ಸೆ.30ರಂದು ಮುಖ್ಯಮಂತ್ರಿಗಳಿಂದ ವೈಮಾನಿಕ ಸಮೀಕ್ಷೆ
ಬೆಂಗಳೂರು : ಬೀದರ್ ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಬೆಳೆ, ಮನೆ ಹಾಗೂ ಮೂಲಸೌಕರ್ಯಗಳಿಗೆ ಭಾರೀ ಹಾನಿ ಸಂಭವಿಸಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಉಸ್ತುವಾರಿ ಸಚಿವರಾದ ಶ್ರೀ ಈಶ್ವರ ಬಿ. ಖಂಡ್ರೆ ಅವರು ಭಾನುವಾರ ರಾತ್ರಿ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ಅವರನ್ನು ಸಚಿವ ಶ್ರೀ ರಹೀಂಖಾನ್ ಜೊತೆಯಲ್ಲಿ ಭೇಟಿ ಮಾಡಿ, ಜಿಲ್ಲೆಯಲ್ಲಿ ತುರ್ತು ಪರಿಹಾರ, ವಿಶೇಷ ಪ್ಯಾಕೇಜ್ ಹಾಗೂ ವೈಮಾನಿಕ ಸಮೀಕ್ಷೆ ನಡೆಸುವಂತೆ ಮನವಿ ಸಲ್ಲಿಸಿದರು.
ಮುಖ್ಯಮಂತ್ರಿಗಳು ಈ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿ, ಸೆಪ್ಟೆಂಬರ್ 30ರಂದು ವೈಮಾನಿಕ ಸಮೀಕ್ಷೆ ನಡೆಸುವುದಾಗಿ ಭರವಸೆ ನೀಡಿದ್ದಾರೆ ಎಂದು ಸಚಿವ ಈಶ್ವರ ಖಂಡ್ರೆ ಮಾಹಿತಿ ನೀಡಿದರು.
• “ಹವಾಮಾನ ಬದಲಾವಣೆ ಮತ್ತು ಜಾಗತಿಕ ತಾಪಮಾನ ಏರಿಕೆಯ ಪರಿಣಾಮವಾಗಿ ಋತುಮಾನಗಳಲ್ಲಿ ಏರುಪೇರಾಗುತ್ತಿದೆ. ಇದರ ಹೊಡೆತ ಬೀದರ್ ಜಿಲ್ಲೆಗೆ ತೀವ್ರವಾಗಿ ಬಿದ್ದಿದೆ.
• ಜಿಲ್ಲೆಯ ಶೇ.75ರಷ್ಟು ಜನರು ಕೃಷಿ ಅವಲಂಬಿತರಾಗಿದ್ದು, 4.31 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ನಡೆದಿದೆ. ಆದರೆ ಆಗಸ್ಟ್ ತಿಂಗಳಲ್ಲಿ ಸುರಿದ ಮಳೆಯಿಂದ ಶೇ.25ರಷ್ಟು ಬೆಳೆ ಹಾನಿಯಾಗಿತ್ತು. ಈಗ ಸೆಪ್ಟೆಂಬರ್ನಲ್ಲಿ ಸುರಿದ ಮಹಾಮಳೆಯಿಂದ ಹೆಸರು, ಉದ್ದು, ತೊಗರಿ, ಸೋಯಾ ಸೇರಿ ಎಲ್ಲ ಬೆಳೆಗಳೂ ಹಾನಿಗೊಳಗಾಗಿವೆ.
• ಸೇತುವೆಗಳು ಕುಸಿದು ಸಂಚಾರ ಸಂಪರ್ಕ ಕಡಿತವಾಗಿದೆ. ವಿದ್ಯುತ್ ಕಂಬಗಳು ಧರೆಗುರುಳಿ ಅನೇಕ ಗ್ರಾಮಗಳು ವಿದ್ಯುತ್ ಇಲ್ಲದೆ ಅಂಧಕಾರದಲ್ಲಿ ಮುಳುಗಿವೆ. ಶಾಲಾ ಕೊಠಡಿ, ಅಂಗನವಾಡಿ, ಆಸ್ಪತ್ರೆ ಹಾಗೂ ಸರ್ಕಾರಿ ಕಚೇರಿಗಳ ಕಟ್ಟಡಗಳು ಹಾನಿಗೊಳಗಾಗಿವೆ. ಫಲವತ್ತಾದ ಮಣ್ಣು ಕೊಚ್ಚಿಹೋಗಿ ಭೂಮಿ ಸವಳು ಜವಳಾಗಿದೆ.”
ರೈತರ ಸಂಕಷ್ಟ ನಿವಾರಣೆಗೆ ಶೀಘ್ರದಲ್ಲೇ ತುರ್ತು ಪರಿಹಾರ ಮತ್ತು ವಿಶೇಷ ಪ್ಯಾಕೇಜ್ ಘೋಷಿಸಲಾಗುವ ನಿರೀಕ್ಷೆಯಿದೆ ಎಂದು ಸಚಿವರು ತಿಳಿಸಿದ್ದಾರೆ.