ಲೋಕಾಪೂರ ಟು ಧಾರವಾಡ ನೂತನ ರೈಲ್ವೆ ಮಾರ್ಗಕ್ಕೆ ಶೀಘ್ರದಲ್ಲೇ ಹಸಿರು ನಿಶಾನೆ

ಹುಬ್ಬಳ್ಳಿ : ಲೋಕಾಪೂರ ಟು ಧಾರವಾಡ ರೈಲ್ವೆ ಮಾರ್ಗ ನಿರ್ಮಾಣದ ಕುರಿತು ಸೋಮವಾರ ಹುಬ್ಬಳ್ಳಿಯ ಮಾನ್ಯ ಜನರಲ್ ಮ್ಯಾನೇಜರ್ ಅವರ ಕಚೇರಿಯಲ್ಲಿ ಸಂಸದರಾದ ಜಗದೀಶ ಶೆಟ್ಟರ ಮತ್ತು ರಾಜ್ಯ ರೈಲ್ವೆ ಅಭಿವೃದ್ಧಿ ಹೋರಾಟ ಸಮಿತಿ ರಾಜ್ಯಾಧ್ಯಕ್ಷರಾದ ಕುತ್ಬುದ್ದಿನ್ ಕಾಜಿ ಹಾಗೂ ರಾಮದುರ್ಗ ರೈಲು ಹೋರಾಟ ಕ್ರಿಯಾ ಸಮಿತಿ ಮುಖಂಡರುಗಳು ಸಭೆ ನಡೆಸಿ ಸಮಗ್ರವಾಗಿ ಚರ್ಚಿಸಿದರು.

ಸಭೆಯ ನಂತರ ಮಾತನಾಡಿದ ಕುತ್ಬುದ್ದಿನ್ ಕಾಜಿಯವರು “ಮಾಜಿ ಮುಖ್ಯಮಂತ್ರಿಗಳು ಹಾಗೂ ಬೆಳಗಾವಿ ಜಿಲ್ಲೆಯ ಸಂಸದರಾದ ಮಾನ್ಯ ಜಗದೀಶ ಶೆಟ್ಟರ್ ಅವರು ಲೋಕಾಪೂರ ಟು ಧಾರವಾಡ ನೂತನ ರೈಲ್ವೆ ಮಾರ್ಗ ಅನುಷ್ಠಾನಕ್ಕಾಗಿ ಪ್ರಾಮಾಣಿಕವಾಗಿ ಶ್ರಮಿಸುತ್ತಿದ್ದಾರೆ. ಇವತ್ತು ಅವರ ನೇತೃತ್ವದಲ್ಲಿ ಹುಬ್ಬಳ್ಳಿಯ ಜನರಲ್ ಮ್ಯಾನೇಜರ್ ಅವರ ಜತೆ ಸಭೆ ನಡೆಯಿತು. ಸಭೆಯಲ್ಲಿ ರೈಲ್ವೆ ಇಲಾಖೆ ಮಹಾ ವ್ಯಸ್ಥಾಪಕರಿಗೆ ಈ ಯೋಜನೆ ಅನುಷ್ಠಾನಕ್ಕೆ ತರಲು ಅವರು ಒತ್ತಾಯಿಸಿದ್ದಾರೆ. ಆದ್ದರಿಂದ ನಮ್ಮ ಭಾಗದ ಎಲ್ಲ ಹಾಲಿ – ಮಾಜಿ ಶಾಸಕರು,ಸಂಸದರು,ಜನಪ್ರತಿನಿಧಿಗಳು ಶೆಟ್ಟರ್ ಅವರಿಗೆ ಪಕ್ಷಾತೀತವಾಗಿ ಬೆಂಬಲಿಸಬೇಕು ಎಂದು ಕರೆ ನೀಡಿದರು.

ನಂತರ ಮಾಜಿ ಮುಖ್ಯಮಂತ್ರಿ ಹಾಗೂ ಬೆಳಗಾವಿ ಸಂಸದರಾದ ಜಗದೀಶ ಶೆಟ್ಟರ ಅವರು ಮಾತನಾಡಿ “ ಬಹು ದಿನಗಳ ಬೇಡಿಕೆಯಾದ ಲೋಕಾಪೂರ ಟು ಧಾರವಾಡ ನೂತನ ರೈಲ್ವೆ ಮಾರ್ಗ ನಿರ್ಮಾಣದ ಕುರಿತು ನಾನು ಈಗಾಗಲೇ ಕೇಂದ್ರ ರೈಲ್ವೆ ಸಚಿವ ಅಶ್ವಿನ್ ವೈಷ್ಣವ ಅವರ ಗಮನಕ್ಕೆ ತಂದಿದ್ದೇನೆ.

ಈ ಮಾರ್ಗಕ್ಕಾಗಿ 2019 ರಲ್ಲಿ ನಡೆದ ಸಮೀಕ್ಷೆಯ ವರದಿಯಲ್ಲಿ ಕೆಲವು ಲೋಪಗಳಿದ್ದರಿಂದ ಈ ಯೋಜನೆಗೆ ತಡೆ ನೀಡಲಾಗಿತ್ತು. ಈ ಭಾಗದಲ್ಲಿ ಲಕ್ಷಾಂತರ ಭಕ್ತರು ಬರುವಂತಹ ಗೊಡಚಿ ಈರಣ್ಣ, ಸವದತ್ತಿ ಯಲ್ಲಮ್ಮ ದೇವಿ, ಸುರೇಬಾನದ ಶಬರಿ ಆಶ್ರಮದಂತಹ ಪ್ರಸಿದ್ಧ ಐತಿಹಾಸಿಕ ಕ್ಷೇತ್ರಗಳಿವೆ. ಅದರ ಜತೆಗೆ ಸಿಮೆಂಟ್ ಹಾಗೂ ಸಕ್ಕರೆ ಕಾರ್ಖಾನೆಗಳಿವೆ. ಇದು ಅತ್ಯಂತ ಜನನಿಬಿಡ ಪ್ರದೇಶವಾಗಿದೆ ಮತ್ತು ಈ ಭಾಗದ ಸಮಗ್ರ ಅಭಿವೃದ್ಧಿಗೆ ನೂತನ ರೈಲ್ವೆ ಮಾರ್ಗದ ಅವಶ್ಯಕತೆ ಇದೆ.

ಆದ್ದರಿಂದ ನಾನು ಈ ಎಲ್ಲ ವಿಷಯವನ್ನು ಈಗಾಗಲೇ ರೈಲ್ವೆ ಸಚಿವ ಅಶ್ವಿನ್ ವೈಷ್ಣವ ಅವರ ಗಮನಕ್ಕೆ ತಂದಿದ್ದೇನೆ ಅದರ ಜೊತೆ ಇವತ್ತು ನಡೆದ ಸಭೆಯಲ್ಲಿ ಜನರಲ್ ಮ್ಯಾನೇಜರ್ ಅವರೊಡನೆ ಇದರ ಬಗ್ಗೆ ಕೂಲಂಕುಷವಾಗಿ ಚರ್ಚಿಸಿದ್ದೇವೆ.

ಸಮಗ್ರ ಚರ್ಚೆಯ ನಂತರ ಜನರಲ್ ಮ್ಯಾನೇಜರ್ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಲೋಕಾಪೂರ ಟು ಧಾರವಾಡ ರೈಲ್ವೆ ಮಾರ್ಗದ ಮರು ಸಮೀಕ್ಷೆ ನಡೆಸಲು ತಿರ್ಮಾನಿಸಿ ಈ ಮಾರ್ಗ ನಿರ್ಮಾಣಕ್ಕೆ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ ಎಂದು ಭರವಸೆ ನೀಡಿದ್ದಾರೆ.

ಮರು ಸಮೀಕ್ಷೆಯ ನಂತರ ಈ ಯೋಜನೆಗೆ ಹಸಿರು ನಿಶಾನೆ ಸಿಗುವ ದಟ್ಟ ಸಾಧ್ಯತೆಗಳಿವೆ. ಈ ಯೋಜನೆಗೆ ನನ್ನ ಸಂಪೂರ್ಣ ಸಹಮತವಿದೆ ಆದಷ್ಟು ಬೇಗ ಈ ಮಾರ್ಗ ಕಾರ್ಯ ರೂಪಕ್ಕೆ ಬರಲಿ ಎಂದು ಸಂಸದ ಜಗದೀಶ ಶೆಟ್ಟರ ಅವರು ಹೇಳಿದರು.

ಈ ಸಂದರ್ಭದಲ್ಲಿ ರಾಜ್ಯ ರೈಲ್ವೆ ಅಭಿವೃದ್ಧಿ ಹೋರಾಟ ಸಮಿತಿ ರಾಜ್ಯಾಧ್ಯಕ್ಷರಾದ ಕುತ್ಬುದ್ದಿನ್ ಕಾಜಿ, ರಾಮದುರ್ಗ ರೈಲು ಹೋರಾಟ ಕ್ರಿಯಾ ಯೋಜನೆ ಮುಖಂಡರುಗಳಾದ ಗೈಬು ಜೈನೆಖಾನ, ಶಫಿ ಬೆಣ್ಣಿ, ಎಂ ಕೆ ಯಾದವಾಡ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ವರದಿ : md ಸೋಹೆಲ್ ಬೈರಕದಾರ್

error: Content is protected !!