್ರತಿದಿನ ಹಗಲು, ರಾತ್ರಿ ಕನಿಷ್ಠ ಎರಡು ಗಂಟೆಗೂ ಅಧಿಕ ಕಾಲ ಮಳೆ ಸುರಿಯುತ್ತಿದೆ. ಹೆಸರು, ಉದ್ದು ಬೆಳೆಯಲ್ಲಿ ನಷ್ಟವಾಗಿದ್ದರೂ ಸೋಯಾಬಿನ್ ಬೆಳೆಯಿಂದ ಸ್ವಲ್ಪವಾದರೂ ಆದಾಯ ಪಡೆಯುವ ನಿರೀಕ್ಷೆಯಲ್ಲಿದ್ದ ರೈತರನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡಿದಂತಾಗಿದೆ.
‘ಸೋಯಾಬಿನ್ ಬೆಳೆ ಬೆಳೆಯಲು ಖರ್ಚು ಮಾಡಿರುವ ಹಣವೂ ವಾಪಸ್ ಬರುವ ಲಕ್ಷಣ ಕಾಣಿಸುತ್ತಿಲ್ಲ. ಕಳೆದ ಬಾರಿ ಸೋಯಾಬಿನ್ ಬಿತ್ತಿದಾಗ, ಮಳೆ ಬರದೆ ಬೆಳೆ ಹಾಳಾಯಿತು. ಈ ಬಾರಿಯಾದರೂ ಉತ್ತಮ ಲಾಭ ಪಡೆಯಬಹುದೆಂಬ ಬಹುತೇಕ ರೈತರಿಗೆ ಇದ್ದ ಆಸೆ ನಿರಾಶೆಯಾಗಿದೆ’ ಎಂದು ರೈತ ಓಂಕಾರ ಮೇತ್ರೆ ನುಡಿಯುತ್ತಾರೆ.
ಮುಂಗಾರು ಬಿತ್ತನೆ ಕಾಲದಲ್ಲಿ ಎಲ್ಲ ರೈತ ಸಂಪರ್ಕ ಕೇಂದ್ರಗಳಲ್ಲಿ ಬಿತ್ತನೆ ಬೀಜ ಕೊರತೆ ಉಂಟಾಗಿತ್ತು. ಹೀಗಾಗಿ ಖಾಸಗಿ ಬೀಜ ಮಾರಾಟ ಅಂಗಡಿಗಳಿಂದ ದುಬಾರಿ ಬೆಲೆಗೆ ಬೀಜ ಖರೀದಿಸಿ ಬಿತ್ತನೆ ಮಾಡಲಾಗಿದೆ. ಬೆಳೆಯಲ್ಲಿ ಕಳೆ ತೆಗೆಯಲು ಮಹಿಳಾ ಕಾರ್ಮಿಕರಿಗೆ ವರ್ಷಕ್ಕಿಂತಲೂ ಹೆಚ್ಚಿನ ಹಣಕೊಟ್ಟು ಕಳೆ ತೆಗೆಸಲಾಗಿದೆ. ಒಟ್ಟಾರೆ ಈ ವರ್ಷ ಹೆಚ್ಚಿನ ಖರ್ಚು ಮಾಡಿ ಬೆಳೆದ ಬೆಳೆ ಭಾರಿ ಮಳೆಯಿಂದಾಗಿ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ.
ವರದಿ : ರಾಚಯ್ಯ ಸ್ವಾಮಿ