ಕೊಪ್ಪ ಪಿಎಸ್ಐ ಬಸವರಾಜ್ ತಮ್ಮದೇ ಠಾಣೆಯ ಮಹಿಳಾ ಪೊಲೀಸ್ ಸಿಬ್ಬಂದಿಗೆ ಲೈಂಗಿಕ ಕಿರುಕುಳ ನೀಡಿರುವ ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೇ ಮತ್ತಷ್ಟು ಮಹಿಳಾ ಪೊಲೀಸರು ಇದೀಗ ತಮಗಾದ ಕಿರುಕುಳದ ಬಗ್ಗೆ ಮೇಲಾಧಿಕಾರಿಗಳ ಭೇಟಿಗೆ ಮುಂದಾಗಿದ್ದು, ಇಂದು ಮತ್ತೆ ಮೂವರು ಮಹಿಳಾ ಪೊಲೀಸ್ ಸಿಬ್ಬಂದಿಗಳು ಕೊಪ್ಪ ಡಿವೈಎಸ್‌ಪಿಯವರ ಬಳಿ ತೆರಳಿ ತಮ್ಮ ಅಳಲು ತೋಡಿಕೊಂಡಿದ್ದಾರೆ ಎನ್ನಲಾಗಿದೆ.
ಕೊಪ್ಪ ಡಿವೈಎಸ್‌ಪಿ ಕಚೇರಿಯಲ್ಲಿ ಸದ್ಯ ಮಹಿಳಾ ಪೇದೆಗಳಿಗೆ ಕೌನ್ಸೆಲಿಂಗ್ ನಡೆಸಲಾಗುತ್ತಿದೆ. ಮೂವರು ಮಹಿಳಾ ಸಿಬ್ಬಂದಿಗಳಿಂದ ಡಿವೈಎಸ್‌ಪಿ ಮಾಹಿತಿ ಕಲೆ ಹಾಕುತ್ತಿದ್ದಾರೆ. ಕೊಪ್ಪ ಡಿವೈಎಸ್‌ಪಿ ಹಾಗೂ ಮಹಿಳಾ ಕೌನ್ಸೆಲಿಂಗ್ ತಜ್ಞರು ವಿಚಾರಣೆ ನಡೆಸುತ್ತಿದ್ದಾರೆ. ಪಿಎಸ್ಐ ಬಸವರಾಜು ಕಿರುಕುಳದಿಂದ ಬೇಸತ್ತಿರುವ ಮಹಿಳಾ ಸಿಬ್ಬಂದಿಗಳು ಮೇಲಧಿಕಾರಿಗಳ ಮೊರೆ ಹೋಗಿದ್ದಾರೆ. ಕಳೆದ 2 ದಿನಗಳ ಹಿಂದೆ ಮಹಿಳಾ ಪೇದೆ ಆತ್ಮಹತ್ಯೆಗೆ ಯತ್ನಿಸಿದ ನಂತರ ಇದೀಗ ಮತ್ತೆ ಕೆಲವರು ತಮ್ಮ ನೋವು ಹೇಳಿಕೊಂಡಿರುವುದಾಗಿ ತಿಳಿದುಬಂದಿದೆ.
ಈ ನಡುವೆ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಯತ್ನಿಸುವಾಗ ಸಿಬ್ಬಂದಿಗಳಿಂದ ರಕ್ಷಿಸಲ್ಪಟ್ಟ ಮಹಿಳಾ ಪೊಲೀಸ್ ಕಾನ್ ಸ್ಟೇಬಲ್ ಇಂದು ಮತ್ತೆ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಸದ್ಯ ಎಲ್ಲರ ದೂರು ಕುರಿತು ಮಾಹಿತಿ ಕಲೆ ಹಾಕುತ್ತಿರುವ ಹಿರಿಯ ಅಧಿಕಾರಿಗಳು ಸಮಸ್ಯೆ ಆಲಿಸುತ್ತಿದ್ದಾರೆ. ಈ ನಡುವೆ ಮೇಲಧಿಕಾರಿಗಳ ಸೂಚನೆ ಮೇರೆಗೆ ಡೆತ್ ನೋಟ್ ನಾಶಪಡಿಸಿರುವ ಆರೋಪವೂ ಕೇಳಿಬಂದಿದ್ದು, ಪಿಎಸ್ಐ ಬಸವರಾಜ್ ಈ ಹಿಂದೆ ಕೆಲಸ ಮಾಡಿದ್ದ ಹಲವು ಠಾಣೆಗಳಲ್ಲೂ ಕೆಲ ಮಹಿಳಾ ಸಿಬ್ಬಂದಿಗಳಿಗೆ ಕಿರುಕುಳ ನೀಡಿರುವ ಆರೋಪವಿತ್ತು ಎನ್ನಲಾಗಿದೆ.
ವರದಿ ಸದಾನಂದ ಎಂ ಹೆಚ್